More

    ಬಿತ್ತಿದ ಜಮೀನು ಜಲಾವೃತ

    ಡಂಬಳ: ಮಂಗಳವಾರ ಸಂಜೆ ಸುರಿದ ಮಳೆಯಿಂದಾಗಿ ಡಂಬಳ ಹೋಬಳಿ ವ್ಯಾಪ್ತಿಯಲ್ಲಿ ಜಮೀನುಗಳು ಜಲಾವೃತವಾಗಿವೆ. ಇದರಿಂದಾಗಿ 20 ದಿನಗಳ ಹಿಂದೆ ಬಿತ್ತಿದ್ದ ಗೋಧಿ, ಕಡಲೆ, ಜೋಳದ ಬೀಜಗಳಿಗೆ ತೇವಾಂಶ ಹೆಚ್ಚಳವಾಗಿ ಭೂಮಿಯಲ್ಲೇ ಕೊಳೆಯತೊಡಗಿವೆ.

    ಡೋಣಿ, ಬರದೂರ, ಮುರಡಿ, ಯಕ್ಲಾಸಪುರ, ಹೈತಾಪುರ, ಹಳ್ಳಿಗುಡಿ, ಹಳ್ಳಿಕೇರಿ, ಹಿರೇವಡ್ಡಟ್ಟಿ, ತಾಮ್ರಗುಂಡಿ, ಹಾರೋಗೇರಿ, ಮೇವುಂಡಿ, ಪೇಠಾಲೂರು, ಜಂತ್ಲಿ-ಶಿರೂರ, ರಾಮನೇಹಳ್ಳಿಯಲ್ಲಿ ಭಾರಿ ಮಳೆಯಾಗಿದೆ. 3150 ಹೆಕ್ಟೇರ್ ಕಡಲೆ , 2110 ಹೆಕ್ಟೇರ್ ಬಿಳಿ ಜೋಳ, 625 ಹೆಕ್ಟೇರ್ ಸೂರ್ಯಕಾಂತಿ, 285 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಲಾಗಿದೆ.

    ಹಿಂಗಾರು ಹಂಗಾಮಿನಲ್ಲಿ 40000 ಹೆಕ್ಟೇರ್​ಪ್ರದೇಶದಲ್ಲಿ ಬಿತ್ತನೆ ಗುರಿ ಪೈಕಿ ಸದ್ಯ 6,070 ಹೆಕ್ಟೇರ್​ನಲ್ಲಿ ಮಾತ್ರ ಬಿತ್ತನೆಯಾಗಿದೆ. ಸತತ ಮಳೆಯಿಂದ ಕೆಲವರು ಬಿತ್ತನೆ ಮಾಡಿಲ್ಲ. ಮಂಗಳವಾರ ಸುರಿದ ಮಳೆಯಿಂದ ಬಹುತೇಕ ಜಮೀನುಗಳ ಮಣ್ಣು ಕೊಚ್ಚಿ ಹೋಗಿದೆ. ಕಟಾವಿಗೆ ಬಂದ ಮೆಕ್ಕೆಜೋಳ, ಉಳ್ಳಾಗಡ್ಡಿ ಬೆಳೆಗಳು ಜಲಾವೃತವಾಗಿವೆ.

    ಬಿತ್ತನೆ ಬೀಜ, ಗೊಬ್ಬರ, ಭೂಮಿ ಹದಗೊಳಿಸುವಿಕೆ ಸೇರಿ ಎಕರೆಗೆ 10ರಿಂದ 15 ಸಾವಿರ ರೂ. ವ್ಯಯಿಸಲಾಗಿದೆ. ಆದರೆ, ಈಗ ಮಳೆಯಿಂದ ಬಿತ್ತನೆ ಮಾಡಿದ ಬೀಜಗಳು ಹೊಲದಲ್ಲಿ ಕೊಳೆಯುತ್ತಿವೆ. ಮುಂಗಾರಿನ ಸೂರ್ಯಕಾಂತಿ, ಬಿಟಿ ಹತ್ತಿ, ಶೇಂಗಾ, ಉಳ್ಳಾಗಡ್ಡಿ, ಮೆಕ್ಕೆಜೋಳ ಬೆಳೆಗಳು ಸತತ ಮಳೆಯಿಂದ ಕೊಳೆರೋಗ ತಗುಲಿ ಹಾಳಾಗಿವೆ. ಸರ್ಕಾರ ಎಕರೆಗೆ 50 ಸಾವಿರ ರೂ. ಬೆಳೆ ಹಾನಿ ಪರಿಹಾರ ನೀಡಬೇಕು ಎಂದು ಈ ಭಾಗದ ರೈತರು ಆಗ್ರಹಿಸಿದ್ದಾರೆ.

    ಮುಂಗಾರಿನ ಬೆಳೆಗಳಿಗೆ ನಾನಾ ರೋಗಗಳಿಂದ ನೆಲಕಚ್ಚಿವೆ. ಹಿಂಗಾರಿನ ಬೆಳೆಗಳಾದರೂ ಕೈ ಹಿಡಿದಾವು ಎನ್ನುತ್ತಿರುವಾಗಲೇ ಬಿತ್ತಿ ಬಂದಿದ್ದ ಜೋಳ, ಗೋಧಿ, ಕಡಲೆ, ಕುಸುಬಿ ಬೀಜಗಳು ಹೊಲದಲ್ಲೇ ಕೊಳೆತಿವೆ. ಸಾಲ ತೀರಿಸುವುದು, ಹೊಟ್ಟೆ ತುಂಬಿಸಿಕೊಳ್ಳುವುದು ಹೇಗೆ ಎಂಬುದೇ ತಿಳಿಯುತ್ತಿಲ್ಲ.

    | ಸಿದ್ದಪ್ಪ ಆದಮ್ಮನವರ, ಡಂಬಳ ಗ್ರಾಮದ ರೈತ

    ಭೂಮಿಯಲ್ಲಿ ತೇವಾಂಶ ಹೆಚ್ಚಳದಿಂದ ಹಿಂಗಾರು ಹಂಗಾಮಿನಲ್ಲಿ ಬಿತ್ತಿದ್ದ ಕಡಲೆ, ಗೋಧಿ, ಬಿಳಿ ಜೋಳದ ಬೀಜಗಳು ಭೂಮಿಯಲ್ಲೇ ಕೊಳೆಯುತ್ತಿವೆ. ಇನ್ನು ಕೆಲವು ರೈತರು ಬಿತ್ತನೆ ಮಾಡದೆ ಹೊಲಗಳನ್ನು ಹಾಗೆಯೇ ಬಿಟ್ಟಿದ್ದಾರೆ. ಬೆಳೆ ಹಾನಿ ಸರ್ವೆ ಮಾಡಲಾಗುವುದು.

    | ಎಸ್.ಬಿ. ರಾಮೇನಹಳ್ಳಿ, ಡಂಬಳ ರೈತ ಸಂಪರ್ಕ ಕೇಂದ್ರ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts