More

    ಏಕಾಏಕಿ ತರಕಾರಿ ದರ ಪಾತಾಳಕ್ಕೆ

    ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ

    ನಗರದ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ಬದನೆಕಾಯಿ, ಮೆಣಸಿನಕಾಯಿ ಹಾಗೂ ಟೊಮ್ಯಾಟೊ ಬೆಲೆ ಏಕಾಏಕಿ ಕುಸಿತ ಕಂಡಿದ್ದು, ಬೆಳೆಗಾರರನ್ನು ಕಂಗಾಲಾಗಿಸಿದೆ.

    ಕಳೆದ ವಾರ ಮಾರುಕಟ್ಟೆಯಲ್ಲಿ 15 ಕೆಜಿಯ ಒಂದು ಬಾಕ್ಸ್ ಬದನೆಕಾಯಿ 800 ರೂಪಾಯಿ, 25 ಕೆಜಿಯ ಒಂದು ಬಾಕ್ಸ್ ಟೊಮ್ಯಾಟೊ 200ರಿಂದ 250 ರೂಪಾಯಿ ಮತ್ತು ಮೆಣಸಿನಕಾಯಿ 30 ರೂಪಾಯಿಗೆ ಒಂದು ಕೆಜಿ ಮಾರಾಟವಾಗಿತ್ತು. ಆದರೆ, ಈ ವಾರ ಬದನೆಕಾಯಿ 100ರಿಂದ 150 ರೂಪಾಯಿ, ಟೊಮ್ಯಾಟೊ 30ರಿಂದ 40ರೂಪಾಯಿ ಹಾಗೂ ಮೆಣಸಿನಕಾಯಿ ಕೆಜಿಗೆ 10 ರೂಪಾಯಿಯಂತೆ ಮಾರಾಟವಾಗುತ್ತಿದೆ. ದರ ಕುಸಿದರೂ ತರಕಾರಿಯನ್ನು ಕೊಳ್ಳುವವರಿಲ್ಲದಂತಾಗಿದ್ದು, ರೈತರು ಕಂಗಾಲಾಗಿದ್ದಾರೆ.

    ಒಂದು ಎಕರೆಯಲ್ಲಿ ಬದನೆಕಾಯಿ ಬೆಳೆಯಲು ಬೀಜ, ಗೊಬ್ಬರ, ಕೂಲಿ ಕಾರ್ವಿುಕರ ಖರ್ಚು ಹಾಗೂ ಮಾರುಕಟ್ಟೆಗೆ ಸಾಗಾಟ ಸೇರಿ 50 ಸಾವಿರ ರೂಪಾಯಿ ಖರ್ಚು ಬರುತ್ತದೆ. ಮಾರುಕಟ್ಟೆಯಲ್ಲಿ ಕನಿಷ್ಠ 800 ರೂಪಾಯಿಗೆ ಒಂದು ಬಾಕ್ಸ್ ಮಾರಾಟವಾದರೆ ಬೆಳೆಗೆ ಮಾಡಿದ ಖರ್ಚು ತೆಗೆದು ಒಂದಷ್ಟು ಲಾಭ ಬರುತ್ತದೆ. ಟೊಮ್ಯಾಟೊ ಬೆಳೆಯಲು ಒಂದು ಎಕರೆಗೆ 25 ಸಾವಿರ ರೂಪಾಯಿ ಖರ್ಚು ಬರುತ್ತದೆ. ಕನಿಷ್ಠ 200 ರೂಪಾಯಿಗೆ ಒಂದು ಬಾಕ್ಸ್​ನಂತೆ ಮಾರಾಟವಾದರೆ ಬೆಳೆಗಾರರಿಗೆ ಅನುಕೂಲವಾಗುತ್ತದೆ. ಮೆಣಸಿನಕಾಯಿ ಬೆಳೆಯಲು ಸಹ 50 ಸಾವಿರ ರೂಪಾಯಿ ಖರ್ಚು ಬರುತ್ತದೆ. ಮಾರುಕಟ್ಟೆಯಲ್ಲಿ ಕೆಜಿಗೆ ಕನಿಷ್ಠ 25 ರೂಪಾಯಿ ದೊರೆತರೆ ಅನುಕೂಲವಾಗುತ್ತದೆ. ‘ಸದ್ಯ ವ್ಯಾಪಾರಸ್ಥರು ಕೇಳುವ ಬೆಲೆಗೆ ಉತ್ಪನ್ನಗಳನ್ನು ಮಾರಾಟ ಮಾಡಿದರೆ ಸಾಗಣೆ ವೆಚ್ಚವೂ ದೊರೆಯುವುದಿಲ್ಲ. ಕರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ಕಳೆದ ಬಾರಿಯೂ ಬೆಳೆಗಳನ್ನು ತಿಪ್ಪೆಗೆ ಚೆಲ್ಲಿದ್ದೇವೆ. ಈ ಬಾರಿಯಾದರೂ ಉತ್ತಮ ದರ ಸಿಗುತ್ತದೆ ಎಂದು ನಂಬಿದ್ದೇವು. ಆದರೆ, ಏಕಾಏಕಿ ಬೆಲೆ ಕುಸಿತ ಆರ್ಥಿಕ ಸಂಕಷ್ಟ ತಂದೊಡ್ಡಿದೆ’ ಎಂಬುದು ರೈತರು ಅಳಲು.

    ಖರೀದಿಗೂ ಬರುತ್ತಿಲ್ಲ: ರಾಣೆಬೆನ್ನೂರ ತಾಲೂಕಿನಲ್ಲಿ ಬೆಳೆದ ಮುಳ್ಳ ಬದನೆಕಾಯಿ, ಜವಾರಿ ಟೊಮ್ಯಾಟೊ, ಮೆಣಸಿನಕಾಯಿಗೆ ಬೆಂಗಳೂರು, ದಾವಣಗೆರೆ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯ ಮಾರುಕಟ್ಟೆಗಳಲ್ಲಿ ಉತ್ತಮ ಬೇಡಿಕೆಯಿದೆ. ಆದರೀಗ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಿಂದ ಸಾಗಣೆ ವೆಚ್ಚ ಸರಿದೂಗಿಸಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣದಿಂದ ಆ ಭಾಗದ ಖರೀದಿದಾರರು ರಾಣೆಬೆನ್ನೂರ ಎಪಿಎಂಸಿಗೆ ಬರುತ್ತಿಲ್ಲ.

    ಸಾವಿರಾರು ರೂಪಾಯಿ ಖರ್ಚು ಮಾಡಿ ನೀರಾವರಿ ಮಾಡಿಕೊಂಡು ಬದನೆಕಾಯಿ, ಟೊಮ್ಯಾಟೊ ಬೆಳೆದಿದ್ದೇವೆ. ಆದರೆ, ಮಾರುಕಟ್ಟೆಯಲ್ಲಿ ಏಕಾಏಕಿ ಬೆಲೆ ಕುಸಿತ ಕಂಡಿದೆ. ಅಲ್ಲದೆ, ಕಡಿಮೆ ಬೆಲೆಗೆ ಮಾರಾಟ ಮಾಡುತ್ತೇವೆಂದರೂ ಖರೀದಿದಾರರು ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ಬದನೆಕಾಯಿ ಒಣಗಿ ಹೋಗುತ್ತಿವೆ. ಟೊಮ್ಯಾಟೊ ಕೊಳೆಯುತ್ತಿವೆ. ಹೀಗಾದರೆ ಬೆಳೆಗಾರರ ಗತಿ ಏನು…?

    | ಚಂದ್ರಪ್ಪ ಎನ್., ಗಂಗಾಪುರ ಗ್ರಾಮದ ಬದನೆಕಾಯಿ ಬೆಳೆಗಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts