More

    ಬಿತ್ತನೆ ಬೀಜಕ್ಕೆ ಏಕರೂಪದ ಬೆಲೆ

    ಶಿರಸಿ: ಯಾವುದೇ ಕಂಪನಿಯ ಬಿತ್ತನೆ ಬೀಜಗಳಿದ್ದರೂ ಮುಂದಿನ ವರ್ಷದಿಂದ ಏಕರೂಪದ ಬೆಲೆ ನಿಗದಿ ಮಾಡಲು ಕ್ರಮ ಕೈಗೊಳ್ಳುವುದಾಗಿ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಭರವಸೆ ನೀಡಿದರು.

    ಕೋವಿಡ್-19 ನಿಮಿತ್ತ ಜಿಲ್ಲಾ ಮಟ್ಟದಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ನಗರದ ಅಂಬೇಡ್ಕರ್ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯದ ಅನ್ನದಾತನಿಗೆ ಬಿತ್ತನೆ ಬೀಜ ಹಾಗೂ ಗೊಬ್ಬರ ವಿತರಣೆಯಲ್ಲಿ ವ್ಯತ್ಯಯ ಮಾಡುವುದಿಲ್ಲ. ಬಿತ್ತನೆ ಬೀಜಗಳ ಅಕ್ರಮ ದಾಸ್ತಾನು ಮಾಡುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು. ಕಳಪೆ ಬೀಜ ಹಾಗೂ ಔಷಧ ವಿತರಣೆಗೆ ಮುಂದಾದರೆ ಕಠಿಣ ಕ್ರಮ ವಹಿಸಬೇಕು. ಐಸಿಸಿಎ ನೋಂದಣಿ ಇಲ್ಲದ ಔಷಧಗಳನ್ನು ವಿತರಿಸುವ ಅಂಗಡಿಗಳನ್ನು ಸೀಜ್ ಮಾಡಿ, ಅಪರಾಧ ಪ್ರಕರಣ ದಾಖಲಿಸಬೇಕು ಎಂದರು.

    ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಮಾತನಾಡಿ, ಬೆಳೆ ವಿಮೆ ವಿಚಾರದಲ್ಲಿ ಸರ್ಕಾರದಿಂದ ಪಾರದರ್ಶಕ ನಿರ್ದೇಶನ ಬೇಕು. ವಿಮಾ ಕಂತು ತುಂಬಿದ ರೈತರಿಗೆ ಉತ್ತರದಾಯಿತ್ವ ಯಾರು? ಎಂಬುದು ಅಂತಿಮ ಆಗಬೇಕು. ಜಿಲ್ಲೆಯಲ್ಲಿ ಹಣ್ಣು, ಹೂವು, ಕೃಷಿ, ತೋಟಗಾರಿಕೆ ಕ್ಷೇತ್ರದ ಉತ್ಪನ್ನಕ್ಕೆ ಭಾರಿ ಹಾನಿಯಾಗಿದೆ. ಹಾಗಾಗಿ ಕೃಷಿ ಕ್ಷೇತ್ರ ಪುನರುಜ್ಜೀವನ ಮಾಡಬೇಕು ಎಂದರು. ಕೊರತೆಯಿರುವ ವಸ್ತುಗಳ ಬಗ್ಗೆ ಸರ್ಕಾರಕ್ಕೆ ಮಾಹಿತಿ ಸಲ್ಲಿಸಬೇಕು. ಈಗಾಗಲೇ ಯಾವ ಬೆಳೆ ಹಾನಿಗೊಳಗಾಗಿದೆ? ಮುಂದಿನ ಕೃಷಿ ಚಟುವಟಿಕೆಗೆ ಸರ್ಕಾರದ ಸಹಾಯ ಏನೆಂಬ ಮಾಹಿತಿ ನೀಡಬೇಕು ಎಂದು ಹೇಳಿದರು.

    ಭಟ್ಕಳ ಶಾಸಕ ಸುನೀಲ ನಾಯ್ಕ ಮಾತನಾಡಿ, ಭಟ್ಕಳದಲ್ಲಿ ಅಂದಾಜು 5 ಸಾವಿರ ಹೆ. ಕೃಷಿ ಭೂಮಿಯಿದ್ದು, 1700 ಕ್ವಿಂ. ಬಿತ್ತನೆ ಬೀಜದ ಬೇಡಿಕೆಯಿದೆ. ಈಗಾಗಲೇ 1 ಸಾವಿರ ಕ್ವಿಂ. ಬೀಜ ಪೂರೈಕೆಯಾಗಿದ್ದು, ಉಳಿದದ್ದು ತಕ್ಷಣ ಬಿಡುಗಡೆ ಮಾಡಬೇಕು. ಹೆಚ್ಚಿನ ಪ್ರಮಾಣದಲ್ಲಿ ತಾಡಪಾಲ್ ವಿತರಿಸುವ ಕಾರ್ಯ ಆಗಬೇಕು. ಜಿಲ್ಲೆಯ ಕಲ್ಲಂಗಡಿ ಬೆಳೆಗಾರರಿಗೆ ಪರಿಹಾರ ಒದಗಿಸಬೇಕು ಎಂದರು.

    ಕಾರವಾರ ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ಮೀನುಗಾರರು ಸಂಕಷ್ಟದಲ್ಲಿದ್ದು, ನಿಯಮಾನುಸಾರ ಪರ್ಶಿಯನ್ ಬೋಟ್ ಆರಂಭಿಸಲು ಜಿಲ್ಲಾಡಳಿತ ಅನುಮತಿ ನೀಡಬೇಕು ಎಂದರು.

    ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೊಟ್ನೇಕರ್ ಮಾತನಾಡಿ, ರಸಗೊಬ್ಬರ ಕಳ್ಳದಂಧೆಯನ್ನು ನಿಲ್ಲಿಸಬೇಕು ಎಂದರು.

    ಕೃಷಿ ಇಲಾಖೆ ಜಂಟಿ ನಿರ್ದೇಶಕ ಹೊನ್ನಪ್ಪ ಗೌಡ ಮಾತನಾಡಿ, ಜಿಲ್ಲಾಧಿಕಾರಿ ಕಚೇರಿಯಿಂದ ಪಾಸ್ ಪಡೆದು ರೈತ ಸಂಪರ್ಕ ಕೇಂದ್ರ, ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಆರಂಭಿಸಲಾಗಿದೆ. 1200 ಹೆ. ಪ್ರದೇಶದಲ್ಲಿ ಕೃಷಿ ಕಾರ್ಯ ನಡೆಸುವ ಉದ್ದೇಶಕ್ಕೆ ರೈತರಿಗೆ ರಸಗೊಬ್ಬರ, ಕೀಟನಾಶಕ ನೀಡಲಾಗಿದೆ. ಅಕ್ಕಿ ಗಿರಣಿಗಳನ್ನು ಆರಂಭಿಸಿ ಸಂಬಂಧಪಟ್ಟ ರೈತರಿಗೆ ಭತ್ತ ಸಾಗಾಟಕ್ಕೆ ಅನುಮತಿ ನೀಡಲಾಗಿದೆ. ಜಿಲ್ಲಾ ವ್ಯಾಪ್ತಿಯಲ್ಲಿ ಬಿತ್ತನೆ ಬೀಜ ಸಂಬಂಧ 9,800 ಕ್ವಿಂ. ಬೇಡಿಕೆಯಿದ್ದು, 6,200 ಕ್ವಿಂ. ಈಗಾಗಲೇ ಸಂಗ್ರಹವಿದೆ. ಉಳಿದ ಬೀಜಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ರಸಗೊಬ್ಬರ ಸಂಗ್ರಹವಿದೆ ಎಂದು ಸಚಿವರಿಗೆ ಮಾಹಿತಿ ನೀಡಿದರು.

    ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಅಶೀಸರ, ಎನ್​ಡಬ್ಲು್ಯಕೆಆರ್​ಟಿಸಿ ಅಧ್ಯಕ್ಷ ವಿ.ಎಸ್. ಪಾಟೀಲ, ತಾಪಂ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ಜಿಲ್ಲಾಧಿಕಾರಿ ಕೆ. ಹರೀಶಕುಮಾರ, ಜಿಪಂ ಸಿಇಒ ಎಂ.ರೋಷನ್, ಎಸ್ಪಿ ಶಿವಪ್ರಕಾಶ ದೇವರಾಜ, ಶಿರಸಿ ಉಪವಿಭಾಗಾಧಿಕಾರಿ ಈಶ್ವರ ಉಳ್ಳಾಗಡ್ಡಿ, ಜಿಪಂ ಸದಸ್ಯರು ಇತರರಿದ್ದರು.

    ರೈತರು ಹಾಗೂ ಗ್ರಾಮೀಣ ಭಾಗದ ಕಾರ್ವಿುಕರಿಗೆ ಹೆಚ್ಚಾಗಿ ಕಾಡುತ್ತಿರುವ ಮಂಗನ ಕಾಯಿಲೆ ಬಗ್ಗೆಯೂ ಮುತುವರ್ಜಿ ವಹಿಸಬೇಕು. ನಿರ್ಬಂಧಿತ ರಾಸಾಯನಿಕ, ಕೀಟನಾಶಕಗಳನ್ನು ಗೊಬ್ಬರದ ಅಂಗಡಿಗಳಲ್ಲಿ ಮಾರಾಟ ಮಾಡದಂತೆ ಕಠಿಣ ಕ್ರಮವಹಿಸಬೇಕು.

    | ಅನಂತ ಅಶೀಸರ, ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ

    ಬೆಳೆ ವಿಮೆ ಸಂಬಂಧ ರೈತರು- ಇಲಾಖೆ ನಡುವೆ ಗೊಂದಲ ಸೃಷ್ಟಿಯಾಗುತ್ತಿದೆ. ಹೀಗಾಗಿ ಇಡೀ ಬೆಳೆವಿಮೆ ವ್ಯವಸ್ಥೆ ಕೃಷಿ ಇಲಾಖೆ ನಿಯಂತ್ರಣಕ್ಕೆ ನೀಡುವ ಕಾರ್ಯವಾಗಬೇಕು. ಹಾಗಾದರೆ ಮಾತ್ರ ವ್ಯವಸ್ಥಿತವಾಗಿ ಬೆಳೆವಿಮೆ ರೈತರಿಗೆ ಸೇರಲು ಸಾಧ್ಯ.

    – ಕೆ. ಹರೀಶಕುಮಾರ, ಜಿಲ್ಲಾಧಿಕಾರಿ

    ಕೃಷಿ ಉತ್ಪನ್ನ ಖರೀದಿಗೆ ಮನವಿ

    ಶಿರಸಿ: ಇಲ್ಲಿನ ಮಧುಕೇಶ್ವರ ಭತ್ತ ಉತ್ಪಾದಕ ಸೌಹಾರ್ದ ಸಹಕಾರಿ ವ್ಯಾಪ್ತಿಯಲ್ಲಿ ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡಿ ಖರೀದಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಹೆಬ್ಬಾರರ ಮೂಲಕ ಕೃಷಿ ಸಚಿವ ಬಿ.ಸಿ.ಪಾಟೀಲ ಅವರಿಗೆ ಮನವಿ ಸಲ್ಲಿಸಲಾಯಿತು.

    250 ಟನ್ ಭತ್ತ, 550 ಟನ್ ಜೋಳ ಹಾಗೂ 400 ಟನ್ ಬಾಳೆಕಾಯಿ ಬೆಳೆಯಲಾಗಿದ್ದು, ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ರೈತರು ಸಂಕಷ್ಟದಲ್ಲಿದ್ದಾರೆ. ಕೂಡಲೆ ಬೆಳೆಗಳಿಗೆ ಬೆಂಬಲ ಬೆಲೆ ನೀಡಿ ಖರೀದಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

    ಪ್ರತಿಕ್ರಿಯಿಸಿದ ಸಚಿವರು, ರೈತರಿಗೆ ಪೂರಕವಾಗುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. ಸ್ಕೊಡ್​ವೆಸ್ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯ್ಕ, ಮಧುಕೇಶ್ವರ ಭತ್ತ ಉತ್ಪಾದಕ ಸೌಹಾರ್ದ ಸಹಕಾರಿ ಉಪಾಧ್ಯಕ್ಷ ದ್ಯಾಮಣ್ಣ ದೊಡ್ಮನಿ, ಇಒ ಪ್ರಶಾಂತ ನಾಯಕ, ಎಪಿಎಂಸಿ ನಿರ್ದೇಶಕ ಪ್ರಶಾಂತ ಗೌಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts