More

    ಬಿಜೆಪಿ ಸೇವಾ ಪಾಕ್ಷಿಕ 17ರಿಂದ

    ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನದ ಅಂಗವಾಗಿ, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸೂಚನೆಯಂತೆ ಸೆ.17ರಿಂದ ಅ.2ರವರೆಗೆ ‘ಸೇವಾ ಪಾಕ್ಷಿಕ’ ಚಟುವಟಿಕೆಗಳನ್ನು ಆಯೋಜಿಸಲಾಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಹೇಳಿದರು.

    ಸೆ.17ರಂದು ಮೋದಿ, ಸೆ.25 ರಂದು ಪಕ್ಷದ ಸಂಸ್ಥಾಪಕ ದೀನ್‌ದಯಾಳ್ ಉಪಾಧ್ಯಾಯ, ಅ.2ರಂದು ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನದ ಅಂಗವಾಗಿ ಹಲವು ಕಾರ್ಯಕ್ರಮ ಸಂಘಟಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
    ಸೆ. 17ರಂದು ಯುವ ಮೋರ್ಚಾದಿಂದ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ. ದಾನಿಗಳ ವಿವರನ್ನು ಪ್ರತಿ ಆಸ್ಪತ್ರೆಯಲ್ಲಿ ಇರಿಸಿ ವಿವರ ದೊರೆಯುವ ವ್ಯವಸ್ಥೆ ಮಾಡಲಾಗುವುದು. ಆರೋಗ್ಯ ಮೇಳ, ಅಂಗವಿಕಲರಿಗೆ ಕೃತಕ ಅಂಗಾಂಗ ಜೋಡಣೆ ಶಿಬಿರ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
    ಸ್ವಾತಂತ್ರೃ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ನದಿ, ಕೆರೆ, ಬಾವಿಗಳ ಸ್ಪಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡು ಸಸಿಗಳನ್ನು ನೆಡುವರು. 2025ಕ್ಕೆ ಕ್ಷಯ ರೋಗ ಮುಕ್ತ ಭಾರತ ಆಗಬೇಕು ಎನ್ನುವುದು ಮೋದಿ ಅವರ ಸಂಕಲ್ಪವಾಗಿದ್ದು ಕಾರ್ಯಕರ್ತರು, ಜನಪ್ರತಿನಿಧಿಗಳು ತಲಾ ಐವರು ರೋಗಿಗಳಿಗೆ ಮಾರ್ಗದರ್ಶನ, ಚಿಕಿತ್ಸಾ ವ್ಯವಸ್ಥೆ ಕಲ್ಪಿಸಲಿದ್ದಾರೆ ಎಂದರು.
    ನರೇಂದ್ರ ಮೋದಿ ಅವರ ಜೀವನ ಮತ್ತು ಗುರಿ ಕುರಿತು ಸೆ.26ಕ್ಕೆ ಶಿವಗಂಗೋತ್ರಿ ಹಾಗೂ ದಾವಣಗೆರೆಯ ಸರ್‌ಎಂವಿ ಪಿಯು ಕಾಲೇಜಿನಲ್ಲಿ ಪ್ರದರ್ಶನ ಆಯೋಜಿಸಲಾಗಿದೆ. ಜನಕಲ್ಯಾಣ ಯೋಜನೆಗಳ ಕುರಿತ ಪುಸ್ತಕ ಪ್ರದರ್ಶನ ಇರಲಿದೆ ಎಂದು ತಿಳಿಸಿದರು.
    ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಜಗದೀಶ್, ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ, ಶಿವರಾಜ್ ಪಾಟೀಲ್, ಮಾಧ್ಯಮ ವಕ್ತಾರ ಡಿ.ಎಸ್.ಶಿವಶಂಕರ್, ಎಚ್.ಪಿ.ವಿಶ್ವಾಸ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts