More

    ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ

    ಯಲ್ಲಾಪುರ: ಬಿಜೆಪಿ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆಯಾದ ಎರಡೇ ದಿನಗಳಲ್ಲಿ ಅಸಮಾಧಾನ ಸ್ಪೋಟಗೊಂಡಿದ್ದು, ಪಕ್ಷದ ಪದಾಧಿಕಾರಿಯಾಗುವ ನಿರೀಕ್ಷೆ ಹೊಂದಿದ್ದ ಅನೇಕರು ಆಕ್ರೋಶ ಹೊರ ಹಾಕಲಾರಂಭಿಸಿದ್ದಾರೆ. ಇದಕ್ಕೆ ಪೂರಕವೆಂಬಂತೆ ಪಕ್ಷದ ಮುಖಂಡ ಲಕ್ಷ್ಮೀನಾರಾಯಣ ಭಟ್ಟ ತೋಟ್ಮನೆ ಹಾಗೂ ಪ.ಪಂ. ಮಾಜಿ ಸದಸ್ಯೆ ರೇವತಿ ಭಟ್ಟ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

    ಈ ಕುರಿತು ಹೇಳಿಕೆ ನೀಡಿರುವ ಲಕ್ಷ್ಮೀನಾರಾಯಣ ಭಟ್ಟ ತೋಟ್ಮನೆ, ನನ್ನ ರಾಜೀನಾಮೆ ಪತ್ರವನ್ನು ಪಕ್ಷದ ಜಿಲ್ಲಾ ಘಟಕಕ್ಕೆ ರವಾನಿಸಿರುವುದಾಗಿ ತಿಳಿಸಿದ್ದಾರೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದರೂ ನಮಗೆ ಬೆಲೆ ನೀಡಿಲ್ಲ. ಪಕ್ಷದ ಒಳಗಿನ ಕೆಲವು ಕಾಣದ ಕೈಗಳು ಈ ರೀತಿ ಷಡ್ಯಂತ್ರ ಎಸಗಿವೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಹಲವರಿದ್ದರೂ, ಈಗಾಗಲೇ ಬೇರೆ ಬೇರೆ ಹುದ್ದೆ, ಅಧಿಕಾರ ಇದ್ದವರು ಹಾಗೂ ಪಕ್ಷದ ನಿಕಟಪೂರ್ವ ಸಮಿತಿಯಲ್ಲಿ ಪದಾಧಿಕಾರಿಗಳಾಗಿದ್ದವರನ್ನೂ ಮತ್ತೆ ಪದಾಧಿಕಾರಿಯಾಗಿ ನೇಮಕ ಮಾಡಿದೆ. ಇದರಿಂದ ನಮಗೆ ಬೇಸರ ಉಂಟಾಗಿದೆ. ಹಾಗಾಗಿ ರಾಜೀನಾಮೆಯ ನಿರ್ಧಾರಕ್ಕೆ ಬಂದಿದ್ದೇವೆ. ಇನ್ನೂ ಕೆಲವರು ಅಸಮಾಧಾನಗೊಂಡಿದ್ದು, ಪಕ್ಷದಿಂದ ಹೊರಬರುವ ತೀರ್ಮಾನ ಮಾಡಿದ್ದಾರೆ. ಪಕ್ಷಕ್ಕೆ ರಾಜೀನಾಮೆ ನೀಡಿದರೂ, ಸಚಿವ ಹೆಬ್ಬಾರ ಅವರ ಅಭಿಮಾನಿಯಾಗಿ ಸಮಾಜ ಸೇವೆಯಲ್ಲಿ ಮುಂದುವರಿಯುತ್ತೇವೆ ಎಂದರು. ಲಕ್ಷ್ಮೀನಾರಾಯಣ ಭಟ್ಟ ತೋಟ್ಮನೆ ಅವರು ಬಿಜೆಪಿ ಕಾರ್ಯಕರ್ತರಾಗಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಈ ಹಿಂದೆ ಎರಡು ಬಾರಿ ತಾಲೂಕು ಕಾರ್ಯದರ್ಶಿಯಾಗಿ, ಒಂದು ಬಾರಿ ಖಜಾಂಚಿಯಾಗಿದ್ದಾರೆ. ರೇವತಿ ಭಟ್ಟ ಅವರು ಪ.ಪಂ. ಸದಸ್ಯರಾಗಿ, ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts