More

    ಬಿಜೆಪಿಗಿದೆ ತಳಸಮುದಾಯ ಕಳಕಳಿ

    ರಾಯಬಾಗ, ಬೆಳಗಾವಿ: ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವನ್ನು ಸಂವಿಧಾನ, ಮೀಸಲಾತಿ ಮತ್ತು ಅಂಬೇಡ್ಕರ್ ವಿರೋಧಿ ಎಂದು ಟೀಕಿಸುತ್ತಿದ್ದ ವಿರೋಧ ಪಕ್ಷದವರಿಗೆ ಎಸ್ಸಿ ಮತ್ತು ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಿಸುವುದರ ಮೂಲಕ ತಕ್ಕ ಉತ್ತರ ನೀಡಲಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ ಹೇಳಿದರು.
    ಪಟ್ಟಣದ ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆ ಯ ಸಭಾಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಯಬಾಗ ಮತಕ್ಷೇತ್ರದ ಕಾರ್ಯಕರ್ತರ ಸಂಕಲ್ಪ ಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ಕಾರ್ಯಕರ್ತರು ಪ್ರತಿ ಮನೆಗಳಿಗೆ ತಲುಪಿಸುವ ಕೆಲಸ ಮಾಡಬೇಕು ಎಂದರು.

    ರೈತರ ಮಕ್ಕಳಿಗೆ ವಿದ್ಯಾನಿಧಿ, ಕಿಸಾನ್ ಸಮ್ಮಾನ್ ಯೋಜನೆ, ಉಜ್ವಲಾ ಯೋಜನೆ, ಮನೆ ಮನೆಗಳಿಗೆ ನಳ ಸಂಪರ್ಕ, ಎಸ್ಸಿ ಮತ್ತು ಎಸ್ಟಿ ಬಿಪಿಎಲ್ ಪಡಿತರದಾರರಿಗೆ 75 ಯೂನಿಟ್ ಉಚಿತ ವಿದ್ಯುತ್ ಸೇರಿ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ದೇಶ ವಿಶ್ವದಲ್ಲಿ ನಂ.1 ಸ್ಥಾನ ಪಡೆಯುತ್ತದೆ ಎಂದರು. ಕಾರ್ಯಕರ್ತರು ಬೂತ್‌ಮಟ್ಟದಿಂದ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸಲು ಸಿದ್ಧತೆ ಮಾಡಿಕೊಳ್ಳಬೇಕು. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನ ಗಳಿಸಲಿದೆ ಎಂದರು.

    ಶಾಸಕ ಡಿ.ಎಂ.ಐಹೊಳೆ ಮಾತನಾಡಿ, ಪಟ್ಟಣದಲ್ಲಿ ನ.9ರಂದು ಹಮ್ಮಿಕೊಂಡಿರುವ ಸಂಕಲ್ಪ ಯಾತ್ರೆ ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿ ಪಕ್ಷದ ಪ್ರಮುಖರು ಭಾಗವಹಿಸಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.

    ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ರಾಜೇಶ ನೇರ್ಲಿ ಮಾತನಾಡಿ, ಪಕ್ಷದ ಎಲ್ಲ ಕಾರ್ಯಕರ್ತರನ್ನು ಒಗ್ಗೂಡಿಸಿ ಬಿಜೆಪಿ 150 ಸ್ಥಾನಗಳನ್ನು ಗೆಲ್ಲಲು ಪಣತೊಡಬೇಕು. ಸುಮಾರು 50 ಸಾವಿರ ಜನರಿಗೆ ಆಸನದ ವ್ಯವಸ್ಥೆ ಮಾಡಬೇಕು ಎಂದರು. ಮಾಜಿ ಸಂಸದ ಅಮರಸಿಂಹ ಪಾಟೀಲ, ಸಿಬಿಕೆಎಸ್‌ಎಸ್‌ಕೆ ಅಧ್ಯಕ್ಷ ಭರತೇಶ ಬನವಣೆ, ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ದುಂಡಪ್ಪ ಭೆಂಡವಾಡೆ, ಜಿಲ್ಲಾ ಉಪಾಧ್ಯಕ್ಷ ಸದಾನಂದ ಹಳಿಂಗಳಿ, ಮಂಡಲ ಅಧ್ಯಕ್ಷ ಬಸವರಾಜ ಡೊಣವಾಡೆ, ಕೆ.ಎಂ.ಮಡಿವಾಳ, ವಕೀಲ ಎಲ್.ಬಿ.ಚೌಗುಲೆ, ಮಹೇಶ ಭಾತೆ, ಮಲ್ಲಪ್ಪ ಮೈಶಾಳೆ, ರಾಜಶೇಖರ ಖನದಾಳೆ, ರಾಮಚಂದ್ರ ನಿಶಾನಂದಾರ, ತಾತ್ಯಾಸಾಹೇಬ ಕಾಟೆ, ಅಣ್ಣಾಸಾಹೇಬ ಖೆಮಲಾಪೂರೆ, ಸದಾಶಿವ ಘೋರ್ಪಡೆ, ಅರುಣ ಐಹೊಳೆ, ಗಂಗಾಧರ ಮೈಶಾಳೆ, ಅಮಿತ ಜಾಧವ, ಸಂಗಣ್ಣ ದತ್ತವಾಡೆ, ಅಪ್ಪಾಸಾಹೇಬ ಬ್ಯಾಕೂಡೆ ಸೇರಿ ಬಿಜೆಪಿ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts