More

    ಬಿಇಒ ಏಕಪಕ್ಷೀಯ ನಿರ್ಧಾರಕ್ಕೆ ಶಿಕ್ಷಕರ ಅಸಮಾಧಾನ

    ಪಾಂಡವಪುರ: ಶಿಕ್ಷಕರ ನಡುವಿನ ಭಿನ್ನಾಭಿಪ್ರಾಯ ಶಿಕ್ಷಕರ ದಿನಾಚರಣೆ ಅಂಗವಾಗಿ ಶನಿವಾರ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಬಹಿರಂಗಗೊಂಡಿತು. ಕೆಲ ಶಿಕ್ಷಕರು ಬಿಇಒ ಜಿ.ಎ.ಲೋಕೇಶ್ ಅವರ ಏಕಪಕ್ಷೀಯ ನಿರ್ಧಾರಗಳನ್ನು ಖಂಡಿಸಿ ಕ್ರೀಡಾಕೂಟಕ್ಕೆ ತಡೆಯೊಡ್ಡಿದರು.


    ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನದ ಅಂಗವಾಗಿ ಸೆ.5ರಂದು ನಡೆಯುವ ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಶಿಕ್ಷಕರಿಗಾಗಿ ಓಟದ ಸ್ಪರ್ಧೆ, ಗುಂಡು ಎಸೆತ ಸೇರಿದಂತೆ ಹಲವು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.


    ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಸರ್ಕಾರಿ ನೌಕರರ ಸಂಘ ಹಾಗೂ ಸಹ ಶಿಕ್ಷಕರ ಸಂಘ ಪದಾಧಿಕಾರಿಗಳನ್ನು ಕ್ರೀಡಾಕೂಟಕ್ಕೆ ಆಹ್ವಾನಿಸದೆ ಏಕಪಕ್ಷೀಯವಾಗಿ ಆಯೋಜಿಸಲಾಗಿದೆ. ಈ ಬಗ್ಗೆ ಯಾವುದೇ ಪೂರ್ವಭಾವಿ ಸಭೆಗಳನ್ನು ಕರೆದಿಲ್ಲ. ಶಿಕ್ಷಕರ ಸಂಘಗಳ ಪದಾಧಿಕಾರಿಗಳಿಗೆ ಮಾಹಿತಿ ನೀಡದೆ ಶಿಕ್ಷಕರ ಕ್ರೀಡಾಕೂಟ ಆಯೋಜಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಶಿಕ್ಷಕರು ಬಿಇಒ ಅವರನ್ನು ಪ್ರಶ್ನಿಸಿದರು. ಹೀಗಾಗಿ ಕ್ರೀಡಾಕೂಟಕ್ಕೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದ ಪರಿಣಾಮ ಕೆಲಕಾಲ ಕ್ರೀಡಾಕೂಟ ಸ್ಥಗಿತಗೊಂಡಿತು.


    ಬಿಇಒ ಅವರು ಯಾರದ್ದೋ ಒತ್ತಡಕ್ಕೆ ಮಣಿದು ಅವರ ಆಣತಿಯಂತೆ ಈ ರೀತಿ ನಡೆದುಕೊಳ್ಳುತ್ತಿದ್ದಾರೆ. ಬಿಇಒ ಕಚೇರಿಯ ಕಾರ್ಯಕ್ರಮಗಳು, ಸಭೆ, ಸಮಾರಂಭಗಳು ಸೇರಿದಂತೆ ಯಾವುದೇ ಕಾರ್ಯಕ್ರಗಳಿಗೂ ಶಿಕ್ಷಕರ ಸಂಘದ ಪದಾಧಿಕಾರಿಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.


    ಶಿಕ್ಷಕರ ಒಕ್ಕೊರಲಿನ ಪ್ರತಿರೋಧಕ್ಕೆ ಮಣಿದ ಬಿಇಒ ಅವರು ಸ್ಥಳದಲ್ಲೇ ಶಿಕ್ಷಕರ ಸಂಘದ ಪದಾಧಿಕಾರಿಗಳ ಸಭೆ ಕರೆದು ಕ್ರೀಡಾಕೂಟಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿದ ಬಳಿಕ ಶಿಕ್ಷಕರು ಕ್ರೀಡಾಕೂಟ ಮುಂದುವರಿಸಲು ಅವಕಾಶ ಮಾಡಿಕೊಟ್ಟರು.


    ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಶಿಕ್ಷಕರಿಗೆ ನೆರಳಿನ ವ್ಯವಸ್ಥೆ ಕಲ್ಪಿಸಿರಲಿಲ್ಲ. ಕುಡಿಯುವ ನೀರು, ಪ್ರಥಮ ಚಿಕಿತ್ಸೆಗೆ ಅಗತ್ಯ ಔಷಧಗಳು, ಆಂಬುಲೆನ್ಸ್ ಸೇರಿದಂತೆ ಮುನ್ನೆಚ್ಚರಿಕೆಯಾಗಿ ಕೈಗೊಳ್ಳಬೇಕಾದ ಯಾವುದೇ ಕ್ರಮಗಳನ್ನು ಕೈಗೊಳ್ಳದೆ ಕ್ರೀಡಾಕೂಟ ಆಯೋಜಿಸಿದ್ದ ಬಗ್ಗೆಯೂ ಶಿಕ್ಷಕರು ಕಿಡಿಕಾರಿದರು. ಕೆಲ ಶಿಕ್ಷಕರು ಬಿಇಒ ಪರವಾಗಿ ವಾದ ಮಾಡಿದರೆ, ಬಹುತೇಕ ಶಿಕ್ಷಕರು ಶಿಕ್ಷಕರ ಸಂಘದ ಪರವಾಗಿ ಪ್ರತಿವಾದ ಮಾಡಿದರು.


    ಗಾಯಗೊಂಡ ಶಿಕ್ಷಕಿಯರು: ಶಿಕ್ಷಕಿಯರಿಗಾಗಿ ಆಯೋಜಿಸಿದ್ದ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಇಬ್ಬರು ಶಿಕ್ಷಕಿಯರು ಬಿದ್ದು ಗಾಯಗೊಂಡರು.
    ತಾಳಶಾಸನ ಪ್ರಾಥಮಿಕ ಶಾಲಾ ಶಿಕ್ಷಕಿ ದಾಕ್ಷಾಯಿಣಿ ಹಾಗೂ ಕ್ಯಾತನಹಳ್ಳಿ ಶಾಲೆಯ ಲೋಕಮಣಿ ಅವರು ಓಟದ ಸ್ಪರ್ಧೆಯಲ್ಲಿ ಬಿದ್ದು ಗಾಯಗೊಂಡರು. ಆದರೆ ಸ್ಥಳದಲ್ಲಿ ಚಿಕಿತ್ಸೆ ನೀಡಲು ಯಾವುದೇ ವ್ಯವಸ್ಥೆ ಇಲ್ಲದ ಕಾರಣ ಸಹೋದ್ಯೋಗಿಗಳೊಡನೆ ಪಟ್ಟಣದ ಉಪವಿಭಾಗೀಯ ಆಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಲಾಯಿತು.


    ಬಿಇಒ ಜಿ.ಎ.ಲೋಕೇಶ್ ಮಾತನಾಡಿ, ಕ್ರೀಡಾಕೂಟ ವಿಚಾರದಲ್ಲಿ ಸಣ್ಣಪುಟ್ಟ ಗೊಂದಲಗಳಿದ್ದವು, ಮಾತುಕತೆ ನಡೆಸಿ ಬಗೆಹರಿಸಿಕೊಳ್ಳಲಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts