More

    ಬಾಳೆಕಾಯಿಮನೆ ಗ್ರಾಮಸ್ಥರು ಅತಂತ್ರ!

    ಶಿರಸಿ: ಗುಡ್ಡ ಕುಸಿಯುವ ಭೀತಿಯ ಹಿನ್ನೆಲೆಯಲ್ಲಿ ತಾಲೂಕಿನ ಬಾಳೆಕಾಯಿಮನೆ ಗ್ರಾಮದ ಜಾಜಿಗುಡ್ಡೆ ಹಾಗೂ ತುಳಗೇರಿ ಮಜರೆಗಳ ನಿವಾಸಿಗಳು ವಾಸ್ತವ್ಯವನ್ನು ಸ್ಥಳಾಂತರಿಸಬೇಕೆಂದು ಹುಲೇಕಲ್ ಉಪತಹಸೀಲ್ದಾರರು ಸೂಚನೆ ನೀಡಿದ್ದಾರೆ. ಮಳೆಗಾಲದ ಮಧ್ಯೆ ದಿಢೀರ್ ಆಗಿ ಇಂತಹ ಸೂಚನೆ ನೀಡಿರುವುದು ಸ್ಥಳೀಯ ನಿವಾಸಿಗಳ ದಿಗಿಲಿಗೆ ಕಾರಣವಾಗಿದೆ.

    ಕಳೆದ ಮಳೆಗಾಲದ ಅಬ್ಬರದಿಂದ ಜಾಜಿಗುಡ್ಡೆಯ ಒಂದಿಷ್ಟು ಭಾಗದ ಗುಡ್ಡ ಕುಸಿದಿತ್ತು. ಅಂಚಿನ ಮನೆಗಳಿಗೆ ರಾಡಿ ನೀರು ನುಗ್ಗಿ ಅವಾಂತರ ಸೃಷ್ಟಿಸಿತ್ತು. ಗುಡ್ಡದ ಇನ್ನೊಂದಷ್ಟು ಭಾಗ ಬಿರುಕು ಬಿಟ್ಟು ಹಾಗೆಯೇ ನಿಂತಿತ್ತು. ಈ ಗುಡ್ಡ ಕುಸಿತ ಪ್ರದೇಶವನ್ನು ಭೂ ಮತ್ತು ಗಣಿ ವಿಜ್ಞಾನ ಇಲಾಖೆಯಿಂದ ಸಮೀಕ್ಷೆ ನಡೆಸಲಾಗಿತ್ತು. ಇಲ್ಲಿ ಗುಡ್ಡ ಕುಸಿತದಂತಹ ಅವಘಡ ಸಂಭವಿಸುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಹೇಳಿತ್ತು. ಇಲಾಖೆಯ ವರದಿ ಉಲ್ಲೇಖಿಸಿ ಇದೀಗ ಹುಲೇಕಲ್ ಉಪತಹಸೀಲ್ದಾರರು ಮುಂಜಾಗ್ರತೆ ಕ್ರಮವಾಗಿ ಸ್ಥಳಾಂತರಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಆದರೆ, ಮಳೆಗಾಲದ ಮಧ್ಯೆ ಈಗ ಎಲ್ಲಿಗೆ ಹೋಗುವುದು ಎಂಬ ಚಿಂತೆ ನಿವಾಸಿಗಳಿಗೆ ಎದುರಾಗಿದೆ.

    ಕುಸಿತ ತಡೆಗೆ ಕ್ರಮವಾಗಲಿ: ಇಲ್ಲಿನ ಗುಡ್ಡ ಕುಸಿತ ತಡೆಯುವುದಕ್ಕೆ ತಡೆಗೋಡೆ ನಿರ್ವಿುಸಿ ಒಂದಿಷ್ಟು ಕ್ರಮ ಕೈಗೊಳ್ಳುವಂತೆ ವಿನಂತಿಸಲಾಗಿತ್ತು. ಆದರೆ, ವರ್ಷವಾದರೂ ಈವರೆಗೂ ಯಾವುದೇ ಕ್ರಮವಾಗಲಿಲ್ಲ ಎಂಬ ಅಸಮಾಧಾನ ಸ್ಥಳೀಕರದ್ದಾಗಿದೆ. ಗುಡ್ಡ ಕುಸಿತದ ಘಟನೆಯಾಗಿ ವರ್ಷವೇ ಕಳೆದಿದೆ. ಆದರೆ, ಮಳೆಗಾಲದಲ್ಲಿ ಸ್ಥಳಾಂತರಕ್ಕೆ ತಿಳಿಸಿರುವುದು ನಿವಾಸಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಇಲ್ಲಿನ ಏಳು ಕುಟುಂಬಗಳಿಗೆ ಸ್ಥಳಾಂತರಕ್ಕೆ ಸೂಚನೆ ನೀಡಲಾಗಿದೆ. 40ಕ್ಕೂ ಹೆಚ್ಚು ಮಂದಿ ಸ್ಥಳಾಂತರಗೊಳ್ಳಬೇಕಾಗುತ್ತದೆ. ಹತ್ತಾರು ಜಾನುವಾರುಗಳಿವೆ. ಅವುಗಳನ್ನು ಎಲ್ಲಿಗೆ ಕರೆದೊಯ್ಯುವುದು? ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆಯೇ? ಎಂಬ ಪ್ರಶ್ನೆ ವ್ಯಕ್ತವಾಗಿದೆ. ಒಂದಾನುವೇಳೆ ಇಲ್ಲೇ ಉಳಿದು ಆಕಸ್ಮಿಕವಾಗಿ ಗುಡ್ಡ ಕುಸಿತವಾದರೆ ಎಂಬ ತಳಮಳ ಒಂದೆಡೆಯಾದರೆ, ಎಲ್ಲ ಮೂಲವನ್ನು ಬಿಟ್ಟು ಸ್ಥಳಾಂತರವಾಗುವುದು ಎಂದರೆ ಸುಲಭವೇ ಎಂದು ನಿವಾಸಿಗಳು ಅಲವತ್ತುಕೊಳ್ಳುವಂತಾಗಿದೆ.

    ಮನೆ ಕಟ್ಟಿಕೊಳ್ಳಲು ಮಾಲ್ಕಿ ಜಾಗದಲ್ಲಿ ಸ್ಥಳಾವಕಾಶವಿಲ್ಲ. ಈ ಭಾಗದಲ್ಲಿ ಎಲ್ಲ ಕಡೆ ಗುಡ್ಡ ಪ್ರದೇಶವಾಗಿದೆ. ಅಲ್ಲಿ ಮನೆ ಕಟ್ಟಿಕೊಂಡರೆ ನೀರಿನ ಲಭ್ಯತೆ ಕಷ್ಟವಾಗುತ್ತದೆ. ಹೀಗಾಗಿ, ಅರಣ್ಯ ಇಲಾಖೆಯ ಸಮತಟ್ಟಾದ ಸ್ಥಳದಲ್ಲಿ ಮನೆ ಕಟ್ಟಿಕೊಳ್ಳಲು ಅವಕಾಶ ನೀಡುವಂತೆ ಹಿಂದೆಯೇ ಮನವಿ ಮಾಡಿದ್ದೇವು. ಈಗಲಾದರೂ ಅದಕ್ಕೆ ಸ್ಪಂದಿಸಬೇಕು.
    | ಆರ್.ವಿ. ಹೆಗಡೆ ಸ್ಥಳೀಯ ನಿವಾಸಿ

    ಪುನರ್ವಸತಿ ಸೌಲಭ್ಯ ಕಲ್ಪಿಸಲು ಅವಕಾಶವಿದೆ. ಆದರೆ, ಜಾಜಿಗುಡ್ಡೆಯ ನಿವಾಸಿಗಳು ಸ್ಥಿತಿವಂತರಿದ್ದು, ಅವರಿಗೆ ಪುನರ್ವಸತಿ ಸೌಲಭ್ಯ ನೀಡಲು ಸಾಧ್ಯವಿಲ್ಲ. ಅವರದೇ ಆದ ಬೇರೆ ಜಾಗದಲ್ಲಿ ಅವರು ವಾಸ್ತವ್ಯ ಮಾಡಲು ಅವಕಾಶವಿದೆ. ಅಲ್ಲದೆ, ಅಲ್ಲಿನ ಜನರ ಪುನರ್ವಸತಿ ಸಂಬಂಧ ಗ್ರಾಮ ಪಂಚಾಯಿತಿಗಳಿಗೆ ಪರಮಾಧಿಕಾರ ನೀಡಲಾಗಿದೆ. ಪಂಚಾಯಿತಿಯ ಹೇಳಿಕೆಯ ಪ್ರಕಾರ ಅವರಿಗೆ ಸೌಲಭ್ಯ ನೀಡಬಹುದು. ಹಾಗಾಗಿ ಇಲಾಖೆ ವತಿಯಿಂದ ಸೂಚನೆ ಮಾತ್ರ ನೀಡಲಾಗಿದೆ.
    | ಡಿ.ಆರ್. ಬೆಳ್ಳಿಮನೆ ಉಪತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts