More

    ಬಾಲ್ಯ ವಿವಾಹ ಮಕ್ಕಳ ಭವಿಷ್ಯಕ್ಕೆ ಕುತ್ತು

    ಚಿತ್ರದುರ್ಗ: ಎಲ್ಲಿಯಾದರೂ ಬಾಲ್ಯವಿವಾಹ ನಡೆಯುತ್ತಿದೆ ಎಂಬ ಮಾಹಿತಿ ಬಂದ ಕೂಡಲೇ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಿ ಅದನ್ನು ತಡೆಯಲು ಶ್ರಮಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಕೆ.ಬಿ.ಗೀತಾ ಅವರು ಹೇಳಿದರು.
    ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ಬಾಲ್ಯ ವಿವಾಹ ನಿಷೇಧ, ಪೋಕ್ಸೊ ಹಾಗೂ ಕೆಲಸದ ಸಮಯದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿವಾರಿಸುವಿಕೆ, ನಿಷೇಧಿಸುವಿಕೆ) 2013ರ ಕಾಯ್ದೆಗಳ ಕುರಿತು ಜಿಪಂ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
    ಬಡ ಕುಟುಂಬಗಳಲ್ಲಿ ಬಾಲ್ಯವಿವಾಹ ಪ್ರಕರಣಗಳು ಹೆಚ್ಚಾಗಿರುವ ಸಾಧ್ಯತೆ ಇರುತ್ತದೆ. ಬಾಲ್ಯ ವಿವಾಹಗಳು ನಡೆಯುವುದು ಕಂಡುಬಂದಲ್ಲಿ ಸಾರ್ವಜನಿಕರಿಗೆ ಅಧಿಕಾರಿಗಳಿಗೆ ಮಾಹಿತಿ ನೀಡುವುದರಿಂದ ಮಕ್ಕಳ ಭವಿಷ್ಯದ ಮೇಲಾಗುವ ದುಷ್ಪರಿಣಾಮಗಳನ್ನು ನಿಯಂತ್ರಿಸಲು ಸಾಧ್ಯವಾಗಲಿದೆ. ಬಾಲ್ಯ ವಿವಾಹ ತಡೆಗಟ್ಟಿ, ಅಂತಹ ಮಕ್ಕಳ ರಕ್ಷಣೆ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
    ಮಕ್ಕಳು, ಮಹಿಳೆಯರ ರಕ್ಷಣೆಗಿರುವ 2013ರ ಕಾಯ್ದೆಗಳೆಡೆ ಅಧಿಕಾರಿಗಳು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಬೇಕು. ಆ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು. ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಸಮಾಜದಲ್ಲಿ ನಡೆಯುವ ಅಪರಾಧ ಕೃತ್ಯಗಳನ್ನು ನಿಯಂತ್ರಿಸಬಹುದಾಗಿದೆ ಎಂದು ಹೇಳಿದರು.
    ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆ ಕಾಯ್ದೆ ಕುರಿತು ಮಕ್ಕಳ ಕಲ್ಯಾಣ ಸಮಿತಿ ಸದಸ್ಯೆ ಡಿ.ಕೆ.ಶೀಲಾ ಹಾಗೂ ಬಾಲ್ಯವಿವಾಹ ನಿಷೇಧ ಕಾಯ್ದೆ, ಪೋಕ್ಸೊ ಕುರಿತು ಕೊಪ್ಪಳ ಯುನಿಸೆಫ್ ಮಕ್ಕಳ ಸಂರಕ್ಷಣಾ ಯೋಜನೆ ಪ್ರಾದೇಶಿಕ ಸಂಯೋಜಕ ಡಾ.ಕೆ.ರಾಘವೇಂದ್ರ ಭಟ್ ಉಪನ್ಯಾಸ ನೀಡಿದರು.
    ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಂ.ವಿಜಯ್, ಎಡಿಸಿ ಕುಮಾರಸ್ವಾಮಿ, ಡಿಡಿಪಿಐ ಕೆ.ರವಿಶಂಕರ್‌ರೆಡ್ಡಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಜಗದೀಶ್ ಹೆಬ್ಬಳ್ಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್.ಬಣಕಾರ್ ಮತ್ತಿತರರು ಇದ್ದರು.
    ಬೇಟಿ ಬಚಾವೋ-ಬೇಟಿ ಪಢಾವೋ ಯೋಜನೆಯಡಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂಯುಕ್ತಾಶ್ರಯದಲ್ಲಿ ಕಾರ್ಯಾಗಾರ ಆಯೋಜಿಸಲಾಗಿತ್ತು.

    *ಕೋಟ್
    ಪ್ರಸ್ತುತ ದಿನಮಾನಗಳಲ್ಲಿ ಲೈಂಗಿಕ ಕಿರುಕುಳ ಪ್ರಕರಣಗಳ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದ್ದು, ಮಕ್ಕಳು ಮತ್ತು ಮಹಿಳೆಯರಿಗೆ ರಕ್ಷಣೆ ನೀಡುವ ನಿಟ್ಟಿನಲ್ಲಿ ಅಧಿಕಾರಿಗಳು ಶ್ರಮಿಸಬೇಕಿದೆ.
    ಎಸ್.ಜೆ.ಸೋಮಶೇಖರ್, ಜಿಪಂ ಇಒ

    *ಕೋಟ್
    ಮಕ್ಕಳು ಈ ದೇಶದ ಸಂಪತ್ತು. ಮುಂದಿನ ಪೀಳಿಗೆಯಲ್ಲಿ ಭವಿಷ್ಯದ ನಾಡನ್ನು ಕಟ್ಟಿ ಬೆಳೆಸುವ ಶಕ್ತಿ ಮಕ್ಕಳಿಗೆ ಇದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ನೈತಿಕ, ಮೌಲ್ಯಯುತ ಶಿಕ್ಷಣವನ್ನು ನೀಡುವುದು ಅಗತ್ಯವಿದೆ.
    ಬಿ.ಟಿ.ಕುಮಾರಸ್ವಾಮಿ, ಎಡಿಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts