More

    ಬಾಲ್ಯ ವಿವಾಹದಲ್ಲಿ ಪಾಲ್ಗೊಂಡರೆ ಶಿಸ್ತು ಕ್ರಮ

    ಗದಗ: ಮಕ್ಕಳ ರಕ್ಷಣೆ, ಬಾಲ್ಯ ವಿವಾಹ ಹಾಗೂ ಮಕ್ಕಳ ಮೇಲಾಗುವ ಲೈಂಗಿಕ ದೌರ್ಜನ್ಯ ತಡೆಗೆ ಸಂಬಂಧಿತ ಇಲಾಖೆಯ ಅಧಿಕಾರಿಗಳು ಪರಸ್ಪರ ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸಬೇಕು ಎಂದು ಮಕ್ಕಳ ರಕ್ಷಣೆ ಆಯೋಗದ ಅಧ್ಯಕ್ಷ ಡಾ. ಆಂಟೋನಿ ಸೆಬಾಸ್ಟಿನ್ ಕಟ್ಟುನಿಟ್ಟಿನ ಸೂಚನೆ ನೀಡಿದರು.

    ನಗರದ ಜಿಪಂ ಸಭಾಂಗಣದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗ, ಮಕ್ಕಳ ರಕ್ಷಣೆ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಮಕ್ಕಳ ರಕ್ಷಣೆ ಘಟಕ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಆರ್​ಟಿಇ, ಪೋಸ್ಕೋ 2011, ಬಾಲನ್ಯಾಯ ಕಾಯ್ದೆ 2015ರ ಅನುಷ್ಠಾನದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.

    ಬಾಲ್ಯ ವಿವಾಹ ನಡೆದ ಸಂದರ್ಭದಲ್ಲಿ ಪೊಲೀಸ್ ಇಲಾಖೆಯು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಮದುವೆಯಲ್ಲಿ ಪಾಲ್ಗೊಂಡವರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಬೇಕು. ಬಾಲ್ಯ ವಿವಾಹ ತಡೆದ ನಂತರ ಬಾಲಕ ಅಥವಾ ಬಾಲಕಿಯರ ಬಗ್ಗೆ ಕಾಳಜಿ ವಹಿಸಿ ಅವರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಹೇಳಿದರು.

    ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಸ್.ಜಿ. ಸಲಗರೆ ಮಾತನಾಡಿ, ವಿದ್ಯಾರ್ಥಿಗಳ ಪಠ್ಯಕ್ರಮದ ಕುರಿತು ನಿಲಯಪಾಲಕರು ಮೇಲ್ವಿಚಾರಣೆ ಮಾಡಬೇಕು ಎಂದರು.

    ಜಿಲ್ಲಾಧಿಕಾರಿ ಎಂ. ಸುಂದರೇಶಬಾಬು ಮಾತನಾಡಿ, ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಶಾಲೆಗಳಲ್ಲಿ ಪಿಂಕ್ ಶೌಚಗೃಹಗಳ ನಿರ್ಮಾಣ ವ್ಯವಸ್ಥೆ, ಜಲಜೀವನ್ ಮಿಷನ್ ಯೋಜನೆಯಡಿ ಅಂಗನವಾಡಿ ಮತ್ತು ಸರ್ಕಾರಿ ಶಾಲೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಗೆ ಕೂಡಲೆ ಕ್ರಮ ಕೈಗೊಳ್ಳಬೇಕೆಂದು ಶಿಕ್ಷಣ ಇಲಾಖೆಗೆ ಸೂಚಿಸಿದರು.

    ಇಲಾಖೆಯು ಹೊರತಂದ ಪೋಸ್ಟರ್ ಹಾಗೂ ಕರಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.

    ಸಭೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಅಶೋಕ ಯರಗಟ್ಟಿ. ಡಿ.ಶಂಕರಪ್ಪ, ಎಂ.ಎಲ್. ಪರಶುರಾಮ, ಎಚ್.ಸಿ. ರಾಘವೇಂದ್ರ, ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಮಂಜುನಾಥ ಬೊಮ್ಮನಕಟ್ಟಿ, ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಭರತ್ ಎಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್.ಎನ್ ಮತ್ತಿತರರು ಇದ್ದರು.

    ಮಕ್ಕಳ ಅಪಹರಣ, 3 ಪ್ರಕರಣ: ಮಕ್ಕಳ ಅಪಹರಣ ಪ್ರಕರಣಗಳಿಗೆ ಸಂಬಂಧಿಸಿದಂತೆ 2020ರಲ್ಲಿ 19 ಪ್ರಕರಣಗಳು ವರದಿಯಾಗಿದ್ದು 13 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. 2021ರಲ್ಲಿ 3 ಪ್ರಕರಣಗಳು ದಾಖಲಾಗಿದ್ದು, ತನಿಖಾ ಹಂತದಲ್ಲಿವೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅವಿನಾಶ್ ಗೋಡ್ಕಿಂಡಿ ವಿವರಿಸಿದರು. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ 2012ರಿಂದ ಇಲ್ಲಿವರೆಗೆ ಒಟ್ಟು 135 ಪ್ರಕರಣಗಳು ದಾಖಲಾಗಿದ್ದು 39 ಪ್ರಕರಣಗಳು ಖುಲಾಸೆಯಾಗಿವೆ. 5 ಪ್ರಕರಣಗಳ ಚಾರ್ಜ್​ಶಿಟ್ ಸಿದ್ಧಪಡಿಸಲಾಗಿದೆ. 49 ಪ್ರಕರಣಗಳು ತನಿಖಾ ಹಂತದಲ್ಲಿವೆ ಎಂದು ವಿವರಿಸಿದರು. ಬಾಲ್ಯವಿವಾಹಕ್ಕೆ ಸಂಬಂಧಿಸಿದಂತೆ ಒಟ್ಟು 41 ಪ್ರಕರಣಗಳು ದಾಖಲಾಗಿವೆ. 6 ಮಕ್ಕಳಿಗೆ ಬಾಲಮಂದಿರದಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. 33 ಮಕ್ಕಳನ್ನು ಪಾಲಕರ ವಶಕ್ಕೆ ಒಪ್ಪಿಸಲಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts