More

    ಬಾಲಕನ ಎಳೆದಾಡಿ ಗಲ್ಲ ಸೀಳಿದ ನಾಯಿ

    ಕಿಕ್ಕೇರಿ: ಹೋಬಳಿಯ ಉದ್ದಿನಮಲ್ಲನ ಹೊಸೂರು ಗ್ರಾಮದಲ್ಲಿ ಬೀದಿ ನಾಯಿ ಬಾಲಕನೊಬ್ಬನ ಮೇಲೆ ದಾಳಿ ಮಾಡಿ ಮುಖವನ್ನು ತೀವ್ರವಾಗಿ ಗಾಯಗೊಳಿಸಿದೆ.
    ಗ್ರಾಮದ ರಮೇಶ್ ಅವರ ಪುತ್ರ ದೀಕ್ಷಿತ್(5) ಗಾಯಗೊಂಡ ಕಂದಮ್ಮ. ಸೋಮವಾರ ಬೆಳಗ್ಗೆ ಮನೆಯಿಂದ ಹೊರಗಡೆ ಬಂದಿದ್ದಾನೆ. ಈತನ ತಾಯಿ ಅರ್ಪಿತಾ ಮನೆಯೊಳಗೆ ಅಡುಗೆ ಮಾಡುತ್ತಿದ್ದರು. ಬಾಲಕನ ಅಜ್ಜಿ ತೋಟದ ಕಾಲುವೆ ಬಳಿ ಕೆಲಸ ಮಾಡುತ್ತಿರುವುದನ್ನು ಕಂಡು ಮನೆಯಿಂದ ಹೊರ ನಡೆದಾಗ ಬೀದಿ ನಾಯಿ ಈತನ ಮೇಲೆ ದಾಳಿ ಮಾಡಿದೆ.
    ಕೈ ಬೆರಳುಗಳನ್ನು ಕಚ್ಚಿ ಹಾಕಿದ್ದು, ನಾಯಿಯಿಂದ ತಪ್ಪಿಸಿಕೊಳ್ಳಲು ಮುಂದಾಗಿ ನೆಲಕ್ಕೆ ಬಿದ್ದಿದ್ದಾನೆ. ನಾಯಿ ಬಾಲಕನನ್ನು ಎಳೆದಾಡಿದ್ದು, ಮೈ, ಮುಖದ ಮೇಲೆ ದಾಳಿ ಮಾಡಿದೆ. ಕೂಗಿಕೊಂಡರೂ ಬಿಡದೆ ಗಲ್ಲವನ್ನು ಸೀಳಿದೆ. ಕೂಡಲೇ ಬಾಲಕ ಚೀರಾಡಿ ಪ್ರಜ್ಞಾಹೀನನಾಗಿದ್ದಾನೆ. ತುಸು ದೂರದಲ್ಲಿದ್ದ ಗ್ರಾಮಸ್ಥರು ನಾಯಿ ದಾಳಿ ಕಂಡು ಓಡಿಬಂದು ಮಗುವನ್ನು ರಕ್ಷಿಸಿದರು.
    ಅರೆಪ್ರಜ್ಞಾವಸ್ಥೆಯಲ್ಲಿ ರಕ್ತಸಿಕ್ತವಾಗಿ ಬಿದ್ದಿದ್ದ ಬಾಲಕನನ್ನು ಕೂಡಲೇ ಚನ್ನರಾಯಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಕಿಕ್ಕೇರಿಯಲ್ಲಿ ನಾಯಿಗಳ ಉಪಟಳ ನಿಯಂತ್ರಿಸಲು ಗ್ರಾಪಂ ಮುಂದಾಗಿತ್ತು. ನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಲು ಮುಂದಾದಾಗ ಪ್ರಾಣಿದಯಾ ಸಂಘದವರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತವಾಗಿತ್ತು. ಪಟ್ಟಣದಿಂದ ಸ್ವಲ್ಪ ದೂರದಲ್ಲಿರುವ ಮಾದಾಪುರ ಕ್ರಾಸ್ ಪ್ರದೇಶದಲ್ಲಿ ಮೀನು, ಮಾಂಸದ ಅಂಗಡಿ, ಮಾಂಸದ ಹೋಟೆಲ್‌ಗಳಿರುವುದರಿಂದ ಇಲ್ಲಿಯೇ ಬಹುತೇಕ ನಾಯಿಗಳು ಠಿಕಾಣಿ ಹೂಡಿವೆ. ಈ ನಾಯಿಗಳು ಸುತ್ತಮುತ್ತಲ ಪ್ರದೇಶದಲ್ಲಿರುವ ಹಳ್ಳಿಗಳ ತೋಟದಲ್ಲಿ ರಾತ್ರಿ ವೇಳೆ ತಂಗುತ್ತಿವೆ. ಹಗಲು ವೇಳೆ ಮಕ್ಕಳು, ಜಾನುವಾರುಗಳ ಮೇಲೆ ದಾಳಿ ಮಾಡುತ್ತಿವೆ. ಕೂಡಲೇ ನಾಯಿಗಳ ಉಪಟಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts