More

    ಬಾಡಿಗೆಗೆ ವೈಟ್​ಬೋರ್ಡ್ ವಾಹನ ಬಳಕೆ

    ರಾಣೆಬೆನ್ನೂರ: ನಗರದ ಟ್ಯಾಕ್ಸಿ ಸ್ಟ್ಯಾಂಡ್​ನಲ್ಲಿ ವೈಟ್ ಬೋರ್ಡ್ (ಸ್ವಂತ ಬಳಕೆ) ವಾಹನಗಳನ್ನು ಬಾಡಿಗೆಗೆ ಓಡಿಸುತ್ತಿದ್ದು, ಇವರ ವಿರುದ್ಧ ಆರ್​ಟಿಒ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಹಳದಿ ಬೋರ್ಡ್ ವಾಹನಗಳ (ಬಾಡಿಗೆ ವಾಹನ)ಮಾಲೀಕರು ಎಚ್ಚರಿಕೆ ನೀಡಿದ್ದಾರೆ.

    ವೈಟ್ ಬೋರ್ಡ್ ವಾಹನಗಳ ಮಾಲೀಕರು ಸ್ವಂತಕ್ಕೆ ಬಳಸಿಕೊಳ್ಳಬೇಕಾದ ವಾಹನಗಳನ್ನು ಸ್ಟ್ಯಾಂಡ್​ನಲ್ಲಿ ನಿಲ್ಲಿಸಿ, ಬಾಡಿಗೆಗೆ ಓಡಿಸುತ್ತಿದ್ದಾರೆ. ಇದರಿಂದ ತಮಗೆ ನಷ್ಟವಾಗುತ್ತಿದೆ. ಸರ್ಕಾರಕ್ಕೆ ಪ್ರತಿ ವರ್ಷ ಹೆಚ್ಚಿನ ತೆರಿಗೆ ನೀಡಿ ಕಾರು, ಇತರ ವಾಣಿಜ್ಯಿಕ ವಾಹನಗಳನ್ನು ಬಾಡಿಗೆಗೆ ಓಡಿಸುತ್ತಿದ್ದೇವೆ. ಆದರೆ, ವೈಟ್ ಬೋರ್ಡ್​ನವರು ಸ್ವಂತಕ್ಕೆಂದು ಪಡೆದುಕೊಂಡು ಬಾಡಿಗೆಗೆ ಬಳಸಿಕೊಳ್ಳುತ್ತಿದ್ದಾರೆ. ಅಂಥವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆರ್​ಟಿಒಗೆ ಮನವಿ ಸಲ್ಲಿಸಿದ್ದೇವೆ. ಆದರೆ, ಈವರೆಗೂ ಪ್ರಯೋಜನವಾಗಿಲ್ಲ ಎಂದು ಹಳದಿ ಬೋರ್ಡ್ ವಾಹನಗಳ ಮಾಲೀಕರು ಆರೋಪಿಸಿದ್ದಾರೆ.

    ಸ್ವಂತದ ವಾಹನವನ್ನು ಬಾಡಿಗೆಗೆ ತೆಗೆದುಕೊಂಡು ಹೋಗುವುದೇ ಅಪರಾಧ. ಇಂಥ ವಾಹನಗಳಿಂದ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂ. ತೆರಿಗೆ ನಷ್ಟವಾಗುತ್ತಿದೆ. ಸ್ವಂತಕ್ಕೆಂದು ವಾಹನ ತೆಗೆದುಕೊಂಡವರು ಅವುಗಳನ್ನು ಬಾಡಿಗೆ ಓಡಿಸುವ ಮೂಲಕ ಅಧಿಕ ತೆರಿಗೆ ತುಂಬಿ ವಾಹನ ಓಡಿಸುವವರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ. ಇಂತಹ ವಾಹನಗಳ ಮಾಲೀಕರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳದೇ ಹೋದರೆ ಪ್ರತಿಭಟನೆ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಹಳದಿ ವಾಹನಗಳ ಮಾಲೀಕರು ಹೇಳಿದ್ದಾರೆ.

    ವೈಟ್ ಬೋರ್ಡ್ ವಾಹನಗಳನ್ನು ಬಾಡಿಗೆ ಓಡಿಸುವುದು ಇತ್ತೀಚೆಗೆ ಹೆಚ್ಚಾಗುತ್ತಿದೆ. ಟ್ಯಾಕ್ಸಿ ಸ್ವ್ಯಾಂಡ್​ನಲ್ಲಿ ವಾಹನಗಳನ್ನು ನಿಲ್ಲಿಸಿ ಬಾಡಿಗೆಗೆ ಕಳುಹಿಸುತ್ತಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಆರ್​ಟಿಒ ಅವರಿಗೆ ಮನವಿ ಮಾಡಿದರೂ ಕ್ರಮ ಕೈಗೊಂಡಿಲ್ಲ. ಹೀಗಾದರೆ ಸರ್ಕಾರಕ್ಕೆ ತೆರಿಗೆ ಕಟ್ಟಿ ಬಾಡಿಗೆ ವಾಹನ ಓಡಿಸುತ್ತಿರುವವರ ಗತಿ ಏನಾಗಬೇಕು?.

    | ಬಾಬು ಹೊಳೆಯಮ್ಮನವರ, ರಾಣೆಬೆನ್ನೂರ ವಿಘ್ನೇಶ್ವರ ಕಾರು ಚಾಲಕರ ಹಾಗೂ ಮಾಲೀಕರ ಸಂಘದ ಉಪಾಧ್ಯಕ್ಷ

    ವೈಟ್ ಬೋರ್ಡ್ ವಾಹಗಳನ್ನು ಬಾಡಿಗೆಗೆ ಬಳಸಬಾರದು. ಈ ಕುರಿತು ಟ್ಯಾಕ್ಸಿ ಚಾಲಕರ ಸಂಘದಿಂದ ಮನವಿ ಬಂದಿದೆ. ಅಂತಹ ವಾಹನಗಳನ್ನು ಜಪ್ತಿ ಮಾಡಲು ಪ್ರತ್ಯೇಕ ತಂಡವಿದೆ. ಅವರಿಗೆ ಈಗಾಗಲೇ ಸೂಚನೆ ಕೊಟ್ಟಿದ್ದೇವೆ. ಮುಂದಿನ ದಿನದಲ್ಲಿ ಯಾರೇ ವೈಟ್ ಬೋರ್ಡ್​ನವರು ಬಾಡಿಗೆಗೆ ಓಡಿಸಿದರೂ ಅಂತವರ ವಿರುದ್ಧ ಕ್ರಮ ಜರುಗಿಸುತ್ತಾರೆ.

    | ಜಗದೀಶ, ಎಆರ್​ಟಿಒ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts