More

    ಬಾಕಿ ವಸೂಲಿ ಯಾರ ಹೊಣೆ?

    ಧಾರವಾಡ: ನೀರು ಸರಬರಾಜು ನಿರ್ವಹಣೆ ವ್ಯವಸ್ಥೆ ಇನ್ನು ಕೆಲ ದಿನಗಳಲ್ಲೇ ಎಲ್​ಆಂಡ್​ಟಿ ಕಂಪನಿ ಪಾಲಾಗಲಿದೆ. ಹೀಗಾಗಿ, ಬಾಕಿ ಇರುವ ನೀರಿನ ಕರವನ್ನು ಜಲ ಮಂಡಳಿ ವಸೂಲಿ ಮಾಡುವುದೋ ಅಥವಾ ಈ ಜವಾಬ್ದಾರಿಯು ಎಲ್​ಆಂಡ್​ಟಿ ಕಂಪನಿ ಹೆಗಲಿಗೆ ಬೀಳುವುದೋ ಎಂಬುದು ಇನ್ನೂ ಅಸ್ಪಷ್ಟ.

    ಎಲ್ಲವೂ ಸರಿಯಿದ್ದರೆ ಖಾಸಗಿ ಸಂಸ್ಥೆಗೆ ಹಸ್ತಾಂತರಿಸುವ ಪ್ರಕ್ರಿಯೆ ಇದೇ ತಿಂಗಳಿನಿಲ್ಲಿಯೇ ಪೂರ್ಣಗೊಳ್ಳಬೇಕಿತ್ತು. ಆದರೆ, 177 ಕೋಟಿ ರೂಪಾಯಿಯ ಬಾಕಿ ವಸೂಲಿ ಹೊಣೆಯನ್ನು ಪಡೆಯಲು ಕಂಪನಿ ಒಪ್ಪುವುದು ಬಹುತೇಕ ಅಸಾಧ್ಯವಾಗಿದೆ. ಈ ಕುರಿತು ಕಂಪನಿ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಸಾಕಷ್ಟು ಚರ್ಚೆ ನಡೆಸಿದ್ದಾರೆ. ಜಲ ಮಂಡಳಿ ಬಾಕಿ ವಸೂಲಿ ಮಾಡಬೇಕಲ್ಲದೆ, ಹಸ್ತಾಂತರವಾದ ತಿಂಗಳಿನ ಬಾಕಿ ಮಾತ್ರ ಉಳಿಸಿರಬೇಕು ಎಂಬ ಚರ್ಚೆಯೂ ಆಗಿದೆ. ಈ ಸಮಸ್ಯೆಗೆ ಸರ್ಕಾರವೇ ಪರಿಹಾರ ನೀಡಬೇಕಿದ್ದು, ಇನ್ನು ಕೆಲ ದಿನಗಳಲ್ಲಿ ಅಂತಿಮ ಆದೇಶ ನೀಡಲಿದೆ. ಅದರಂತೆ ಏಪ್ರಿಲ್​ನಲ್ಲಿ ಹಸ್ತಾಂತರ ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ.

    ಖಾಸಗಿ ಕಂಪನಿಗೆ ಹಸ್ತಾಂತರಿಸುವ ಮಾಹಿತಿ ಹೊರ ಬೀಳುತ್ತಿದ್ದಂತೆ ಬಾಕಿ ಉಳಿಸಿಕೊಂಡವರು ಹಾಗೂ ಸಾಮಾನ್ಯ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಖಾಸಗಿ ಕಂಪನಿಯು ಮನಸ್ಸಿಗೆ ಬಂದ ದರ ನಿಗದಿಪಡಿಸಿದರೆ ಹೇಗೆ? ಒತ್ತಾಯ ಪೂರ್ವಕ ಬಾಕಿ ವಸೂಲಿ ಮಾಡುವರೇ? ಎಂಬ ಪ್ರಶ್ನೆಗಳು ಉದ್ಭವಿಸಿವೆ. ಬಾಕಿ ವಸೂಲಿ ಬಗ್ಗೆ ಸರ್ಕಾರ ನಿರ್ಧಾರ ಕೈಗೊಂಡರೆ, ಪಾಲಿಕೆ ದರ ನಿಗದಿಪಡಿಸಿ ಹಸ್ತಾಂತರಿಸಲಿದೆ. ಈ ವಿಷಯವಾಗಿ ಜನರಲ್ಲಿ ತಪ್ಪು ಕಲ್ಪನೆ ಬೇಡ ಎಂಬುದು ಅಧಿಕಾರಿಗಳ ಸ್ಷಷ್ಟಪನೆಯಾಗಿದೆ.

    ಜನರ ಮೇಲೆ ಹೊರೆ ಆಗದಂತೆ ನೋಡಿಕೊಳ್ಳಲಾಗುವುದು ಹಾಗೂ ಕಂಪನಿ ನಿರ್ವಹಿಸುವ ಕಾರ್ಯಗಳ ಪರಿಶೀಲನೆಗೆ ಸ್ಪೆಷಲ್ ಪರ್ಪಸ್ ವೆಹಿಕಲ್ (ಎಸ್​ಪಿವಿ) ಸಮಿತಿ ರಚನೆಯಾಗಲಿದೆ. ಈ ಸಮಿತಿ ತೀರ್ಮಾನ ದಂತೆಯೇ ಕಂಪನಿ ಕಾರ್ಯ ನಿರ್ವಹಿಸಲಿದೆ. ಇದರಿಂದ ಜನರಿಗೆ ಆಗುವ ತೊಂದರೆಯೂ ತಪ್ಪಿ ದಂತಾಗಲಿದೆ ಎಂದೂ ಅಧಿಕಾರಿಗಳು ಹೇಳುತ್ತಾರೆ. ಸುಮಾರು ವರ್ಷಗಳಿಂದ ಬಾಕಿ ಉಳಿದ ನೀರಿನ ಕರ ಇದೀಗ ಬರೋಬ್ಬರಿ 177 ಕೋಟಿ ರೂ. ತಲುಪಿದೆ. ಈ ಬಾಕಿ ವಸೂಲಿ ಅಧಿಕಾರಿಗಳಿಗೆ ತಲೆ ನೋವಾಗಿದ್ದರೆ, ಖಾಸಗಿ ಕಂಪನಿಗಳಿಗೆ ಹಸ್ತಾಂತರ ಬಳಿಕ ನಮ್ಮ ಗತಿ ಏನು ಎಂಬ ಆತಂಕ ಜನರಲ್ಲಿದೆ. ಹೀಗೆ ಹಲವು ಅಸ್ಪಷ್ಟಗಳ ನಡುವೆ ನಡೆದಿರುವ ಹಸ್ತಾಂತರ ಪ್ರಕ್ರಿಯೆಗೆ ಸರ್ಕಾರವು ಸೂಕ್ತ ಪರಿಹಾರ ಪರಿಹಾರ ಒದಗಿಸಲಿ ಎಂಬ ನಿರೀಕ್ಷೆ ಸಾರ್ವಜನಿಕರದ್ದಾಗಿದೆ.

    ಹಸ್ತಾಂತರಿಸಿದ ನಂತರವೂ ನಾವು ನಿಗದಿ ಮಾಡಿದ ದರದಲ್ಲೇ ಖಾಸಗಿ ಕಂಪನಿ ಕರ ವಸೂಲಿ ಮಾಡಲಿದೆ. ಈ ಬಗ್ಗೆ ಜನರಲ್ಲಿ ಗೊಂದಲ ಬೇಡ. ಬಾಕಿ ವಸೂಲಿ ವಿಷಯವಾಗಿ ಈಗಾಗಲೇ ಹಲವು ಸುತ್ತಿನ ಮಾತುಕತೆ ನಡೆಸಲಾಗಿದೆ. ಸರ್ಕಾರವು ಸೂಕ್ತ ನಿರ್ಧಾರ ಕೈಗೊಂಡು ಅಂತಿಮ ಆದೇಶ ನೀಡಲಿದೆ. ಈ ಆದೇಶದಂತೆ ಏಪ್ರಿಲ್​ನಲ್ಲಿ ಹಸ್ತಾಂತರ ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ.
    | ಡಾ. ಸುರೇಶ ಇಟ್ನಾಳ ಪಾಲಿಕೆ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts