More

    ಬಾಕಿ ಬರೀ 177 ಕೋಟಿ ರೂಪಾಯಿ!

    ಧಾರವಾಡ: ಜಲ ಮಂಡಳಿಯಿಂದ ನೀರು ಪಡೆದ ಗ್ರಾಹಕರು ಸರಿಯಾದ ಸಮಯಕ್ಕೆ ಕರ ತುಂಬದ ಕಾರಣಕ್ಕೆ ಅವಳಿ ನಗರ ಹಾಗೂ ಕೆಲ ಗ್ರಾಮೀಣ ಪ್ರದೇಶ ಸೇರಿ ನೀರಿನ ಕರ ಬಾಕಿ ಮೊತ್ತ ಬರೋಬ್ಬರಿ 177.85 ಕೋಟಿ ರೂ. ಉಳಿದಿದೆ. ಈ ಬಾಕಿ ವಸೂಲಿ ಹೇಗಪ್ಪಾ ?ಎಂದು ಜಲ ಮಂಡಳಿ ಅಧಿಕಾರಿಗಳು ಚಿಂತಿತರಾಗಿದ್ದಾರೆ.

    ನೀರು ಅಗತ್ಯ ಸೇವೆಗಳಲ್ಲಿ ಒಂದು ಎಂಬ ಕಾರಣಕ್ಕೆ ಅಧಿಕಾರಿಗಳು ಕಟ್ಟನಿಟ್ಟಾಗಿ ಕರ ಬಾಕಿ ವಸೂಲಿ ಮಾಡುತ್ತಿಲ್ಲ. ಹೀಗಾಗಿ, 2019ರ ನವೆಂಬರ್​ನಲ್ಲಿ ಬಾಕಿ ಇದ್ದ 38 ಕೋಟಿ ರೂಪಾಯಿಯ ಮೊತ್ತವು 2021ರ ಜನವರಿ ಅಂತ್ಯಕ್ಕೆ 117.85 ಕೋಟಿ ರೂಪಾಯಿಗೆ ತಲುಪಿದೆ. ಈ ಬಾಕಿಯಲ್ಲಿನ ಬಡ್ಡಿ ಮನ್ನಾ ಮಾಡುವಂತೆ ಅಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುತ್ತಲೇ ಇದ್ದಾರೆ. ಆದರೆ, ಸರ್ಕಾರ ಮಾತ್ರ ಸೂಕ್ತ ಸ್ಪಂದನೆ ನೀಡದ ಪರಿಣಾಮ ವರ್ಷದಿಂದ ವರ್ಷಕ್ಕೆ ಬಾಕಿ ಮೊತ್ತ ಏರುತ್ತಲೇ ಇದೆ.

    ಬಡ್ಡಿ ಮನ್ನಾ ಮಾಡುವಂತೆ ಜಲ ಮಂಡಳಿ ಹಾಗೂ ಪಾಲಿಕೆ ಅಧಿಕಾರಿಗಳು 2016 ಹಾಗೂ 2017ರಲ್ಲಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು. ಆದರೆ, ಸರ್ಕಾರ ಮಾತ್ರ ಮಣೆ ಹಾಕಿಲ್ಲ. 2012ರಲ್ಲಿ ಮನ್ನಾಕ್ಕೆ ನೀಡಿದ್ದ ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕಿತ್ತು ಎಂದೂ ಸರ್ಕಾರ ಹೇಳಿತು. ಮತ್ತೆ ಅವಕಾಶ ನೀಡುವುದು ಅಸಾಧ್ಯ ಎಂಬ ಉತ್ತರ ನೀಡಿತು.

    ಇನ್ನು ನೀರು ಸರಬರಾಜು ವ್ಯವಸ್ಥೆಯನ್ನು ಖಾಸಗಿ ಕಂಪನಿಗೆ ಶೀಘ್ರವೇ ಪಾಲಿಕೆ ಹಸ್ತಾಂತರಿಸಬೇಕಿದೆ. ಇದಕ್ಕೂ ಪೂರ್ವ ಬಾಕಿ ಹಣ ವಸೂಲಿ ಮಾಡುವ ಯೋಚನೆಯಲ್ಲಿ, ಪಾಲಿಕೆಯು ಕೊನೇ ಪ್ರಯತ್ನವಾಗಿ ಮತ್ತೆ ಸರ್ಕಾರಕ್ಕೆ ಮನವಿ ಮಾಡಿದೆ.

    ಇದರ ಹೊರತಾಗಿ ಬಾಕಿದಾರರಿಗೆ ಜಲ ಮಂಡಳಿ ಸಾರ್ವಜನಿಕವಾಗಿ ನೋಟಿಸ್ ನೀಡುವ ಮೂಲಕ ಬಾಕಿ ಕರ ತುಂಬುವಂತೆ ಎಚ್ಚರಿಕೆ ನೀಡುತ್ತಿದೆ. ಕೂಡಲೆ ಬಾಕಿ ಹಣ ಪಾವತಿ ಮಾಡಬೇಕು. ಇಲ್ಲವಾದಲ್ಲಿ ಕಾನೂನು ಪ್ರಕಾರ ನಳದ ಸಂಪರ್ಕ ಕಡಿತದ ಎಚ್ಚರಿಕೆ ನೀಡಿದೆ. ಆದರೂ ಬಾಕಿದಾರರು ಮಾತ್ರ ಹಣ ಪಾವತಿಗೆ ಮುಂದಾಗುತ್ತಿಲ್ಲ. ಹೀಗಾಗಿ, ಅಧಿಕಾರಿಗಳ ಸ್ಥಿತಿ ಅಡಕತ್ತರಿಯಲ್ಲಿ ಸಿಕ್ಕಂತಾಗಿದೆ.

    ಸದ್ಯದ ಕರೋನಾ ಸ್ಥಿತಿಯಲ್ಲಿ ಸರ್ಕಾರ ಬಾಕಿ ಮನ್ನಾ ಮಾಡುವುದಂತೂ ಅಸಾಧ್ಯ. ಹೀಗಾಗಿ, ಅಧಿಕಾರಿಗಳು ಯಾರ ಮುಲಾಜಿಗೂ ಒಳಗಾಗದೆ ಕಾರ್ಯಾಚರಣೆ ನಡೆಸಿ ಸಂಪರ್ಕ ಕಡಿತ ಮಾಡುವರೋ ಅಥವಾ ಬಾಕಿ ಹಣ ಬಂದಾಗ ಬರಲಿ ಎಂದು ಸುಮ್ಮನಾಗುವರೋ ಎಂಬುದು ಕುತೂಹಲ ಮೂಡಿಸಿದೆ.

    ಎಷ್ಟು ಮೊತ್ತ?: 2021ರ ಜನವರಿ ಅಂತ್ಯಕ್ಕೆ ಹು-ಧಾ ಅವಳಿನಗರ ಹಾಗೂ ಕೆಲ ಗ್ರಾಮೀಣ ಭಾಗ (ಅಂದಾಜು 50 ಸಾವಿರ ಸಂಪರ್ಕ) ಸೇರಿ 90.05 ಕೋಟಿ ರೂ. ಅಸಲು ಹಾಗೂ 87.80 ಕೋಟಿ ರೂ. ಬಡ್ಡಿ ಸೇರಿ ಒಟ್ಟು 177.8590 ಕೋಟಿ ರೂ. ಬಾಕಿ ಉಳಿದಿದೆ. ಈ ಪೈಕಿ ಧಾರವಾಡದಲ್ಲಿ 44.07 ಕೋಟಿ ರೂ., ಹುಬ್ಬಳ್ಳಿಯಲ್ಲಿ 84.88 ಕೋಟಿ ರೂ., ಧಾರವಾಡಕ್ಕೆ ನೀರು ಪೂರೈಸುವ ಮಾರ್ಗದಲ್ಲಿನ ಹಳ್ಳಿಗಳಲ್ಲಿ 35.13 ಕೋಟಿ ರೂ., ಜಲ ನಿರ್ಮಲ ಯೋಜನೆ (14 ಹಳ್ಳಿಗಳು) ಅಡಿ 13.58 ಕೋಟಿ ರೂ. ಹಾಗೂ ಮೊರಬ ಮತ್ತು ಇತರ ಗ್ರಾಮಗಳಲ್ಲಿ 0.16 ಕೋಟಿ ರೂ. ಬಾಕಿ ಉಳಿದಿದೆ.

    ಗ್ರಾಹಕರಿಗೆ ಪ್ರತಿ ತಿಂಗಳು ನೀಡುವ ಬಿಲ್ ಒಂದು ರೀತಿ ನೋಟಿಸ್ ಇದ್ದಂತೆ. ಹೆಚ್ಚಿನ ಬಾಕಿ ಇದ್ದವರಿಗೆ ಪ್ರತ್ಯೇಕ ನೋಟಿಸ್ ಸಹ ನೀಡಲಾಗಿದೆ. ಜತೆಗೆ ಸರಿಯಾದ ಸಮಯಕ್ಕೆ ಕರ ತುಂಬಲು ತಿಳಿವಳಿಕೆ ನೀಡಲಾಗುತ್ತಿದೆ. ನೋಟಿಸ್ ಅವಧಿ ಮುಕ್ತಾಯವಾದ ಬಳಿಕವೂ ಕರ ತುಂಬದಿದ್ದರೆ ನಳದ ಸಂಪರ್ಕ ಕಡಿತಗೊಳಿಸುವುದು ಅನಿವಾರ್ಯ. ಇಂತಹ ಕ್ರಮಕ್ಕೆ ಆಸ್ಪದ ನೀಡಿದೆ ಜನರು ಕರ ತುಂಬಿದರೆ ಅನುಕೂಲ.
    |ಎಸ್. ಆರ್. ಯಲಿಬಳ್ಳಿ ಜಲಮಂಡಳಿ ಕಾರ್ಯಪಾಲಕ ಇಂಜಿನಿಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts