More

    ಬಸ್ ಪಾಸ್​ಗೆ ಸರ್ವರ್ ಕಾಟ

    ಯಲ್ಲಾಪುರ: ಸುದೀರ್ಘ ಅವಧಿಯ ನಂತರ ಶಾಲೆ-ಕಾಲೇಜ್​ಗಳು ಆರಂಭವಾಗಿದ್ದು, ತಾಲೂಕಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಬಸ್ ಪಾಸ್ ಪಡೆಯಲು ಹರಸಾಹಸ ಪಡುತ್ತಿದ್ದಾರೆ.

    ಬಸ್ ಪಾಸ್ ಪಡೆಯುವುದಕ್ಕಾಗಿ ಸೇವಾಸಿಂಧು ಕೇಂದ್ರಗಳಲ್ಲಿ ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದ್ದು, ಸರ್ವರ್ ಸಮಸ್ಯೆಯಿಂದಾಗಿ ಗಂಟೆಗಟ್ಟಲೆ ಕಾಯುವ ಸ್ಥಿತಿ ಎದುರಾಗಿದೆ. ಪಟ್ಟಣದ 3-4 ಸೇವಾಸಿಂಧು ಕೇಂದ್ರಗಳಲ್ಲಿ ಬಸ್ ಪಾಸ್​ಗಾಗಿ ಆನ್​ಲೈನ್ ಅರ್ಜಿ ಸಲ್ಲಿಸುವ ವ್ಯವಸ್ಥೆಯಿದೆ. 3-4 ದಿವಸಗಳಿಂದ ಪ್ರತಿನಿತ್ಯ ವಿದ್ಯಾರ್ಥಿಗಳು ಕೇಂದ್ರದ ಬಳಿ ಕಾದು ಕಾದು, ಅರ್ಜಿ ಸಲ್ಲಿಸಲು ಸಾಧ್ಯವಾಗದೇ ಮರಳುತ್ತಿದ್ದಾರೆ.

    ಅರ್ಜಿ ಸಲ್ಲಿಕೆಗೆ ಆಧಾರ್ ಕಾರ್ಡ್ ನೀಡಬೇಕಾಗಿದ್ದು, ಅದಕ್ಕೆ ಮೊಬೈಲ್ ಸಂಖ್ಯೆ ಕಡ್ಡಾಯವಾಗಿ ಲಿಂಕ್ ಆಗಿರಲೇಬೇಕು. ಇಲ್ಲದಿದ್ದರೆ ಲಿಂಕ್ ಮಾಡಿಸಲೇಬೇಕು. ವಿಚಿತ್ರವೆಂದರೆ ಸರ್ವರ್ ಸಮಸ್ಯೆಯಿಂದಾಗಿ ಅದನ್ನೂ ಮಾಡಲು ಸಾಧ್ಯವಾಗುತ್ತಿಲ್ಲ. ತಾಲೂಕಿನಲ್ಲಿ 1700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗ್ರಾಮೀಣ ಭಾಗದಿಂದ ಶಾಲೆ-ಕಾಲೇಜ್​ಗಳಿಗೆ ಪ್ರತಿನಿತ್ಯ ಬಸ್​ನಲ್ಲಿ ಬರುತ್ತಾರೆ. ಜ. 31ರವರೆಗೆ ಬಸ್​ನಲ್ಲಿ ಓಡಾಡಲು ಹಳೆಯ ಪಾಸ್ ಅಥವಾ ಶಾಲೆ-ಕಾಲೇಜ್​ನ ದಾಖಲಾತಿಯ ರಸೀದಿ ತೋರಿಸಬಹುದು.

    ಪಾಸ್​ಗಾಗಿ ಅರ್ಜಿ ಸಲ್ಲಿಸಿ, ಜ. 31ರ ಒಳಗಾಗಿ ವಿದ್ಯಾರ್ಥಿಗಳು ಪಾಸ್ ಪಡೆಯಬೇಕಾಗಿದೆ. ಇಲ್ಲವಾದರೆ ಫೆ. 1ರಿಂದ ಟಿಕೆಟ್ ಪಡೆದೇ ಬಸ್​ನಲ್ಲಿ ಓಡಾಡಬೇಕು. ನಾಲ್ಕಾರು ದಿನಗಳಿಂದ ಅರ್ಜಿ ಹಾಕಲು ವಿದ್ಯಾರ್ಥಿಗಳು ಪರದಾಡುತ್ತಿದ್ದು, ಪಾಸ್ ಪಡೆಯುವುದು ಹೇಗೆಂಬ ಚಿಂತೆ ಅವರನ್ನು ಕಾಡುತ್ತಿದೆ.

    ಸರ್ವರ್ ಸಮಸ್ಯೆ ಪರಿಹರಿಸಲು ಸಾಧ್ಯವಿಲ್ಲವಾದರೆ ಬಸ್ ಘಟಕದಿಂದಲೇ ಅರ್ಜಿ ನಮೂನೆ ನೀಡಬೇಕು. ಈ ಹಿಂದೆ ಅರ್ಜಿ ಸಲ್ಲಿಸುವ, ಬಸ್ ಪಾಸ್ ಪಡೆಯುವ ಕ್ರಮದಂತೆಯೇ ಈ ಬಾರಿಯೂ ಪಾಸ್ ವಿತರಣೆ ಮಾಡುವ ವ್ಯವಸ್ಥೆ ಮಾಡಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

    ಕಳೆದ 3-4 ದಿನದಿಂದ ಅರ್ಜಿ ಸಲ್ಲಿಸುವುದಕ್ಕಾಗಿ ಕಾಯುತ್ತಿದ್ದೇವೆ. ಒಂದೆಡೆ ಅರ್ಜಿ ಸಲ್ಲಿಸಲೂ ಸಾಧ್ಯವಾಗುತ್ತಿಲ್ಲ, ಇನ್ನೊಂದೆಡೆ ತರಗತಿಗೂ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಸರ್ವರ್ ಸಮಸ್ಯೆಯಿಂದಾಗಿ ತುಂಬಾ ತೊಂದರೆಯಾಗುತ್ತಿದೆ.

    | ರಾಜೇಶ ನಾಯ್ಕ, ಗುಳ್ಳಾಪುರ, ವಿದ್ಯಾರ್ಥಿ

    ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿರುವುದು ಗಮನಕ್ಕೆ ಬಂದಿದೆ. ಇನ್ನೂ 8-10 ದಿನಗಳ ಸಮಯವಿದೆ. ಅಷ್ಟರೊಳಗೆ ಸರ್ವರ್ ಸಮಸ್ಯೆ ಪರಿಹಾರವಾಗಬಹುದು. ಒಂದು ವೇಳೆ ಆಗದಿದ್ದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು.

    | ವಿ. ಎಸ್. ಪಾಟೀಲ ವಾ.ಕ.ರ.ಸಾ ಸಂಸ್ಥೆ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts