More

    ಬಸವಾಪಟ್ಟಣ ಗ್ರಾಮಸ್ಥರ ಪ್ರತಿಭಟನೆ

    ಅರಕಲಗೂಡು: ತಾಲೂಕಿನ ಬಸವಾಪಟ್ಟಣ ಗ್ರಾಮದಲ್ಲಿ ರಸ್ತೆ ವಿಸ್ತೀರ್ಣ ಕಡಿತಗೊಳಿಸದೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಶುಕ್ರವಾರ ಶಾಸಕ ಎ.ಟಿ.ರಾಮಸ್ವಾಮಿ ಕಾರಿಗೆ ಮುತ್ತಿಗೆ ಹಾಕಿ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

    ಮಾಗಡಿ- ಸೋಮವಾರಪೇಟೆ ಮಾರ್ಗದ ರಸ್ತೆ ಬಸವಾಪಟ್ಟಣ ಮಾರ್ಗವಾಗಿ ಹಾದು ಹೋಗಿದೆ. ಕಳೆದ ಹಲವಾರು ದಶಕಗಳಿಂದ ದುರಸ್ತಿ ಕಾಣದೆ ಗುಂಡಿ ಬಿದ್ದಿದ್ದ ರಸ್ತೆ ಇದೀಗ ಅಭಿವೃದ್ಧಿ ಕಾಣುತ್ತಿದೆ. ಆದರೆ ಬಸವಾಪಟ್ಟಣ ಭಾಗದಲ್ಲಿ ರಸ್ತೆ ವಿಸ್ತೀರ್ಣ ಕಡಿತಗೊಳಿಸಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಹಾಳಾಗುತ್ತಿರುವ ರಸ್ತೆ ಸ್ಥಿತಿ ಸರಿಪಡಿಸಿ ಎಂದು ಆಗ್ರಹಿಸಿ ಗ್ರಾಮಸ್ಥರು ಊರಿನ ಪ್ರಮುಖ ಬೀದಿಗಳಲ್ಲಿ ತಮಟೆ ಬಾರಿಸುತ್ತ ಅಯ್ಯಯ್ಯೋ ಎಂದು ಘೋಷಣೆ ಕೂಗುತ್ತ ಮೆರವಣಿಗೆಯಲ್ಲಿ ಸಾಗಿ ಹಳೇ ಸಂತೆಮಾಳದ ಸರ್ಕಾರಿ ಆಸ್ಪತ್ರೆ ಬಳಿ ಕೆಸರು ಗುಂಡಿ ರಸ್ತೆಯಲ್ಲಿ ವಾಹನಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು.

    ತಾಲೂಕಿನ ಗಡಿ ಭಾಗದಿಂದ ಕೇರಳಾಪುರ, ಬಸವಾಪಟ್ಟಣ, ರಾಮನಾಥಪುರ, ಕೊಣನೂರು ಮಾರ್ಗವಾಗಿ ಸೋಮವಾರಪೇಟೆ ತನಕ ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ. ಬಸವಾಪಟ್ಟಣದಲ್ಲಿ ಮಾತ್ರ ಚತುಷ್ಪಥ ರಸ್ತೆ ನಿರ್ಮಿಸದೆ ನಿರ್ಲಕ್ಷಿಸಲಾಗಿದೆ. ಕೆಶಿಪ್ ಇಂಜಿನಿಯರ್ ಗಮನಕ್ಕೆ ತಂದರೂ ತಲೆಕೆಡಿಸಿಕೊಳ್ಳುತ್ತಿಲ್ಲ. ರಸ್ತೆ ಹಾಳಾಗಿದ್ದರೂ ಕ್ಷೇತ್ರದ ಜನಪ್ರತಿನಿಧಿ ಮೌನಕ್ಕೆ ಶರಣಾಗಿದ್ದಾರೆ. ಗ್ರಾಮಸ್ಥರು ಬೇಡಿಕೆಗೆ ಸ್ಪಂದಿಸದ ಶಾಸಕ ಎ.ಟಿ. ರಾಮಸ್ವಾಮಿ ಇದ್ದು ಇಲ್ಲವಾಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
    ಸ್ಥಳಕ್ಕೆ ಧಾವಿಸಿದ ಶಾಸಕ ಎ.ಟಿ.ರಾಮಸ್ವಾಮಿ ಅವರ ಕಾರಿಗೆ ಮಹಿಳೆಯರು ಮತ್ತು ಪ್ರತಿಭಟನಾಕಾರರು ಮುಗಿಬಿದ್ದು ಆಕ್ರೋಶ ಹೊರಹಾಕಿದರು. ರಸ್ತೆಗೆ ಡಿವೈಡರ್ ಹಾಕಿ ಚತುಷ್ಪಥ ರಸ್ತೆ ನಿರ್ಮಿಸಬೇಕು ಎಂದು ಒತ್ತಾಯಿಸಿದರು.

    ಶಾಸಕ ಸಿಡಿಮಿಡಿ: ಬಸವಾಪಟ್ಟಣದಲ್ಲಿ ರಸ್ತೆ ವಿಸ್ತೀರ್ಣ ಕಡಿತಗೊಳಿಸದೆ ಡಿವೈಡರ್ ಅಳವಡಿಸಿ ಚತುಷ್ಪಥ ಹೆದ್ದಾರಿ ನಿರ್ಮಿಸುವಂತೆ ಕೆಶಿಪ್ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಪ್ರತಿಭಟನಾಕಾರರು ಕಾರು ಸುತ್ತುವರಿದು ಮಾತಿನ ಚಕಮಕಿ ನಡೆಸಲು ಮುಂದಾದರು. ಪ್ರತಿಭಟನಾನಿರತರ ವರ್ತನೆಗೆ ಸಿಟ್ಟಾದ ಶಾಸಕರು ಯುವಕರಿಬ್ಬರ ಮೇಲೆ ಕಿಡಿಕಾರಿದರು.

    ಡಿಪಿಆರ್ ಪ್ರಕಾರ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಮೆತ್ತಗೆ ಮಾತನಾಡು. ಸರಿಯಾಗಿ ಮಾತನಾಡು ಎಂದು ಸಿಡಿಮಿಡಿಯಿಂದ ಅದೇನು ಮಾಡಿಕೋ ಎನ್ನುತ್ತ ಕಾರನ್ನು ಮುಂದೆ ಚಲಾಯಿಸಿ ಅಲ್ಲಿಂದ ಕಾಲ್ಕಿತ್ತರು. ಶಾಸಕರ ಕುರಿತು ವೈಯಕ್ತಿಕವಾಗಿ ಮಾತನಾಡುವುದು ಸರಿಯಲ್ಲ ಎಂದು ಗ್ರಾಪಂ ಅಧ್ಯಕ್ಷ ಪ್ರಶಾಂತ್ ಪ್ರತಿಭಟನಾಕಾರರ ವಿರುದ್ಧ ಗರಂ ಆದರು. ಈ ಪ್ರತಿಭಟನಾಕಾರರು ಮತ್ತು ಅಧ್ಯಕ್ಷ ಪ್ರಶಾಂತ್ ನಡುವೆ ಪರಸ್ಪರ ವಾಗ್ವಾದ ನಡೆದು ಕೆಲಕಾಲ ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts