More

    ಬಸವಕಲ್ಯಾಣ ಪರುಷಕಟ್ಟೆ ಅಭಿವೃದ್ಧಿಗೆ 20 ಕೋಟಿ ರೂ.

    ಬಸವಕಲ್ಯಾಣ: ನೂತನ ಅನುಭವ ಮಂಟಪ ನಿರ್ಮಾಣಕ್ಕಾಗಿ ಸರ್ಕಾರ ಬಿಡುಗಡೆ ಮಾಡಿರುವ 200 ಕೋಟಿ ರೂ.ಗಳಲ್ಲಿ 20 ಕೋಟಿ ರೂ. ಪರುಷಕಟ್ಟೆ ಅಭಿವೃದ್ಧಿ ಕೆಲಸಗಳಿಗಾಗಿ ಬಳಸಲು ಅನುಮೋದನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಬಸವಕಲ್ಯಾಣ ಅಭಿವೃದ್ಧಿ ಮಂಡಳಿ(ಬಿಕೆಡಿಬಿ) ಕಚೇರಿ ಸಭಾಂಗಣದಲ್ಲಿ ಶನಿವಾರ ಮಂಡಳಿಯ ಏಳನೇ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಅನುಭವ ಮಂಟಪ ಯೋಜನೆಗಾಗಿ ಜಮೀನು ಖರೀದಿಸಿದ 12.70 ಕೋಟಿ ರೂ. ಮೊತ್ತಕ್ಕೂ ಅನುಮೋದನೆ ಸಿಕ್ಕಿದೆ ಎಂದರು.

    ಈ ಸಭೆಯಲ್ಲಿ ಕೇಳಿ ಬಂದ ಎಲ್ಲ ಸಲಹೆಗಳನ್ನು ಪರಿಗಣಿಸಲಾಗುವುದು. ಒಳ್ಳೆಯ ಕಾರ್ಯಕ್ಕೆ ಕಾಲ ಕೂಡಿ ಬಂದಿದೆ. ಇಡೀ ವಿಶ್ವದ ಜನರೇ ಬಂದು ನೋಡುವಂತೆ ಅನುಭವ ಮಂಟಪ ನಿರ್ಮಿಸಲಾಗುವುದು. ನಮ್ಮ ಅವಧಿಯಲ್ಲಿ ವಿನೂತನ ಅನುಭವ ಮಂಟಪ ನಿರ್ಮಾಣವಾಗುತ್ತಿರುವುದಕ್ಕೆ ನಾವೆಲ್ಲರೂ ಪುಣ್ಯಶಾಲಿಗಳು ಎಂದು ಸಂತಸ ವ್ಯಕ್ತಪಡಿಸಿದರು.

    ಪರುಷಕಟ್ಟೆ ಪ್ರದೇಶದ ಸಮಗ್ರ ಅಭಿವೃದ್ಧಿ ಮೇಲುಸ್ತುವಾರಿಯನ್ನು ನೂತನ ಅನುಭವ ಮಂಟಪ ಯೋಜನಾ ಅನುಷ್ಠಾನ ಸಮಿತಿಗೆ ವಹಿಸುವ ಮತ್ತು ಅನುಭವ ಮಂಟಪಕ್ಕಾಗಿ ಬಿಡುಗಡೆಯಾದ ಅನುದಾನದ ಬಡ್ಡಿಯನ್ನು ಮಂಡಳಿ ಅವಶ್ಯಕ ಕೆಲಸಗಳಿಗೆ ಉಪಯೋಗಿಸುವ ಮಹತ್ವದ ಕಾರ್ಯಗಳಿಗೆ ಸಭೆ ಒಪ್ಪಿಗೆ ಸೂಚಿಸಿತು. ನೂತನ ಅನುಭವ ಮಂಟಪ ನಿರ್ಮಾಣ ನಿಮಿತ್ತ ರಚಿತವಾದ ಯೋಜನಾ ಅನುಷ್ಠಾನ ಸಮಿತಿ ಕೈಗೊಂಡ ನಿರ್ಣಯಗಳಿಗೂ ಅನುಮೋದನೆ ನೀಡಿತು.

    ಮಂಡಳಿ ವಿಶೇಷಾಧಿಕಾರಿ ಡಿಸಿ ಗೋವಿಂದರೆಡ್ಡಿ ಸಭೆಯ ವಿಷಯ ಸೂಚಿಗಳನ್ನು ಓದಿ ಹೇಳಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಭಗವಂತ ಖೂಬಾ, ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ, ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್, ಸಂಸದ ಡಾ.ಉಮೇಶ ಜಾಧವ್, ಡಾ.ಬಸವರಾಜ ಪಾಟೀಲ್ ಸೇಡಂ, ಕೆಕೆಆರ್​ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ, ಶಾಸಕರಾದ ಶರಣು ಸಲಗರ, ಬಂಡೆಪ್ಪ ಖಾಶೆಂಪುರ, ರಾಜಶೇಖರ ಪಾಟೀಲ್, ರಹೀಮ್ ಖಾನ್, ವಿಧಾನ ಪರಿಷತ್ ಸದಸ್ಯರಾದ ರಘುನಾಥರಾವ ಮಲ್ಕಾಪುರೆ, ಅರವಿಂದಕುಮಾರ ಅರಳಿ, ಡಾ.ಚಂದ್ರಶೇಖರ ಪಾಟೀಲ್, ಶಶೀಲ್ ಜಿ.ನಮೋಶಿ, ಭೀಮರಾವ ಪಾಟೀಲ್, ಪ್ರಾದೇಶಿಕ ಆಯುಕ್ತ ಡಾ.ಎನ್.ವಿ. ಪ್ರಸಾದ್, ಜಿಪಂ ಸಿಇಒ ಜಹೀರಾ ನಸೀಮ್, ಬೆಂಗಳೂರು ಬಸವ ಸಮಿತಿ ಅಧ್ಯಕ್ಷ ಹಾಗೂ ಅನುಭವ ಮಂಟಪ ನಿಮರ್ಾಣದ ತಾಂತ್ರಿಕ ತಜ್ಞರ ಸಮಿತಿ ಸದಸ್ಯ ಅರವಿಂದ ಜತ್ತಿ, ಬಿಕೆಡಿಬಿ ಸದಸ್ಯರಾದ ಶಿವರಾಜ ನರಶೆಟ್ಟಿ, ಕಿರಣ್ ಪಾಟೀಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್. ಚೆನ್ನೂರ ಇತರ ಅಧಿಕಾರಿಗಳು ಉಪಸ್ಥಿತರಿದ್ದರು. ಬಿಕೆಡಿಬಿ ಹತ್ತಿರದ ಹೆಲಿಪ್ಯಾಡ್ನಲ್ಲಿ ಸಿಎಂ ಸಾರ್ವಜನಿಕರ ಅಹವಾಲು ಅರ್ಜಿಗಳನ್ನು ಸ್ವೀಕರಿಸಿದರು.

    31.6 ಎಕರೆ ಖಾಸಗಿ ಜಮೀನು ಖರೀದಿ: ನೂತನ ಅನುಭವ ಮಂಟಪಕ್ಕೆ ತುರ್ತಾಗಿ ಬೇಕಾಗಿದ್ದ 31.6 ಎಕರೆ ಖಾಸಗಿ ಜಮೀನನ್ನು ಅನುಭವ ಮಂಟಪ ಯೋಜನಾ ಸಮಿತಿ ಸಭೆಯಲ್ಲಿ ಅನುಮೋದನೆ ಪಡೆದು 12.70 ಕೋಟಿ ರೂ.ಗಳಲ್ಲಿ ನೇರ ಖರೀದಿ ಮಾಡಲಾಗಿದೆ ಎಂದು ಬಿಕೆಡಿಬಿ ವಿಶೇಷಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದರು. ಅನುಭವ ಮಂಟಪ ನಿಮಿತ್ತ ಕರೆದಿರುವ ಟೆಂಡರ್ ಪ್ರಕ್ರಿಯೆ ಪ್ರಸ್ತುತ ತಾಂತ್ರಿಕ ಬಿಡ್ ಮೌಲ್ಯಮಾಪನ ಹಂತದಲ್ಲಿದೆ. ಒಟ್ಟು 63.14 ಎಕರೆ ಜಮೀನು ಲಭ್ಯವಿದ್ದು, ಕಾಮಗಾರಿ ಆರಂಭಿಸಲು ಯಾವುದೇ ತೊಂದರೆ ಇಲ್ಲ ಎಂದು ಮಾಹಿತಿ ನೀಡಿದರು.

    ಸ್ಮಾರಕಗಳ ರಕ್ಷಣೆಗೆ ಒತ್ತು: ಬಸವಕಲ್ಯಾಣದಲ್ಲಿ ಮಹಾಪುರುಷರ ಸ್ಮಾರಕಗಳು ಅತಿಕ್ರಮಣವಾಗುತ್ತಿದ್ದು, ರಕ್ಷಣೆ ಮಾಡುವ ಅಗತ್ಯವಿದೆ ಎಂದು ಭಾಲ್ಕಿ ಶಾಸಕ ಈಶ್ವರ ಖಂಡ್ರೆ ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಸ್ಮಾರಕಗಳ ಅತಿಕ್ರಮಣ ತಡೆಯಲು ಕೂಡಲೇ ಕ್ರಮ ವಹಿಸಬೇಕು ಎಂದು ಡಿಸಿಗೆ ಸೂಚಿಸಿದರು. ಸ್ಮಾರಕಗಳ ನಿರ್ವಹಣೆಗೆ ಸಂಬಂಧಿಸಿದಂತೆ ಅನುದಾನ ಬೇಕಿದ್ದಲ್ಲಿ ನೀಡಲಾಗುವುದು ಎಂದು ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts