More

    ಬರ ಎದುರಿಸಲು ಕೋಟಿ ರೂ. ಅನುದಾನ; ಗ್ರಾಮಾಂತರ ಜಿಲ್ಲೆಯಲ್ಲಿ ನೀರಿನ ಬವಣೆ ತಡೆಗೆ ಜಿಪಂ ಸಜ್ಜು

    ಶಿವರಾಜ ಎಂ.ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಬೇಸಿಗೆ ಬಿಸಿ ಕಾಣಿಸತೊಡಗಿದೆ. ಕುಡಿಯುವ ನೀರಿನ ಬವಣೆ ತಡೆಗೆ ಎಚ್ಚೆತ್ತಿರುವ ಜಿಲ್ಲಾ ಪಂಚಾಯತ್ ಈಗಾಗಲೇ ಕ್ರಮಕ್ಕೆ ಮುಂದಾಗಿದ್ದು, ಈಗಾಗಲೇ ಜಿಪಂಗೆ ಸರ್ಕಾರದಿಂದ 1 ಕೋಟಿ ರೂ.ಅನುದಾನ ಬಿಡುಗೆಯಾಗಿದೆ.

    ಕಳೆದ ಸಾಲಿನಲ್ಲಿ ಕುಡಿವ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. 1500 ಅಡಿ ಕೊರೆದರೂ ನೀರು ಸಿಗದ ಸ್ಥಿತಿ ಎದುರಾಗಿತ್ತು. ಸರಿಯಾದ ವೇಳೆಗೆ ಅನುದಾನ ಬಿಡುಗಡೆಯಾಗದೆ ಅಧಿಕಾರಿಗಳೂ ಕೈಕಟ್ಟಿ ಕುಳಿತುಕೊಳ್ಳುವಂತಾಗಿತ್ತು. ಈ ಬಾರಿ ಬೇಸಿಗೆ ಆರಂಭದಲ್ಲೇ ರಾಜ್ಯ ಸರ್ಕಾರ ಜಿಲ್ಲೆಗೆ ವಿಶೇಷ ಅನುದಾನ ಬಿಡುಗಡೆ ಮಾಡಿರುವುದರಿಂದ ಬೇಸಿಗೆ ಬಿಸಿಯನ್ನು ಜಿಪಂ ಸಮರ್ಥವಾಗಿ ಎದುರಿಸಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

    24 ಘಟಕ ರಿಪೇರಿ: ಗ್ರಾಮಾಂತರ ಜಿಲ್ಲೆಯಲ್ಲಿ 611 ಕುಡಿಯುವ ನೀರಿನ ಘಟಕಗಳ ಪೈಕಿ ಪ್ರಮುಖವಾಗಿ 24 ಘಟಕಗಳು ದುರಸ್ತಿಯಲ್ಲಿವೆ. ಕೆಲವೊಂದರಲ್ಲಿ ಸಾಮಾನ್ಯ ದುರಸ್ತಿ ಕೆಲಸಗಳಿದ್ದು, ನಿರ್ವಹಣೆದಾರರು ದುರಸ್ತಿ ನಡೆಸುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಘಟಕಗಳಿಗೆ ನೀರಿನ ತೊಂದರೆ ಎದುರಾಗಿಲ್ಲ ಎಂದು ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತ ರವಿಸೂರನ್ ತಿಳಿಸಿದ್ದಾರೆ. ಘಟಕಗಳಿಗೆ ನೀರು ಪೂರೈಸುತ್ತಿರುವ ಬೋರ್‌ವೆಲ್‌ಗಳು ಕೈಕೊಟ್ಟರೆ ಟ್ಯಾಂಕರ್ ಮೂಲಕ ಪೂರೈಕೆಗೆ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

    ಅಂತರ್ಜಲ ಆಶಾದಾಯಕ: ಕಳೆದ ಎರಡ್ಮೂರು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಬರಗಾಲ ಪ್ರಮಾಣ ಕಡಿಮೆ ಇದೆ ಎಂದು ಅಂದಾಜಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಅಂತರ್ಜಲಮಟ್ಟ ಸುಧಾರಿಸಿದೆ. ಜಲಾಮೃತ ಯೋಜನೆ ಹಾಗೂ ಸಾರ್ವಜನಿಕ ಸಹಭಾಗಿತ್ವ ಸೇರಿ ವಿವಿಧ ಯೋಜನೆಯಡಿ ಕೆರೆ-ಕುಂಟೆಗಳ ಜೀರ್ಣೋದ್ಧಾರದ ಕಾರಣ, ಬೇಸಿಗೆಯಲ್ಲಿಯೂ ಅಂತರ್ಜಲಕ್ಕೆ ಧಕ್ಕೆಯುಂಟಾಗುವುದಿಲ್ಲ ಎಂಬ ಮಾತು ಕೇಳಿಬಂದಿದೆ. ಆದರೆ ಈಗಾಗಲೇ ಕೆಲವೊಂದು ಭಾಗಗಳಲ್ಲಿ ಬೋರ್‌ವೆಲ್‌ಗಳಲ್ಲಿ ನೀರು ಬತ್ತುತ್ತಿದೆ. ಕೆಲವೊಂದು ಬೋರ್‌ವೆಲ್‌ಗಳು ಕೆಟ್ಟು ವರ್ಷವಾದರೂ ದುರಸ್ತಿಯಾಗಿಲ್ಲ. ಮತ್ತೆ ಕೆಲವು ಕಡೆಗಳಲ್ಲಿ ಕೊಳವೆಬಾವಿ ಕೊರೆದರೂ ಪಂಪ್,ಮೋಟಾರ್ ಅಳವಡಿಸುವ ಕೆಲಸವಾಗಿಲ್ಲ ಎಂಬ ದೂರು ವ್ಯಕ್ತವಾಗಿದೆ.

    ಹೊಸಕೋಟೆಗೆ ಹೆಚ್ಚು ಅನುದಾನ: ಗ್ರಾಮಾಂತರ ಜಿಲ್ಲೆಯ ನಾಲ್ಕೂ ತಾಲೂಕುಗಳ ಪೈಕಿ ಹೊಸಕೋಟೆಯಲ್ಲಿ ನೀರಿನ ಬವಣೆ ತೀವ್ರತೆ ಪಡೆಯುತ್ತದೆ ಎಂದು ಅಂದಾಜಿಸಿರುವ ಜಿಪಂ 1 ಕೋಟಿ ರೂ.ಅನುದಾನದಲ್ಲಿ ಶೇ.30ರಷ್ಟನ್ನು ವಿನಿಯೋಗಿಸಲು ಚಿಂತಿಸಿದೆ. ಉಳಿದ ಮೂರು ತಾಲೂಕುಗಳಿಗೆ ಸಮನಾಗಿ ಹಂಚಿಕೆ ಮಾಡುವ ಕುರಿತು ಚರ್ಚಿಸಿದೆ ಎಂದು ತಿಳಿದುಬಂದಿದೆ.

    ಶಾಲೆಗಳಿಗೆ ಆದ್ಯತೆ: ಗ್ರಾಮಾಂತರ ಜಿಲ್ಲೆಯ ಕೆಲವೊಂದು ಶಾಲೆಗಳಲ್ಲಿ ಬೇಸಿಗೆ ಆರಂಭದಲ್ಲೇ ಕುಡಿವ ನೀರಿಗೆ ಪರದಾಟ ಎದುರಾಗುವುದನ್ನು ಗಮನಿಸಿರುವ ಜಿಪಂ, ವಿಶೇಷ ಅನುದಾನದಲ್ಲಿ ಸರ್ಕಾರಿ ಶಾಲೆಗಳಲ್ಲಿ ನೀರಿನ ಪೂರೈಕೆಗೆ ಆದ್ಯತೆ ನೀಡಿದೆ.

    ಬೇಸಿಗೆಯಲ್ಲಿ ಎದುರಾಗಬಹುದಾದ ನೀರಿನ ಸಮಸ್ಯೆ ಬಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಗಮನ ಸೆಳೆಯಲಾಗಿತ್ತು. ನಿರೀಕ್ಷೆಯಂತೆಯೇ 1 ಕೋಟಿ ರೂ.ಅನುದಾನ ಬಿಡುಗಡೆಯಾಗಿದ್ದು, ಸಮರ್ಥವಾಗಿ ನೀರಿನ ತೊಂದರೆ ಎದುರಿಸುವ ವಿಶ್ವಾಸವಿದೆ.
    ಜಯಮ್ಮ ಲಕ್ಷ್ಮಿನಾರಾಯಣ, ಜಿಪಂ ಅಧ್ಯಕ್ಷೆ, ಬೆಂ.ಗ್ರಾಮಾಂತರ

    ತೀವ್ರ ಅಭಾವ ಎದುರಾಗುವ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಕ್ರಮಕೈಗೊಳ್ಳಲಾಗುವುದು, ಸಹಾಯವಾಣಿ ಸ್ಥಾಪಿಸಿ ಎಲ್ಲಿ ಸಮಸ್ಯೆ ಕಂಡುಬರುವುದೋ ತಕ್ಷಣವೇ ಸ್ಪಂದಿಸುವ ಕೆಲಸಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
    ರವಿಸೂರನ್, ಕಾರ್ಯಪಾಲಕ ಅಭಿಯಂತ, ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ವಿಭಾಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts