More

    ಬಬಲೇಶ್ವರ ಕ್ಷೇತ್ರದ ಸಂತ್ರಸ್ತರಿಗೆ ಗುಡ್‌ನ್ಯೂಸ್ ! ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಳ, ಭೂ ಸ್ವಾಧೀನಕ್ಕೆ ಏಕರೂಪದ ಬೆಲೆ ನಿಗದಿಗೆ ಒತ್ತಾಯ, ವಿಜುಗೌಡರ ಭೇಟಿಗೆ ಸಿಎಂ ಸಕಾರಾತ್ಮಕ ಸ್ಪಂದನೆ

    ವಿಜಯಪುರ: ಆಲಮಟ್ಟಿ ಜಲಾಶಯದ ಎತ್ತರ 524.256ಅಡಿಗೆ ಹೆಚ್ಚಿಸಲು ಭೂಮಿ ಸ್ವಾಧೀನ ಪ್ರಕ್ರಿಯೆಯಲ್ಲಿ ಉಂಟಾದ ತಾರತಮ್ಯಕ್ಕೆ ಇತೀಶ್ರೀ ಹಾಡಲಾಗಿದ್ದು, ಏಕರೂಪದ ಬೆಲೆ ನಿಗದಿಗೆ ಸಿಎಂ ಬಸವರಾಜ ಬೊಮ್ಮಾಯಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾಗಿ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ ತಿಳಿಸಿದ್ದಾರೆ.
    ಜಲಾಶಯದ ಎತ್ತರ ಹೆಚ್ಚಿಸುರುವುದರಿಂದ ನೀರು ಸಂಗ್ರಹ ಪ್ರಮಾಣ ಹೆಚ್ಚಲಿದೆ. ಹೀಗಾಗಿ ಹಿನ್ನೀರಿನಲ್ಲಿ ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಯ ಹಳ್ಳಿಗಳು ಮುಳಗಡೆಯಾಗಲಿವೆ. ತನ್ನಿಮಿತ್ತ ಹಳ್ಳಿಗಳ ಸ್ಥಳಾಂತರ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಭೂ ಸ್ವಾಧೀನ ಪ್ರಕ್ರಿಯೆಗೆ ಮುನ್ನುಡಿ ಬರೆಲಾಗುತ್ತಿದ್ದು, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಯ ಜಮೀನುಗಳ ಬೆಲೆಯಲ್ಲಿ ತಾರತಮ್ಯ ಉಂಟಾಗಿತ್ತು. ಈ ವ್ಯತಾಸ ಸರಿಪಡಿಸಿ ಏಕರೂಪದ ಬೆಲೆ ನಿಗದಿ ಮಾಡಬೇಕೆಂದು ಸಿಎಂ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಮಾಡಲಾಯಿತು ಎಂದವರು ತಿಳಿಸಿದ್ದಾರೆ.
    ಪ್ರಸಕ್ತ ಕೇಂದ್ರ ಸರ್ಕಾರದ ಹೊಸ ಭೂ ಸ್ವಾಧಿನ ಕಾಯ್ದೆ- 2013ರ ಪ್ರಕಾರ ಕರ್ನಾಟಕ ಸರ್ಕಾರದ ಆಯಾ ತಾಲೂಕಿನ ಸ್ಥಿರಾಸ್ತಿಗಳ ಮಾರುಕಟ್ಟೆ ಬೆಲೆ ಅಂದರೆ ಉಪನೋಂದಣಿ ಅಧಿಕಾರಿಗಳ ಕಾರ್ಯಾಲಯದಲ್ಲಿ ಮಾರುಕಟ್ಟೆ ದರಪಟ್ಟಿಯ ನಾಲ್ಕು ಪಟ್ಟು ಜಮೀನು ಪರಿಹಾರದ ನಿಗದಿ ಆಗುತ್ತದೆ. ಹೊಸ ಭೂ ಸ್ವಾಧಿನ ಕಾಯ್ದೆ ಪ್ರಕಾರ ಜಮೀನುಗಳನ್ನು ಸ್ವಾಧೀನ ಪಡಿಸಿಕೊಂಡರೆ ಬಬಲೇಶ್ವರ ಮತಕ್ಷೇತ್ರದ ಹಂಗರಗಿ, ಬೆಳ್ಳುಬಿ, ಜೈನಾಪೂರ, ಮಂಗಳೂರ, ಲಿಂಗದಳ್ಳಿ ತಾಜಪೂರ, ದೇವರಗೆಣ್ಣೂರ, ಸುತಗುಂಡಿ, ಬಬಲಾದಿ, ಶಿರಬೂರ, ಕಣಬೂರ, ಹೊಸರ, ಜಂಬಗಿ, ಚಿಕ್ಕಗಲಗಲಿ ಗ್ರಾಮದ ಸಂತ್ರಸ್ಥರಿಗೆ ತುಂಬಾ ಅನ್ಯಾಯವಾಗುತ್ತದೆ. ಈ ಭಾಗದಲ್ಲಿ 1 ಎಕರೆ ಜಮೀನಿನ ಮಾರುಕಟ್ಟೆ ಬೆಲೆ 30 ರಿಂದ 40 ಲಕ್ಷ ರೂ.ಗಳು ಆಗುತ್ತಿದ್ದು, ಉಪ ನೋಂದಣಿ ಅಧಿಕಾರಿಗಳ ಕಚೇರಿಯ ಅಧಿಕೃತ ದರಪಟ್ಟಿ ಮುದ್ರಾಂಕ ಶುಲ್ಕ 1.5 ರಿಂದ 2 ಲಕ್ಷದವರೆಗೆ ನಿಗದಿಯಾಗಿರುತ್ತದೆ. ಹೊಸ ಭೂ ಸ್ವಾಧಿನ ಕಾಯ್ದೆ ಪ್ರಕಾರ ಇದರ ನಾಲ್ಕು ಪಟ್ಟು ಅಂದರೆ 6 ರಿಂದ 8 ಲಕ್ಷ ರೂ.ಗಳವರೆಗೆ ಭೂ ಪರಿಹಾರ ಸಿಗುವದರಿಂದ ಸಂತ್ರಸ್ಥರಿಗೆ ಮಾರುಕಟ್ಟೆ ಬೆಲೆ ಸಿಗದೆ ಅನ್ಯಾಯವಾಗುತ್ತದೆ ಎಂದು ಮನವರಿಕೆ ಮಾಡಲಾಯಿತು.
    2013ರ ಕಾಯ್ದೆಯ ಮಾರುಕಟ್ಟೆ ಬೆಲೆ ಪರಾರ್ಮಶೆ ಮಾಡುವಾಗ ಹಾಗೂ ಕಾಲಕಾಲಕ್ಕೆ ಉಪ ನೋಂದಣಿ ಅಧಿಕಾರಿಗಳ ದರ ಪಟ್ಟಿ ಪರಿಷ್ಕರಣೆ ಆಗದೆ ಇರುವುದು ಬಬಲೇಶ್ವರ ಮತಕ್ಷೇತ್ರದ ಅಂದಿನ ಶಾಸಕರು ಹಾಗೂ ಮಾಜಿ ಜಲ ಸಂಪನ್ಮೂಲ ಸಚಿವರ ಆಡಳಿತ ವೈಫಲ್ಯವೆ ಕಾರಣೆ. ಇದರಿಂದ ಬಬಲೇಶ್ವರ ತಾಲೂಕಿನ ಸಂತ್ರಸ್ಥರಿಗೆ ಯೋಗ್ಯ ಮಾರುಕಟ್ಟೆ ಬೆಲೆ ಸಿಗದೆ ಅನ್ಯಾವಾಗುತ್ತಿದೆ. ಕೃಷ್ಣಾ ನದಿಯ ಬಲದಂಡೆಯ ಬೀಳಗಿ, ಜಮಖಂಡಿ, ಮುಧೋಳ ತಾಲೂಕಿನ ಜಮೀನಿಗಳ ದರ ಪಟ್ಟಿ ಶೇ.150 ರಿಂದ ಶೇ.210ಅಧಿಕ ಇರುತ್ತದೆ. ಬಬಲೇಶ್ವರ, ಬೀಳಗಿ ಹಾಗೂ ಜಮಖಂಡಿ, ಮುಧೋಳ ತಾಲೂಕಿನ ಗ್ರಾಮಗಳ ವಾಯುವ ಗುಣ, ಮಣ್ಣಿನ ನಮೂನೆ, ನೀರಾವರಿ ಸೌಲಭ್ಯ ಒಂದೆ ಬಗೆಯಾಗಿದೆ ಮತ್ತು ಈ ಎಲ್ಲಾ ತಾಲೂಕುಗಳು ಕೃಷ್ಣಾ ನದಿಯ ಎಡ ಮತ್ತು ಬಲದಂಡೆಯ ಮೇಲೆ ಇರುತ್ತದೆ.
    ಬಬಲೇಶ್ವರ ಮತಕ್ಷೇತ್ರದ ಗ್ರಾಮಗಳು ನೀರಾವರಿಗೊಳಪಟ್ಟಿವೆ. ಈ ಗ್ರಾಮಗಳ ಕೃಷಿ ಜಮೀನುಗಳಿಗೆ ಸುಮಾರು ವರ್ಷಗಳಿಂದ ಪೈಪ್‌ಲೈನ್ ಮೂಲಕ ವರ್ಷ ಪೂರ್ತಿ ನೀರಾವರಿ ಸೌಲಭ್ಯ ಹೊಂದಿದೆ. ಈ ಪ್ರದೇಶದಲ್ಲಿ ಪ್ರಮುಖವಾಗಿ ವಾಣಿಜ್ಯ ಬೆಳೆಗಳಾದ ಕಬ್ಬು, ಅರಿಶಿಣ ತೋಟಗಾರಿಕೆ ಬೆಳೆಗಳಾದ ಬಾಳೆ, ದ್ರಾಕ್ಷಿ ಇತ್ಯಾದಿ ಬೆಳೆಯಲಾಗುತ್ತಿದೆ. ಬಬಲೇಶ್ವರ ತಾಲೂಕಿನಲ್ಲಿ ಒಂದು ಸಹಕಾರಿ ಸಕ್ಕರೆ ಕಾರ್ಖಾನೆ ಮತ್ತು ಖಾಸಗಿ ಸಕ್ಕರೆ ಕಾರ್ಖಾನೆ ಈ ಭಾಗದ ರೈತರು ಪೂರೈಸುವ ಕಬ್ಬಿನ ಮೇಲೆ ಅವಲಂಬಿತವಾಗಿದೆ. ಕಾರಣ ಈ ತಾಲೂಕುಗಳ ಭೂ ಸ್ವಾಧಿನ ಪಡಿಸಿಕೊಳ್ಳುವ ಭೂಮಿಗೆ ಕೃಷ್ಣಾ ನದಿಯ ಬಲಭಾಗದ ಬೀಳಗಿ ತಾಲೂಕಿನ ಉಪ ನೋಂದಣಿ ಅಧಿಕಾರಿಗಳ ನಿಗದಿ ಪಡಿಸಿರುವ ದರಪಟ್ಟಿಯನ್ನು ಬೆಲೆ ನಿಗದಿ ಪಡಿಸಿ, ಸಂತ್ರಸ್ಥರಿಗೆ ಏಕರೂಪದ ಪರಿಹಾರ ನಿಗದಿಪಡಿಸಬೇಕೆಂದು ಮನವಿ ಮಾಡಲಾಗಿ ಸಿಎಂ ಬೊಮ್ಮಾಯಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾಗಿ ವಿಜುಗೌಡ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts