More

    ಬಫರ್ ಜೋನ್​ನಲ್ಲಿ ಬೊಮ್ಮನಹಳ್ಳಿ

    ಹಾನಗಲ್ಲ: ಶಿಗ್ಗಾಂವಿ ತಾಲೂಕಿನ ಅಂದಲಗಿ ಗ್ರಾಮವನ್ನು ಸಂಪೂರ್ಣ ಸೀಲ್​ಡೌನ್ ಮಾಡಲಾಗಿದೆ. ಜತೆಗೆ, ಹಾನಗಲ್ಲ ತಾಲೂಕಿನ ಬೊಮ್ಮನಹಳ್ಳಿ ಗ್ರಾಮವನ್ನು ಬಫರ್​ಜೋನ್ (ಸೋಂಕು ದೃಢಪಟ್ಟ ವ್ಯಕ್ತಿಯ ವಾಸಸ್ಥಳದಿಂದ 3 ಕಿ.ಮೀ. ಸುತ್ತಮುತ್ತಲಿನ ಪ್ರದೇಶ) ಎಂದು ಘೊಷಿಸಲಾಗಿದೆ. ಸೋಂಕು ತಡೆಗಾಗಿ ಕಟ್ಟುನಿಟ್ಟಾಗಿ ಆದೇಶ ಪಾಲಿಸಲು ಸೂಚಿಸಲಾಗಿದೆ.

    ಅಂದಲಗಿ ಗ್ರಾಮದ 25 ವರ್ಷದ ಮಾವಿನ ಹಣ್ಣಿನ ವ್ಯಾಪಾರಿಗೆ (ಪ್ರಕರಣ ಸಂಖ್ಯೆ ಪಿ 853) ಕರೊನಾ ಸೋಂಕು ಇರುವುದು ಖಚಿತವಾದ ಹಿನ್ನೆಲೆಯಲ್ಲಿ ಈ ಬಿಗಿ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿದೆ.

    ಸೋಮವಾರ ರಾತ್ರಿ ತಾಲೂಕು ಆಡಳಿತವು ಬೊಮ್ಮನಹಳ್ಳಿ ಗ್ರಾಮಸ್ಥರ ಸಭೆ ನಡೆಸಿ ಅಂಗಡಿ-ಮುಂಗಟ್ಟುಗಳನ್ನು ನಿಗದಿತ ಸಮಯಕ್ಕೆ ತೆರೆದು, ಮುಚ್ಚುವಂತೆ ಸಲಹೆ ನೀಡಿದೆ. ಅನಗತ್ಯವಾಗಿ ವಾಹನಗಳಲ್ಲಿ ಸಂಚರಿಸುವುದನ್ನು ನಿಷೇಧಿಸಲಾಗಿದೆ. ಲಾಕ್​ಡೌನ್ ನಿಯಮ ಉಲ್ಲಂಘಿಸಿದರೆ ದಂಡ ವಸೂಲಿಗೆ ಕ್ರಮ ಕೈಗೊಳ್ಳಲಾಗಿದೆ.

    ಅಂದಲಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಯಲಿವಾಳ ಮತ್ತು ಶಾಡಗರವಳ್ಳಿ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ಸಂಚಾರ ಬಂದ್ ಮಾಡಲಾಗಿದೆ. ಅಧಿಕಾರಿಗಳು ಹಗಲೂರಾತ್ರಿ ನಿಗಾ ವಹಿಸುತ್ತಿದ್ದಾರೆ. ಸೋಂಕಿತನೊಂದಿಗೆ ಸಂಪರ್ಕಕ್ಕೆ ಬಂದ ಯಳವಟ್ಟಿಯ ನಾಲ್ವರು ವ್ಯಕ್ತಿಗಳ ಆರೋಗ್ಯ ತಪಾಸಣೆ ಕೈಗೊಳ್ಳಲಾಗಿದೆ. ಪರರಾಜ್ಯ, ಜಿಲ್ಲೆಗಳ ವಾಹನ ಚಾಲಕರ ಆರೋಗ್ಯ ತಪಾಸಣೆ ಕೈಗೊಳ್ಳಲಾಗುತ್ತಿದೆ ಎಂದು ತಹಸೀಲ್ದಾರ್ ಪಿ.ಎಸ್. ಎರ್ರಿಸ್ವಾಮಿ ತಿಳಿಸಿದ್ದಾರೆ.

    ರೈತರಲ್ಲಿ ಆತಂಕ:

    ಹಾನಗಲ್ಲ ತಾಲೂಕಿನ ಬೊಮ್ಮನಹಳ್ಳಿಯಿಂದ ಕೇವಲ 2 ಕಿಮೀ ಅಂತರದಲ್ಲಿ ಅಂದಲಗಿ ಗ್ರಾಮವಿದೆ. ಅಲ್ಲಿನ ಜನ ವ್ಯಾಪಾರ, ಉದ್ಯೋಗ, ಆಸ್ಪತ್ರೆ, ಶಾಲೆ-ಕಾಲೇಜ್​ಗಳಿಗಾಗಿ ಬೊಮ್ಮನಹಳ್ಳಿಯನ್ನೇ ಆಶ್ರಯಿಸಿದ್ದಾರೆ. ಸೋಂಕಿತ ಚಾಲಕ ಹಾನಗಲ್ಲ ತಾಲೂಕಿನಲ್ಲೇ ಹೆಚ್ಚು ಓಡಾಡಿದ್ದಾನೆ. ತಾಲೂಕಿನ ಕೊಪ್ಪರಸಿಕೊಪ್ಪ, ಯಳವಟ್ಟಿ, ಯಳ್ಳೂರು, ಬೈಲವಾಳ, ಬಸಾಪುರ, ಹನುಮಸಾಗರ ಹಾಗೂ ಹಾನಗಲ್ಲ ಪಟ್ಟಣಕ್ಕೂ ಭೇಟಿ ನೀಡಿರುವುದು ಟ್ರಾವೆಲ್ ಹಿಸ್ಟರಿಯಲ್ಲಿ ತಿಳಿದು ಬಂದಿದೆ.

    ತಾಲೂಕಿನಲ್ಲಿ ಮಾವಿನ ಹಣ್ಣುಗಳನ್ನು ಹೆಚ್ಚು ಬೆಳೆಯುವುದರಿಂದ ಕೆಲ ತೋಟಗಳಿಗೆ ಈತ ಭೇಟಿ ನೀಡಿದ್ದು ರೈತ ಸಮುದಾಯದಲ್ಲಿ ಆತಂಕ ಮನೆ ಮಾಡಿದೆ. ಆದರೆ, ತಾಲೂಕಿನ ಯಾವೊಬ್ಬ ರೈತನೂ ತನ್ನ ತೋಟಕ್ಕೆ ಈ ಚಾಲಕ ಬಂದಿದ್ದ ಎಂಬುದನ್ನು ಸ್ಪಷ್ಟಪಡಿಸುತ್ತಿಲ್ಲ. ಹೇಳಿದರೆ ತಮ್ಮನ್ನೂ ಕ್ವಾರಂಟೈನ್ ಮಾಡಬಹುದೆಂಬ ಭಯದಲ್ಲಿ ಬಾಯಿ ಬಿಡುತ್ತಿಲ್ಲ ಎಂದು ತಿಳಿದುಬಂದಿದೆ.

    ಮಾವಿನ ಮಂಡಿಯಿಂದಲೂ ಮುಂಬೈಗೆ ಓಡಾಟ

    ಹಾನಗಲ್ಲಿನಲ್ಲಿರುವ ಮಾವಿನಮಂಡಿಯಿಂದಲೂ ಪ್ರತಿದಿನ ಮುಂಬೈಗೆ ಹಲವು ವಾಹನಗಳು ಹೋಗಿಬರುತ್ತಿವೆ. ಇಲ್ಲಿಯೂ ಸಾಕಷ್ಟು ಜನಸಂದಣಿ ಇರುತ್ತದೆ. ನೂರಾರು ವಾಹನಗಳಲ್ಲಿ ರೈತರು ಮಾವು ಫಸಲನ್ನು ಪ್ರತಿದಿನ ಮಾರುಕಟ್ಟೆಗೆ ತರುತ್ತಿದ್ದಾರೆ. ಇಲ್ಲಿ ಯಾರೊಬ್ಬರನ್ನೂ ತಪಾಸಣೆಗೆ ಒಳಪಡಿಸುತ್ತಿಲ್ಲ. ಇದರಿಂದಾಗಿ ಯಾವ ಸಂದರ್ಭದಲ್ಲಿ ಸೋಂಕಿತರು ಪತ್ತೆಯಾಗುತ್ತಾರೋ ಎಂಬ ಭಯ ಎಲ್ಲರನ್ನೂ ಕಾಡುತ್ತಿದೆ. ಮಾವಿನಕಾಯಿ ಮಂಡಿಯವರು ಎಷ್ಟೇ ಸೂಚನೆಗಳನ್ನು ನೀಡಿದರೂ ರೈತರು-ಕಾರ್ವಿುಕರು ಇಲ್ಲಿ ಪರಸ್ಪರ ಅಂತರವನ್ನು ಕಾಯ್ದುಕೊಳ್ಳುತ್ತಿಲ್ಲ.

    ಭಯ ಹುಟ್ಟಿಸಿದ ಭತ್ತದ ವ್ಯಾಪಾರಿ

    ತಮಿಳುನಾಡು ಮೂಲದ ಭತ್ತದ ವ್ಯಾಪಾರಿಯೊಬ್ಬ ಹಾನಗಲ್ಲ ತಾಲೂಕಿನಾದ್ಯಂತ ಓಡಾಡಿ ಭತ್ತ ಖರೀದಿಸಿದ್ದಾನೆ. ಈಗ ಈತನಿಗೆ ಸೋಂಕು ದೃಢಪಟ್ಟು ತಮಿಳುನಾಡಿನ ಆಸ್ಪತ್ರೆಯೊಂದರಲ್ಲಿ ಮೇ 10ರಂದು ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದು ಬಂದಿದೆ. ಈತನ ಟ್ರಾವೆಲ್ ಹಿಸ್ಟರಿ ತೆಗೆದಾಗ ಅಕ್ಕಿಆಲೂರು ಹಾಗೂ ಬಾಳಂಬೀಡ ಗ್ರಾಮಗಳ ಲಾರಿಗಳ ಹಮಾಲಿ ಕಾರ್ವಿುಕರೊಂದಿಗೆ ಸಂಪರ್ಕ ಹೊಂದಿರುವುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ 20 ಹಮಾಲಿ ಕಾರ್ವಿುಕರು- ಕುಟುಂಬದವರನ್ನು ಅಕ್ಕಿಆಲೂರಿನ ಕೇಂದ್ರವೊಂದರಲ್ಲಿ 14 ದಿನಗಳವರೆಗೆ ಕ್ವಾರಂಟೈನ್ ಮಾಡಲಾಗಿದೆ.

    ವಲಸಿಗರ ತಂಡ ಆಗಮನ

    ತಾಲೂಕಿಗೆ ಮೇ 7 ರಿಂದ 11ರವರೆಗೆ ಗೋವಾದಿಂದ 62, ಮಹಾರಾಷ್ಟ್ರದಿಂದ 8, ಗುಜರಾತ್​ನಿಂದ 6 ಹಾಗೂ ಕೇರಳದಿಂದ ಒಬ್ಬರು ಸೇರಿ ಒಟ್ಟು 77 ಜನ ಆಗಮಿಸಿದ್ದಾರೆ. ಇದಲ್ಲದೆ, ಹೊರ ಜಿಲ್ಲೆಗಳಿಂದ 627 ಜನ ಬಂದಿಳಿದಿದ್ದು, ಅವರೆಲ್ಲರ ತಪಾಸಣೆಗಾಗಿ ಕ್ವಾರಂಟೈನ್​ನಲ್ಲಿರಿಸಿ, ವೈದ್ಯಕೀಯ ವರದಿ ಬಂದ ನಂತರ ಅವರವರ ಗ್ರಾಮಗಳಿಗೆ ಕಳುಹಿಸಲಾಗುತ್ತಿದೆ ಎಂದು ತಹಸೀಲ್ದಾರ್ ಎರ್ರಿಸ್ವಾಮಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts