More

    ಬಡವರ ಫ್ರಿಜ್​ಗೆ ಬಂತು ಬೇಡಿಕೆ

    ಬೀದರ್: ಬಡವರ ಫ್ರಿಜ್ ಎಂದೇ ಕರೆಯಲ್ಪಡುವ ಮಣ್ಣಿನ ಮಡಕೆಗೆ ಈಗ ಎಲ್ಲಿಲ್ಲದ ಬೇಡಿಕೆ ಬಂದಿದೆ. ಬಿಸಿಲ ಬೇಗೆಯಿಂದ ಕಂಗೆಟ್ಟ ಜನರಿಗೆ ದಾಹ ನೀಗಿಸಿಕೊಳ್ಳಲು ತಣ್ಣನೆ ನೀರೇ ಬೇಕು. ಅದರಲ್ಲೂ ಮಣ್ಣಿನ ಮಡಕೆ ನೀರು ಅಂದರೆ ತಂಪಷ್ಟೇ ಅಲ್ಲ, ಟೆಸ್ಟೂ ಹೌದು. ಹೀಗಾಗಿ ನಗರದ ಮಾರುಕಟ್ಟೆಯಲ್ಲಿ ಮಡಕೆಗೆ ಡಿಮಾಂಡಪ್ಪೋ ಡಿಮಾಂಡ್.

    ಹಿಂದಿನ ವರ್ಷಕ್ಕೆ ಹೋಲಿದರೆ ಈ ಬಾರಿ ಬೇಸಿಗೆ ಬಿಸಿಲು ಭಾಳ್ ಖಡಕ್ ಆಗಿಯೇ ಇದೆ. ನೆತ್ತಿ ಸುಡುವ ರಣಬಿಸಿಲಿಗೆ ಜನ ಸುಸ್ತಾಗಿ ಹೋಗಿದ್ದಾರೆ. ಬಿಸಿಲಿನ ಬೇಗೆಯಿಂದ ಹೊರಬರಲು ಜನರು ಹರಸಾಹಸಪಡುತ್ತಿದ್ದಾರೆ. ಹಣ್ಣಿನ ಜ್ಯೂಸ್, ಎಳನೀರು, ಕಲ್ಲಂಗಡಿ ಹಣ್ಣು, ಕಬ್ಬಿನ ರಸ, ಕೂಲ್ ಡ್ರಿಂಕ್ಸ್ ಅಂಗಡಿಗಳ ಮುಂದೆ ಮಧ್ಯಾಹ್ನದಿಂದ ಸಂಜೆವರೆಗೆ ಜನಸಂದಣಿಯೇ ಕಾಣುತ್ತಿದೆ.

    ಇನ್ನು ಮನೆಗಳಲ್ಲಿ ತಣ್ಣನೆ ನೀರು ಕುಡಿಯಲು ಉಳ್ಳವರು ಫ್ರಿಜ್ ಹೊಂದಿರುತ್ತಾರೆ. ಇಲ್ಲದವರಿಗೆ ಮಡಕೆಯೇ ಬೆಸ್ಟ್ ಫ್ರಿಜ್. ಬೇಸಿಗೆಯಲ್ಲಿ ನೀರಿನ ದಾಹ ನೀಗಿಸುವಲ್ಲಿ ಮಣ್ಣಿನ ಮಡಕೆ ಬಹುಮುಖ್ಯ ಪಾತ್ರ ವಹಿಸುತ್ತದೆ. ಇದು ಕುಂಬಾರರು ಸಿದ್ಧಪಡಿಸುವ ಮಣ್ಣಿನ ಮಡಕೆಗೆ ಹೆಚ್ಚಿನ ಬೇಡಿಕೆ ತರುವಂತೆ ಮಾಡಿದೆ.

    ನಗರ ಸೇರಿ ಜಿಲ್ಲೆಯ ಪಟ್ಟಣ ಪ್ರದೇಶಗಳ ರಸ್ತೆ ಬದಿಗಳಲ್ಲಿ ಮಳಿಗೆ ಹಾಕಿಕೊಂಡು ಮಡಕೆ ವ್ಯಾಪಾರದಲ್ಲಿ ಕುಂಬಾರರು ತೊಡಗಿದ್ದಾರೆ. ಸ್ವತಃ ಸಿದ್ಧಪಡಿಸುವ ಕುಂಬಾರರು ತಾವೇ ಮಾರಾಟ ಮಾಡುವ ಕಸಬು ಆರಂಭಿಸಿರುವುದು ವಿಶೇಷ. ಬೇಸಿಗೆಯಲ್ಲಿ ಒಂದಿಷ್ಟು ಸಂಪಾದನೆಯಾಗಿ ಉಪ ಜೀವನಕ್ಕೆ ನೆರವಾಗುತ್ತಿದೆ ಎನ್ನುತ್ತಾರೆ ಮಾರಾಟಗಾರರು.

    ಆಧುನಿಕ ಯುಗದಲ್ಲೂ ಮಣ್ಣಿನ ಮಡಕೆ ಎಲ್ಲರಿಗೂ ಫೆವರಿಟ್ ಎನಿಸುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಮಡಕೆಗಳ ಸಂಬಂಧ ಗಟ್ಟಿಯಾಗಿಯೇ ಇದೆ. ಹಳ್ಳಿಗಳಲ್ಲಿ ಕುಡಿಯುವ ನೀರಿಗಾಗಿ ಮಡಕೆ ಬಳಸುವ ಜತೆಗೆ ಅದರಲ್ಲಿ ಅಡುಗೆ ಮಾಡುವುದನ್ನು ಸಹ ಕಾಣುತ್ತೇವೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ನಗರ ಪ್ರದೇಶಗಳಲ್ಲಿಯೂ ಮಣ್ಣಿನ ಮಡಕೆ ಬಳಕೆ ಹೆಚ್ಚುತ್ತಿರುವುದು ಹೊಸ ಬೆಳವಣಿಗೆ. ಮನೆಯಲ್ಲಿ ಫ್ರಿಜ್ ಇದ್ದರೂ ಮಡಕೆ ನೀರೇ ಕುಡಿಯಲು ಉಪಯೋಗಿಸುತ್ತೇವೆ ಎನ್ನುತ್ತಾರೆ ನಗರದ ನಿವಾಸಿಗಳು.

    ನಗರದ ವಿವಿಧೆಡೆಯಿರುವ ಮಳಿಗೆಗಳಲ್ಲಿ ದಿನಕ್ಕೆ ಏನಿಲ್ಲವೆಂದರೂ ಸಾವಿರಕ್ಕೂ ಅಧಿಕ ಮಡಕೆಗಳು ಮಾರಾಟವಾಗುತ್ತಿವೆ. ನಮ್ಮ ಖಚರ್ು, ವೆಚ್ಚ ತೆಗೆದರೆ ನಿತ್ಯವೂ 500-1000 ರೂ. ಲಾಭ ಸಿಗುತ್ತದೆ ಎನ್ನುತ್ತಾರೆ ನಗರದ ನೆಹರು ಕ್ರೀಡಾಂಗಣ ಬಳಿಯ ಮಡಕೆ ಮಾರಾಟ ಮಾಡುವ ವ್ಯಕ್ತಿ.

    ಹಲವು ವರ್ಷಗಳಿಂದ ಮಡಕೆ ಮಾರಾಟ ವೃತ್ತಿಯಲ್ಲಿ ತೊಡಗಿಸಿಕೊಳ್ಳಲಾಗಿದೆ. ಬೇಸಿಗೆ ಮುನ್ನ ಮೂರು ತಿಂಗಳು ಮೊದಲು ಮಡಕೆಗಳನ್ನು ಸಿದ್ಧಪಡಿಸಿ ಮಾರಾಟ ಮಾಡುತ್ತೇವೆ. ವ್ಯಾಪಾರದಲ್ಲಿ ಒಂದು ದಿವಸ ಲಾಭ ಆಗುತ್ತದೆ, ಇನ್ನೊಂದು ದಿವಸ ಹಾನಿ ಆಗುತ್ತದೆ. ಆದರೆ ಪರಂಪರಾಗತವಾಗಿ ಬಂದ ವೃತ್ತಿ ಬಿಡಲು ಮನಸ್ಸಿಲ್ಲದ ಕಾರಣ ಈ ಕೆಲಸ ಮಾಡಲಾಗುತ್ತದೆ ಎನ್ನುತ್ತಾರೆ ಅವರು. ಬೇಸಿಗೆಯಲ್ಲಿ ಮಾರಾಟ ಪರವಾಗಿಲ್ಲ. ಆದರೆ ನಂತರದಲ್ಲಿ ಹೈರಾಣ ಆಗುತ್ತದೆ ಎಂದು ಗೋಳು ತೋಡಿಕೊಳ್ಳುತ್ತಾರೆ.

    ಆಕರ್ಷಕ ಮಡಕೆಗೆ ಬೇಡಿಕೆ: ದೇಹಕ್ಕೆ ತಣ್ಣನೆಯ ನೀರು ಕೊಡುವ ಮಡಕೆಗಳನ್ನು(ಸುರೈ) ನೋಡಲು ಸುಂದರ, ಆಕರ್ಷಕವಾಗಿರಬೇಕು. ಇದೀಗ ಅಂಥ ಮಡಕೆಗಳಿಗೆ ಜನರು ತಾ ಮುಂದು ಎಂದು ನಿಂತಿದ್ದಾರೆ. ಮಡಕೆಯಲ್ಲಿಯೂ ಆಕರ್ಷಕ ಡಿಜೈನ್ ಮಾಡಿದ ಮಡಕೆಗೆ ಹಾಗೂ ನಲ್ಲಿ ಹಚ್ಚಿರುವುದಕ್ಕೆ ಎಲ್ಲಿಲ್ಲದ ಬೇಡಿಕೆ ಬರುತ್ತಿದೆ. ಜನತೆ ಸಾಮಾನ್ಯ ಬಗೆಯ ಮಡಕೆಗಳನ್ನು ಕೊಳ್ಳುವುದಕ್ಕಿಂತ ಸ್ವಲ್ಪ ನೋಡಲು ಆಕರ್ಷಕವಾಗಿರುವುದನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts