More

    ಬಂತು ಸೋಯಾಬೀನ್ ಬೀಜ

    ಹುಬ್ಬಳ್ಳಿ: ವಿತರಣೆ ವ್ಯವಸ್ಥೆಯಲ್ಲಿನ ವಿಳಂಬ ಹಾಗೂ ಬಿತ್ತನೆ ಬೀಜ ಕೊರತೆಯಿಂದ ಎರಡು ದಿನದಿಂದ ಗೊಂದಲ ಉಂಟಾಗಿದ್ದ ಇಲ್ಲಿನ ಎಪಿಎಂಸಿ ಆವರಣದ ರೈತ ಸಂಪರ್ಕ ಕೇಂದ್ರಕ್ಕೆ ಕೃಷಿ ಇಲಾಖೆ ಹಿರಿಯ ಅಧಿಕಾರಿಗಳು ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.

    ಮಧ್ಯಪ್ರದೇಶ, ಆಂಧ್ರಪ್ರದೇಶದಿಂದ ಬರಬೇಕಾಗಿದ್ದ ಸೋಯಾಬೀನ್ ಬೀಜ ಸಹ ಬುಧವಾರ ಬೆಳಗ್ಗೆ ಬಂದಿದ್ದರಿಂದ ಅಗತ್ಯವುಳ್ಳ ಎಲ್ಲ ರೈತರಿಗೆ ವಿತರಣೆ ಪುನರಾರಂಭಿಸಲಾಯಿತು.

    ಹುಬ್ಬಳ್ಳಿ ಹೋಬಳಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೋಯಾಬೀನ್ ಬಿತ್ತನೆಯಾಗುತ್ತಿದ್ದು, ಅದಕ್ಕಾಗಿ ರೈತರು ಸರತಿಯಲ್ಲಿ ಕಾಯುತ್ತಿದ್ದರು. ಛಬ್ಬಿ, ಶಿರಗುಪ್ಪಿ ಹೋಬಳಿ ವ್ಯಾಪ್ತಿಯಲ್ಲಿ ಹೆಸರು, ಇತರ ಬೆಳೆಗಳನ್ನು ಹೆಚ್ಚು ಬೆಳೆಯಲಾಗುತ್ತಿದ್ದು, ಅಲ್ಲಿ ಅದೇ ಬೀಜವನ್ನು ಆರ್​ಎಸ್​ಕೆಗಳಲ್ಲಿ ಇಡಲಾಗಿದೆ. ಅನೇಕ ರೈತರು ಈಗಾಗಲೇ ಬೀಜ ಕೊಂಡೊಯ್ದಿದ್ದಾರೆ.

    ಹುಬ್ಬಳ್ಳಿ ಎಪಿಎಂಸಿ ಆವರಣದ ಆರ್​ಎಸ್​ಕೆಯಲ್ಲಿ ಕಂಪ್ಯೂಟರ್​ಗಳು ಕಡಿಮೆ ಇದ್ದಿದ್ದರಿಂದ ರೈತರ ನೋಂದಣಿ ವಿಳಂಬವಾಗುತ್ತಿತ್ತು. ಅಲ್ಲದೆ, ಈ ವರ್ಷದಿಂದ ರೈತರ ಗುರುತಿನ ಪತ್ರ (ಎಫ್​ಐಡಿ) ತಯಾರಿಸುವುದು ಕಡ್ಡಾಯವಾಗಿರುವುದರಿಂದ ಇನ್ನಷ್ಟು ವಿಳಂಬಕ್ಕೆ ಕಾರಣವಾಗಿತ್ತು. ಈ ಎಲ್ಲ ಹಿನ್ನೆಲೆಯಲ್ಲಿ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿದ ಉಪಕೃಷಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ಸಹಾಯಕ ಕೃಷಿ ನಿರ್ದೇಶಕ ರಾಜಶೇಖರ ಅನಗೌಡ್ರ ಅಗತ್ಯ ಸೌಲಭ್ಯ ಒದಗಿಸುವ ವ್ಯವಸ್ಥೆ ಮಾಡಿದರು.

    ಅಗತ್ಯ ಸಿಬ್ಬಂದಿ ನಿಯೋಜನೆ ಮಾಡಿ ರೈತ ನೋಂದಣಿ, ಬೀಜ ವಿತರಣೆ ವ್ಯವಸ್ಥೆಗೆ ಚುರುಕು ನೀಡಿದರು. ಕೃಷಿ ಅಧಿಕಾರಿಗಳು, ಸಿಬ್ಬಂದಿ ಇದ್ದರು.

    3 ಸಾವಿರ ಕ್ವಿಂಟಾಲ್: ಹುಬ್ಬಳ್ಳಿ ತಾಲೂಕಿನ ಆರಕ್ಕೂ ಹೆಚ್ಚು ಬೀಜ ವಿತರಣೆ ಕೇಂದ್ರಗಳ ಮೂಲಕ ಸುಮಾರು 3 ಸಾವಿರ ಕ್ವಿಂಟಾಲ್ ಸೋಯಾಬೀನ್ ಬೀಜ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ 2 ಸಾವಿರ ಕ್ವಿಂಟಾಲ್ ಸೋಯಾಬೀನ್ ಬೀಜ ರೈತರು ಕೊಂಡೊಯ್ದಿದ್ದಾರೆ. ಇನ್ನೂ ಸಾವಿರ ಕ್ವಿಂಟಾಲ್ ಬೀಜ ಬರಲಿದ್ದು, ವಿತರಣೆಯೂ ಮುಂದುವರಿದಿದೆ. ಛಬ್ಬಿ, ಶಿರಗುಪ್ಪಿ, ಅಂಚಟಗೇರಿ, ಬಿಡ್ನಾಳ, ವರೂರ, ಹಳೇಹುಬ್ಬಳ್ಳಿ ಇತರೆಡೆ ಬೀಜ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಮಂಜುನಾಥ ಅಂತರವಳ್ಳಿ ತಿಳಿಸಿದರು.

    ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್: ಆರ್​ಎಸ್​ಕೆಗಳಲ್ಲಿ ರೈತರು ಜಮಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಅಲ್ಲದೆ, ಆರ್​ಎಸ್​ಕೆ ಪ್ರವೇಶ ಮಾಡುವ ಎಲ್ಲರಿಗೂ ಸ್ಯಾನಿಟೈಸರ್ ನೀಡಿ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳಲು ಹೇಳಲಾಗುತ್ತಿದೆ. ನಂತರ ಬೀಜ ವಿತರಣೆ ಮಾಡಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts