More

    ಬಂಗಾರಪೇಟೆ ತಹಸೀಲ್ದಾರ್ ಹತ್ಯೆಗೆ ಖಂಡನೆ

    ಹುಬ್ಬಳ್ಳಿ: ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕು ತಹಸೀಲ್ದಾರ್ ಬಿ.ಕೆ. ಚಂದ್ರಮೌಳೇಶ್ವರ ಅವರ ಹತ್ಯೆ ಖಂಡಿಸಿ ರಾಜ್ಯ ಸರ್ಕಾರಿ ನೌಕರರ ಸಂಘದ ಹುಬ್ಬಳ್ಳಿ ಶಹರ ಮತ್ತು ಗ್ರಾಮೀಣ ತಾಲೂಕು ಘಟಕಗಳ ವತಿಯಿಂದ ಇಲ್ಲಿನ ಮಿನಿ ವಿಧಾನಸೌಧ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

    ಕರೊನಾ ತೀವ್ರವಾಗಿ ಹರಡುತ್ತಿರುವ ಸಂಕಷ್ಟದ ಪರಿಸ್ಥಿತಿಯಲ್ಲೂ ಕರ್ತವ್ಯದಲ್ಲಿ ನಿರತರಾಗುವ ಅಧಿಕಾರಿ, ಸಿಬ್ಬಂದಿ ಮೇಲೆ ಇಂತಹ ಘಟನೆ ನಡೆಯುತ್ತಿರುವುದು ತೀವ್ರ ಖಂಡನೀಯ. ಕಂದಾಯ, ಭೂಮಾಪನ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಆರೋಗ್ಯ ಇಲಾಖೆ ನೌಕರರ ಮೇಲೆ ಹಲ್ಲೆ, ದೌರ್ಜನ್ಯ ನಡೆಯುತ್ತಿವೆ. ಸರ್ಕಾರಿ ನೌಕರರು ಭಯದ ವಾತಾವರಣದಲ್ಲೇ ಕರ್ತವ್ಯ ನಿರ್ವಹಿಸಬೇಕಾಗಿದೆ. ಇಂತಹ ಘಟನೆ ಮರುಕಳಿಸದಂತೆ ಸರ್ಕಾರ ಕಠಿಣ ಕಾನೂನು ರೂಪಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

    ಹುಬ್ಬಳ್ಳಿ ಶಹರ ತಹಸೀಲ್ದಾರ್ ಶಶಿಧರ ಮಾಡ್ಯಾಳ ಮಾತನಾಡಿ, ಕಂದಾಯ ಇಲಾಖೆಯ ನೌಕರರ ಮೇಲಿನ ಹಲ್ಲೆ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ತಹಸೀಲ್ದಾರ್ ಹತ್ಯೆ ಪ್ರಕರಣವನ್ನು ನ್ಯಾಯಾಲಯದಲ್ಲಿ 1 ವರ್ಷದೊಳಗೆ ವಿಚಾರಣೆ ನಡೆಸಿ ಆರೋಪಿಗೆ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಬೇಕು. ನೌಕರರ ಮೇಲಿನ ಹಲ್ಲೆ ನಿಯಂತ್ರಿಸಲು ವಿಶೇಷ ಕಾಯ್ದೆ ರಚಿಸಿ ನೌಕರರಿಗೆ ಆತ್ಮಸ್ಥೈರ್ಯ ಹೆಚ್ಚಿಸಬೇಕು ಎಂದರು.

    ಉಪವಿಭಾಗಾಧಿಕಾರಿ ಮಹಮ್ಮದ ಜುಬೇರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

    ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ್ ಪ್ರಕಾಶ ನಾಶಿ, ಅಪರ ತಹಸೀಲ್ದಾರ್ ವಿಜಯಕುಮಾರ ಕಡಕೋಳ, ಸಂಘದ ಅಧ್ಯಕ್ಷ ಪ್ರಹ್ಲಾದ ಗೆಜ್ಜಿ, ಕಾರ್ಯದರ್ಶಿ ಎಂ.ಎಚ್. ಜಂಗಳಿ, ಬಸವರಾಜ ಹೊಸಮನಿ, ಖಜಾಂಚಿ ಎನ್.ಯು. ಬದ್ದಿ, ಬಸವರಾಜ ಕುಂಬಾರ, ವೀರನಗೌಡ ಅಯ್ಯನಗೌಡರ, ಇತರರು ಇದ್ದರು.

    ತಹಸೀಲ್ದಾರ್ ಹತ್ಯೆ ಘೊರ ಅಪರಾಧ. ಕಾನೂನು ಸುವ್ಯವಸ್ಥೆ ಮತ್ತು ತಾಲೂಕಿನ ಅಭಿವೃದ್ಧಿ ಕೆಲಸದಲ್ಲಿ ತೊಡಗಿರುವ ತಹಸೀಲ್ದಾರ್ ಹಾಗೂ ಇತರೆ ಸಿಬ್ಬಂದಿಗೆ ರಕ್ಷಣೆ ಅವಶ್ಯಕತೆ ಇದೆ ಎಂಬುದಕ್ಕೆ ಬಂಗಾರಪೇಟೆ ಘಟನೆ ಉದಾಹರಣೆಯಾಗಿದೆ.

    | ಮಹಮ್ಮದ ಜುಬೇರ, ಉಪವಿಭಾಗಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts