More

    ಫೆ.27ಕ್ಕೆ ಶಿಕಾರಿಪುರ- ರಾಣೆಬೆನ್ನೂರು ರೈಲ್ವೆ ಕಾಮಗಾರಿ ಶಂಕುಸ್ಥಾಪನೆ: ಬಿ.ಎಸ್.ಯಡಿಯೂರಪ್ಪ

    ಶಿಕಾರಿಪುರ: ರಾಜ್ಯದಲ್ಲಿ ಶಿಕಾರಿಪುರ ತಾಲೂಕನ್ನು ಮಾದರಿ ತಾಲೂಕು ಮಾಡಬೇಕು ಎಂದು ಸಂಕಲ್ಪ ಮಾಡಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಅದರಂತೆ ಇಂದು ಶಿಕಾರಿಪುರ ತಾಲೂಕು ಸರ್ವತೋಮುಖ ಅಭಿವೃದ್ಧಿಯಿಂದ ಮಾದರಿ ತಾಲೂಕು ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
    ಸಮೀಪದ ಕಾಳೇನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ನೂತನ ಶಿವಯೋಗಮಂದಿರದ ಶಂಕುಸ್ಥಾಪನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಿದ್ದೇನೆ. ಫೆ.27ರಂದು ಶಿವಮೊಗ್ಗದ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆಗೊಳಿಸಲಿದ್ದಾರೆ. ಅಂದೇ ಶಿಕಾರಿಪುರ- ರಾಣೆಬೆನ್ನೂರು ರೈಲ್ವೆ ಯೋಜನೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಲಿದೆ ಎಂದು ಹೇಳಿದರು.
    ಹಾನಗಲ್ ಕುಮಾರಸ್ವಾಮಿಗಳ ಆಶಯದಂತೆ ಲಿಂಗೈಕ್ಯ ರುದ್ರಮುನಿ ಸ್ವಾಮಿಗಳು, ಲಿಂಗೈಕ್ಯ ರೇವಣಸಿದ್ಧ ಸ್ವಾಮಿಗಳು ಈ ಶಿವಯೋಗಾಶ್ರಮವನ್ನು ಮುನ್ನಡೆಸಿಕೊಂಡು ಬಂದಿದ್ದರೆ. ದೈವಾನುಗ್ರಹ ಎಂಬಂತೆ ಅನುಷ್ಠಾನ ಮೂರ್ತಿ ಡಾ. ಸಿದ್ದಲಿಂಗ ಸ್ವಾಮಿಗಳು ಈ ಶಿವಯೋಗಾಶ್ರಮಕ್ಕೆ ಬಂದಿರುವುದು ನಮ್ಮೆಲ್ಲರ ಪುಣ್ಯದ ಫಲ. ಅವರ ಕಾಲದಲ್ಲಿ ಶಿವಯೋಗಾಶ್ರಮ ಅಭಿವೃದ್ಧಿಯತ್ತ ಸಾಗುತ್ತಿದೆ. ಅವರ ಅನುಷ್ಠಾನದ ಪುಣ್ಯದ ಬುತ್ತಿಯನ್ನು ನಮಗೆಲ್ಲರಿಗೂ ಹಂಚುತ್ತಿದ್ದಾರೆ ಎಂದು ಹೇಳಿದರು.
    ಈ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಏನೇನು ಅಭಿವೃದ್ಧಿ ಆಗಬೇಕೋ ಅದನ್ನು ನೆರವೇರಿಸೋಣ. ನಿಮ್ಮ ನಿರೀಕ್ಷೆಯಂತೆ ಈಗಾಗಲೇ ಈ ಕ್ಷೇತ್ರ ಅಭಿವೃದ್ಧಿಯ ಪಥದತ್ತ ಸಾಗುತ್ತಿದೆ. ಬರುವ ದಿನಗಳಲ್ಲಿ ಇದೊಂದು ವಿಶೇಷ ಆಧ್ಯಾತ್ಮಿಕ ಕೇಂದ್ರವಾಗಲಿದೆ ಎಂದರು.
    ಕಾಳೇನಹಳ್ಳಿ ಶಿವಯೋಗಾಶ್ರಮದ ಡಾ. ಶ್ರೀ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಶಿವಯೋಗಾಶ್ರಮ ಎಂದರೆ ಅದು ಮಠವಲ್ಲ. ಮಠಗಳಿಗೆ ವಟುಗಳನ್ನು ತಯಾರು ಮಾಡುವ ಪುಣ್ಯದ ಮಣ್ಣು. ಇದು ಹಾನಗಲ್ ಕುಮಾರಸ್ವಾಮಿಗಳ ಕನಸಿನ ಮಲೆನಾಡಿನ ಶಿವಯೋಗ ಮಂದಿರ ಎಂದು ಹೇಳಿದರು.
    ಸಮಾಜವು ಉದ್ಧಾರದ ಹೆದ್ದಾರಿಯಲ್ಲಿ ಸಾಗಲು ಪ್ರತಿ ಸಮುದಾಯಕ್ಕೂ ಮಠಗಳ ಮತ್ತು ಸ್ವಾಮೀಜಿಗಳ ಅಗತ್ಯವಿದೆ. ಮಠಗಳು ಧರ್ಮ ಪ್ರಸಾರ ಕಾರ್ಯಗಳನ್ನು ಮಾಡುವುದಲ್ಲದೆ ಸಂಸ್ಕಾರವನ್ನು ನಾಡಿಗೆ ಹಂಚುತ್ತವೆ. ಈ ಮಣ್ಣಿನ ಸಂಸ್ಕೃತಿ, ಸಂಸ್ಕಾರ, ಪರಂಪರೆ ಮತ್ತು ಆಚರಣೆಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುತ್ತಿವೆ. ಮಠಗಳು ಸಮಾಜದ ಶ್ರದ್ಧಾ ಕೇಂದ್ರಗಳು. ಅಂತಹ ಮಠಗಳಿಗೆ ಸ್ವಾಮಿಗಳಾಗುವ ವಟುಗಳಿಗೆ ಪೂರ್ವ ಶಿಕ್ಷಣ ಮತ್ತು ಸಂಸ್ಕಾರ ವನ್ನು ನೀಡಿ ಸಮಾಜಕಾರ್ಯಕ್ಕೆ ಅವರನ್ನು ಅಣಿಗೊಳಿಸುವ ಕಾರ್ಯವನ್ನು ಮಹಾಶಿವಯೋಗಿ ಹಾನಗಲ್ ಕುಮಾರಸ್ವಾಮಿ ಗಳು ಮಾಡಿದರು. ಅವರ ಆಶಯಗಳನ್ನೇ ನಾವು ಮುಂದುವರಿಸಿಕೊಂಡು ಹೋಗುತ್ತೇವೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts