More

    ಫುಟ್‌ಪಾತ್ ಅತಿಕ್ರಮಿಸಿ ವ್ಯಾಪಾರ ಜೋರು!

    ಬೆಳಗಾವಿ: ಹಣ್ಣು, ತರಕಾರಿ ವ್ಯಾಪಾರಿಗಳು ರಾಜಾರೋಷವಾಗಿ ಫುಟ್‌ಪಾತ್ ಅತಿಕ್ರಮಿಸಿಕೊಂಡಿದ್ದರೂ ಪಾಲಿಕೆ ಸದಸ್ಯರು, ವಲಯ ಅಧಿಕಾರಿಗಳಾಗಲಿ ಇತ್ತ ತಿರುಗಿ ನೋಡಿಲ್ಲ. ಪಾಲಿಕೆ ಅಧಿಕಾರಿಗಳ ಜಾಣ ಕುರುಡು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

    ಮಹಾನಗರ ಪಾಲಿಕೆ ವ್ಯಾಪ್ತಿಯ ಎಪಿಎಂಸಿ ರಸ್ತೆ, ಕಾಲೇಜು ರಸ್ತೆ, ಆರ್‌ಪಿಡಿ, ಶಹಾಪುರ, ಟಿಳಕವಾಡಿ, ಗಾಂಧಿನಗರ ಹಾಗೂ ಕೇಂದ್ರ ಬಸ್ ನಿಲ್ದಾಣ ಸುತ್ತಮುತ್ತಲಿನ ಪ್ರದೇಶದಲ್ಲಿ ಫುಟ್‌ಪಾತ್ ಒತ್ತುವರಿ ಮಾಡಿಕೊಂಡು ಖಾಸಗಿ ವ್ಯಕ್ತಿಗಳು ಭರ್ಜರಿ ವ್ಯಾಪಾರ-ವಹಿವಾಟು ನಡೆಸುತ್ತಿದ್ದಾರೆ. ಇಲ್ಲಿನ ವ್ಯಾಪಾರದಿಂದ ಮಹಾನಗರ ಪಾಲಿಕೆ ನೈಯಾಪೈಸೆ ತೆರಿಗೆ ಬರುವುದಿಲ್ಲ. ಆದರೂ, ಅಕ್ರಮಗಳಿಗೆ ಕಡಿವಾಣ ಹಾಕಲು ಪಾಲಿಕೆ ಹಿಂದೇಟು ಹಾಕುತ್ತಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

    ನಗರದ ಎಪಿಎಂಸಿ ಮಾರುಕಟ್ಟೆ ರಸ್ತೆ, ಗಾಂಧಿನಗರ, ಆಜಂ ನಗರ ಶಹಾಪುರ, ಖಡೇಬಜಾರ್ ಮಾರುಕಟ್ಟೆ ಪ್ರದೇಶಗಳಲ್ಲಿ ಫುಟ್‌ಪಾತ್ ಮೇಲೆ ನಿತ್ಯ ವ್ಯಾಪಾರ ನಡೆಯುತ್ತಿದೆ. ಕೆಲವರು ಫುಟ್‌ಪಾತ್‌ಗಳ ಮೇಲೆ ಅಂಗಡಿಗಳನ್ನು ನಿರ್ಮಿಸಿಕೊಂಡಿದ್ದಾರೆ. ಹೋಟೆಲ್ ಮಾಲೀಕರು ಫುಟ್‌ಪಾತ್‌ಗಳ ಮೇಲೆ ಟೇಬಲ್, ಕುರ್ಚಿ ಹಾಕಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಕೆಲ ಪ್ರದೇಶಗಳಲ್ಲಿ ಫುಟ್‌ಪಾತ್‌ಗಳನ್ನೇ ಆಟೋ ನಿಲ್ದಾಣ ಮಾಡಿಕೊಳ್ಳಲಾಗಿದೆ. ಆದರೆ, ಮಹಾನಗರ ಪಾಲಿಕೆ ಅಧಿಕಾರಿಗಳಾಗಲಿ, ಪೊಲೀಸರು ತೆರವುಗೊಳಿಸುವ ಕೆಲಸ ಮಾಡುತ್ತಿಲ್ಲ. ಬದಲಾಗಿ ಪರೋಕ್ಷವಾಗಿ ಅವರ ವ್ಯಾಪಾರಕ್ಕೆ ರಕ್ಷಣೆ ನೀಡುವ ಕೆಲಸ ಮಾಡುತ್ತಿದ್ದಾರೆ.

    ನಗರದಲ್ಲಿ ಪಾದಚಾರಿಗಳಿಗೆ ಅನುಕೂಲ ಕಲ್ಪಿಸಿಕೊಡಲು ಮತ್ತು ಸಂಚಾರ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದ ಸ್ಮಾರ್ಟ್‌ಸಿಟಿ, ನಗರೋತ್ಥಾನ ಯೋಜನೆ ಸೇರಿ ವಿವಿಧ ಯೋಜನೆಗಳ ಅಡಿಯಲ್ಲಿ ಕೋಟ್ಯಂತರ ರೂ. ವೆಚ್ಚ ಮಾಡಿ ಫುಟ್‌ಪಾತ್ ನಿರ್ಮಾಣ ಮಾಡಲಾಗಿದೆ. ಆದರೆ, ಫುಟ್‌ಪಾತ್‌ಗಳೆಲ್ಲವೂ ಒತ್ತುವರಿಯಾಗಿ ವ್ಯಾಪಾರದ ಅಡ್ಡೆಗಳಾಗಿವೆ.

    ಪರಿಣಾಮ ಜನರು ರಸ್ತೆಯ ಮೇಲೆ ನಡೆದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ರಸ್ತೆಗಳಲ್ಲಿ ಸಂಚಾರ ದಟ್ಟಣೆ, ಅಪಘಾತಗಳು ಸಂಭವಿಸುತ್ತಿವೆ. ಕೂಡಲೇ ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ಸಂಚಾರಿ ಪೊಲೀಸರು ಫುಟ್‌ಪಾತ್ ತೆರವುಗೊಳಿಸುವ ಕೆಲಸ ಮಾಡಿ ಪಾದಚಾರಿಗಳಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಸ್ಥಳೀಯ ನಿವಾಸಿಗಳಾದ ಮಾರುತಿ ಅನಗೋಳಕರ, ವಿಠ್ಠಲ ಹಡಪದ, ರಾಹುಲ ಮೇತ್ರಿ, ಎಂ.ಕೆ.ಮುಲ್ಲಾ, ಕೆ.ಎಸ್.ನದಾಫ್ ಆಗ್ರಹಿಸಿದ್ದಾರೆ.

    ಸಾರ್ವಜನಿಕರಿಗೆ ಕಿರಿಕಿರಿ

    ನಗರದ ಫುಟ್‌ಪಾತ್ ಮತ್ತು ರಸ್ತೆಗಳನ್ನು ಅಕ್ರಮಿಸಿಕೊಂಡು ವ್ಯಾಪಾರ ನಡೆಸುತ್ತಿರುವ ವ್ಯಾಪಾರಿಗಳು ನಿತ್ಯ ಸಾವಿರಾರು ರೂ. ಆದಾಯ ಗಳಿಸುತ್ತಿದ್ದಾರೆ. ಆದರೆ, ಪಾಲಿಕೆಗೆ ಒಂದೇ ಒಂದು ರೂಪಾಯಿ ತೆರಿಗೆ ಕಟ್ಟುವುದಿಲ್ಲ. ನಗರಲ್ಲಿ ಫುಟ್‌ಪಾತ್‌ಗಳ ಮೇಲೆ ನಿತ್ಯ ಲಕ್ಷಾಂತರ ರೂ. ವಹಿವಾಟು ನಡೆಯುತ್ತಿದೆ. ಸಾರ್ವಜನಿಕರು ಮಾತ್ರ ನಿತ್ಯ ಕಿರಿಕಿರಿ ಅನುಭವಿಸುತ್ತಿದ್ದಾರೆ. ಸರ್ಕಾರವು ಕೂಡಲೇ ಅತಿಕ್ರಮಣ ಮಾಡಿಕೊಂಡಿರುವ ಫುಟ್‌ಪಾತ್‌ಗಳನ್ನು ತೆರವುಗೊಳಿಸುವ ಕೆಲಸ ಮಾಡಬೇಕು ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.

    ಮಹಾನಗರ ಪಾಲಿಕೆಯ ವ್ಯಾಪ್ತಿಯ ಪ್ರದೇಶದಲ್ಲಿ ಫುಟ್‌ಪಾತ್‌ಗಳನ್ನು ಅತಿಕ್ರಮಣ ಮಾಡಿಕೊಂಡು ವ್ಯಾಪಾರ ನಡೆಸುವವರರ ವಿರುದ್ಧ ಮುಲಾಜಿಲ್ಲದೆ ಕ್ರಮ ವಹಿಸಲಾಗುವುದು. ದಂಡುಮಂಡಳಿ ವ್ಯಾಪ್ತಿಯ ಪ್ರದೇಶದಲ್ಲಿ ತೆರವುಗೊಳಿಸಲು ಪಾಲಿಕೆಗೆ ಅಧಿಕಾರ ಇಲ್ಲ. ನಗರದಲ್ಲಿ ಫುಟ್‌ಪಾತ್ ಮೇಲೆ ವ್ಯಾಪಾರ ನಡೆಸುತ್ತಿರುವ ಕುರಿತು ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು.
    | ಡಾ.ರುದ್ರೇಶ ಘಾಳಿ, ಮಹಾನಗರ ಪಾಲಿಕೆ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts