More

    ಫೀಲ್ಡಿಗಿಳಿದ ಖಾಕಿ, ಹೊರಬಂದವರು ಕಕ್ಕಾಬಿಕ್ಕಿ!

    ಬೆಳಗಾವಿ: ಕರೊನಾ ನಿಯಂತ್ರಣಕ್ಕಾಗಿ ಲಾಕ್‌ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ನಗರ ಸೋಮವಾರ ಬಹುತೇಕ ಸ್ತಬ್ಧವಾಗಿತ್ತು. ಬೆಳಗ್ಗೆ 6ರಿಂದ 10 ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿತ್ತು. ಈ ವೇಳೆ ನಡೆದುಕೊಂಡು ಹೋಗುವವರಿಗೆ ಮಾತ್ರ ಅವಕಾಶ ನೀಡಿದ್ದರಿಂದ, ಬೈಕ್ ಸವಾರರಿಗೆ ತೊಂದರೆಯುಂಟಾಯಿತು.

    ಸಕಾರಣವಿಲ್ಲದೆ ಬಂದಿದ್ದವರ ಬೈಕ್‌ಗಳನ್ನು ಜಪ್ತಿ ಮಾಡಿದ ಘಟನೆಗಳೂ ನಡೆದಿವೆ. ನಗರದ ಚನ್ನಮ್ಮ ವೃತ್ತ, ಮಹಾಂತೇಶ ನಗರ ಓವರ್ ಬ್ರಿಡ್ಜ್, ಅಶೋಕ ವೃತ್ತ ಸೇರಿ ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಬೈಕ್ ಹಾಗೂ ವಾಹನ ಸಂಚಾರಕ್ಕೆ ಬ್ರೇಕ್ ಹಾಕಿದರು. ಈ ವೇಳೆ ಅಗತ್ಯ ವಸ್ತುಗಳನ್ನು ಕೈಯಲ್ಲಿ ಹಿಡಿದು ನಡೆದುಕೊಂಡು ಹೋಗುವುದು ಹೇಗೆ ಎಂದು ಪೊಲೀಸರನ್ನು ಸಾರ್ವಜನಿಕರು ಪ್ರಶ್ನಿಸಿದರು. ಡಿಸಿಪಿ ವಿಕ್ರಮ ಆಮ್ಟೆ ಅವರು ಸ್ವತಃ ಚನ್ನಮ್ಮ ವೃತ್ತದಲ್ಲಿ ಪರಿಶೀಲನೆ ನಡೆಸಿದರು.

    ಮುಖ್ಯ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ, ಮುಂಜಾಗ್ರತಾ ಕ್ರಮವಾಗಿ ಪೊಲೀಸರನ್ನು ನಿಯೋಜಿಸಲಾಗಿದೆ. ನಾಕಾಬಂದಿ ಮಾಡಲಾಗಿದೆ. ತುರ್ತು ಸೇವೆಗಾಗಿ ಬರುವವರನ್ನು ಹೊರತುಪಡಿಸಿ ಇತರರಿಗೆ ಅವಕಾಶ ಕೊಡುತ್ತಿಲ್ಲ. ಇದರಿಂದಾಗಿ ಬಹುತೇಕ ರಸ್ತೆಗಳು, ವೃತ್ತಗಳು ಬಿಕೋ ಎನ್ನುತ್ತಿದ್ದವು. ಸಾರಿಗೆ ಬಸ್‌ಗಳ ಕಾರ್ಯಾಚರಣೆಗೆ ಅವಕಾಶ ಇಲ್ಲದಿರುವುದರಿಂದ ನಿಲ್ದಾಣಗಳು ಕೂಡ ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ಆಸ್ಪತ್ರೆಗಳು, ಜನೌಷಧ ಕೇಂದ್ರಗಳು, ಔಷಧ ಅಂಗಡಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು.

    ಗಡಿಗಳು ಬಂದ್: ಅಂತರ ಜಿಲ್ಲಾ ಹಾಗೂ ಅಂತರ್ ರಾಜ್ಯ ಗಡಿಗಳನ್ನು ಬಂದ್ ಮಾಡಲಾಗಿದೆ. ಚೆಕ್‌ಪೋಸ್ಟ್‌ಗಳನ್ನು ಆರಂಭಿಸಿ ಅಲ್ಲಿ ಪೊಲೀಸರು ನಿಗಾ ವಹಿಸಿದ್ದಾರೆ. ಬೆಳಗಾವಿ ನಗರದ ಗಣಪತಿ ಗಲ್ಲಿ, ಶನಿವಾರ ಪೇಟೆ, ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರ-ವಹಿವಾಟಿಗೆ ಮುಂದಾಗುತ್ತಿದ್ದವರ ಅಂಗಡಿ-
    ಮುಂಗಟ್ಟುಗಳನ್ನು ಪಹರೆಯಲ್ಲಿದ್ದ ಪೊಲೀಸರು ಬಂದ್ ಮಾಡಿಸಿದರು. ಪೊಲೀಸರ ಕ್ರಮಕ್ಕೆ ಬೀದಿ ಬದಿಯ ಕೆಲ ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸಿದರು.

    50 ಬೈಕ್ ಸೀಜ್: ಬೆಳಗಾವಿ ನಗರದಲ್ಲಿ ಫೀಲ್ಡ್‌ಗಿಳಿದ ಡಿಸಿಪಿ ವಿಕ್ರಂ ಆಮ್ಟೆ, ಅನಗತ್ಯವಾಗಿ ರಸ್ತೆಗಿಳಿದ 50ಕ್ಕೂ ಹೆಚ್ಚು ಬೈಕ್‌ಗಳನ್ನು ಸೀಜ್ ಮಾಡಿದರು.
    ಕುಂಟುನೆಪ ಹೇಳಿಕೊಂಡು ಓಡಾಡುತ್ತಿರುವವರಿಗೆ ಬಿಸಿ ಮುಟ್ಟಿಸಿದರು. ತಂದೆಯನ್ನು ಜಿಲ್ಲಾಸ್ಪತ್ರೆಗೆ ವಾಕ್ಸಿನೇಷನ್ ಮಾಡಿಸಲು ಬಿಟ್ಟು ಬಳಿಕ ಅಮಾವಾಸ್ಯೆ ನಿಮಿತ್ತ ಹೂವು ಖರೀದಿಸಲು ಬಂದ ವ್ಯಕ್ತಿಯ ಬೈಕ್‌ಅನ್ನು ಪೊಲೀಸರು ಸೀಜ್ ಮಾಡಿದರು. ಎಷ್ಟೇ ವಿನಂತಿ ಮಾಡಿದರೂ ಕೇಳಲಿಲ್ಲ. ಸ್ಟೇಷನ್‌ಗೆ ಬಂದು ಬೈಕ್ ತಗೆದುಕೊಂಡು ಹೋಗುವಂತೆ ವ್ಯಕ್ತಿಗೆ ಸೂಚಿಸಿದರು.

    ಕಾಲಿಗೆ ಬಿದ್ದರೂ ಆಟೋ ಬಿಡದ ಆರಕ್ಷಕರು

    ಲಾಕ್‌ಡೌನ್ ಇದ್ದರೂ ಅನಗತ್ಯವಾಗಿ ರಸ್ತೆಗಳಿದ ಆಟೋವನ್ನು ಪೋಲಿಸಲು ಚನ್ನಮ್ಮ ವೃತ್ತದ ಬಳಿ ಸೀಜ್ ಮಾಡಿದರು. ಆಟೋದ ಮೇಲೆ ‘ವೆಜಿಟೇಬಲ್ ವೆಹಿಕಲ್’ ಎಂದು ಸ್ಟಿಕ್ಕರ್ ಅಂಟಿಸಿ ಚಾಲಕ ಆಟೋ ಓಡಿಸುತ್ತಿದ್ದ. ಅದನ್ನು ಗಮನಿಸಿದ ಪೊಲೀಸರು ಆಟೋ ನಿಲ್ಲಿಸಿ, ಸೀಜ್ ಮಾಡಿದರು. ಸೀಜ್ ಮಾಡಿದ ಆಟೋ ಸ್ಟಾರ್ಟ್ ಮಾಡಲು ಪೊಲೀಸರು ಹರಸಾಹಸಪಟ್ಟರು. ಈ ವೇಳೆ ಆಟೋ ಚಾಲಕ ‘ಕಾಲಿಗೆ ಬೀಳುತ್ತೇನೆ. ಆಟೋ ಮಾಲೀಕರು ಬೇರೆಯವರಿದ್ದಾರೆ. ಆಟೋ ಕೊಡಿ ಸರ್’ ಎಂದು ಚಾಲಕ ಮನವಿ ಮಾಡಿಕೊಂಡರೂ ಬಿಡಲಿಲ್ಲ. ಆಟೋ ಸ್ಟಾರ್ಟ್ ಮಾಡಿಕೊಡುತ್ತೇವೆ ಎಂದು ಹೇಳಿದ ಪೊಲೀಸರು, ನೇರವಾಗಿ ಸ್ಟೇಷನ್‌ಗೆ ಒಯ್ದರು. ಬಳಿಕ ಆಟೋ ಚಾಲಕ ನಡೆದುಕೊಂಡೇ ಕ್ಯಾಂಪ್ ಠಾಣೆಗೆ ಹೋದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts