More

    ಫಲಾನುಭವಿಗಳಿಂದ ಸ್ವಯಂ ಗೃಹ ಪ್ರವೇಶ

    ನರೇಗಲ್ಲ: ಪಟ್ಟಣದ ದ್ಯಾಂಪೂರ ಗ್ರಾಮದ ಹತ್ತಿರ 10 ವರ್ಷಗಳ ಹಿಂದೆ ನಿರ್ವಣವಾಗಿರುವ ಆಶ್ರಯ ಮನೆಗಳನ್ನು ಹಂಚಿಕೆ ಮಾಡದೇ ಇರುವುದರಿಂದ ಬೇಸತ್ತ ಫಲಾನುಭವಿಗಳು, ಎರಡು ದಿನಗಳಿಂದ ಸ್ವಯಂ ಪ್ರೇರಿತರಾಗಿ ಗೃಹಪ್ರವೇಶ ಮಾಡಿದ್ದಾರೆ.

    ಪ.ಪಂ. ವ್ಯಾಪ್ತಿಯ ನರೇಗಲ್ಲ, ಕೋಚಲಾಪೂರ, ದ್ಯಾಂಪೂರ, ಮಲ್ಲಾಪೂರ, ತೋಟಗಂಟಿ, ಕೋಡಿಕೊಪ್ಪದ ಗ್ರಾಮಗಳ ವಸತಿರಹಿರತ ಬಡಜನರಿಗೆ ಆಶ್ರಯ ನೀಡುವ ಉದ್ದೇಶದಿಂದ 2010ರಲ್ಲಿ ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಕಳಕಪ್ಪ ಬಂಡಿ ಅವರು ನರೇಗಲ್ಲ ಪಪಂ ವ್ಯಾಪ್ತಿಯ ದ್ಯಾಂಪೂರ ಗ್ರಾಮದ ಬಳಿ 40 ಎಕರೆ ಜಮೀನು ಖರೀದಿಸಿ ಆಶ್ರಯ ಮನೆಗಳ ನಿರ್ವಣಕ್ಕೆ ಚಾಲನೆ ನೀಡಿದ್ದರು. ಪ್ರತಿ ಎಕರೆಗೆ 3 ಲಕ್ಷ ರೂ.ನಂತೆ ಈ ಭೂಮಿ ಖರೀದಿಸಲಾಗಿತ್ತು.

    ಆದರೆ, ಭೂಮಿಪೂಜೆ ನೆರವೇರಿಸಿ ಒಂದು ವರ್ಷ ಮುಗಿಯುವುದರೊಳಗೆ ಕಾಮಗಾರಿ ಸ್ಥಗಿತಗೊಂಡಿತು. 40 ಎಕರೆ ಪ್ರದೇಶದಲ್ಲಿ 1246 ಮನೆಗಳ ನಿರ್ವಣಕ್ಕೆ ಯೋಜನೆ ಸಿದ್ಧಪಡಿಸಿ, ಮೊದಲನೇ ಹಂತದಲ್ಲಿ 403 ಮನೆಗಳ ನಿರ್ಮಾಣ ಕಾರ್ಯವನ್ನು ನೆಮ್ಮದಿ ಕೇಂದ್ರ ಪ್ರಾರಂಭಿಸಿತ್ತು. ಆದರೆ, 150 ಮನೆಗಳು ನಿರ್ವಣವಾಗಿ 96 ಮನೆಗಳಿಗೆ ಅಡಿಪಾಯ ಹಾಕಿದ್ದೇನೋ ನಿಜ. ನಂತರ ಕಾಮಗಾರಿ ಮುಂದುವರಿಯಲೇ ಇಲ್ಲ. ಅಲ್ಲದೆ, ನಿರ್ವಣವಾದ ಮನೆಗಳು ಅನೈತಿಕ, ಅಕ್ರಮ ಚಟುವಟಿಕೆಯ ತಾಣವಾಗಿ ಮಾರ್ಪಾಡಾಗಿವೆ. ಮನೆ ಹಂಚಿಕೆಗಾಗಿ ಕಾಯ್ದು ಕುಳಿತಿದ್ದ ಫಲಾನುಭವಿಗಳಲ್ಲಿ ನಿರಾಸೆ ಮೂಡಿಸಿತ್ತು. ಜನಪ್ರತಿನಿಧಿಗಳ ಹಾಗೂ ಅಧಿಕಾರ ನಿರ್ಲಕ್ಷ್ಯಂದ ಮನೆಗಳು ಪಾಳು ಬಿದ್ದಿದ್ದವು. 150 ಮನೆಗಳ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲಾಗಿತ್ತು. ಆದರೆ, ಮನೆ ಹಸ್ತಾಂತರ ಮಾಡಿರಲಿಲ್ಲ.

    ಲಾಕ್​ಡೌನ್​ನಿಂದಾಗಿ ಬಡ ಕೂಲಿ ಕಾರ್ವಿುಕರು, ಬೀದಿ ಬದಿ ವ್ಯಾಪಾರಸ್ಥರು ಆರ್ಥಿಕವಾಗಿ ಬಹಳ ಕಷ್ಟ ಅನುಭವಿಸಿದ್ದಾರೆ. ಬಾಡಿಗೆ ಮನೆಯಲ್ಲಿರುವವರಿಗೆ ಬಾಡಿಗೆ ಕಟ್ಟಲಾಗದ ಪರಿಸ್ಥಿತಿ ನಿರ್ವಣವಾಗಿದೆ. ಆದ್ದರಿಂದ, ಫಲಾನುಭವಿಗಳು ಆಶ್ರಯ ಮನೆಗಳಿಗೆ ಲಗ್ಗೆ ಇಟ್ಟಿದ್ದಾರೆ. ಆಶ್ರಯ ಮನೆಗಳ ಮುಂದೆ ತಮ್ಮ ಹೆಸರು ಬರೆದು, ಮನೆಯ ಸುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಿಕೊಂಡು ವಾಸಿಸುತ್ತಿದ್ದಾರೆ.

    10 ವರ್ಷ ಗತಿಸಿದರೂ ಮನೆಗಳನ್ನು ಯಾಕೆ ಹಸ್ತಾಂತರ ಮಾಡಿಲ್ಲ ಎಂಬ ಪ್ರಶ್ನೆಗಳಿಗೆ ಅಧಿಕಾರಿಗಳ ಹತ್ತಿರ ಉತ್ತರವಿಲ್ಲ. ಆದ್ದರಿಂದ ಹಂಚಿಕೆಯಾಗದಿದ್ದರೂ ಮನೆಗಳಿಗೆ ಪ್ರವೇಶ ಮಾಡಲಾಗಿದೆ ಎನುತ್ತಾರೆ ಫಲಾನುಭವಿಗಳು.

    ಮೂಲಸೌಕರ್ಯದ ಕೊರತೆ: ಆಶ್ರಯ ಮನೆಗಳಿಗೆ ತೆರಳಿರುವ ಫಲಾನುಭವಿಗಳಿಗೆ ಯಾವುದೇ ರೀತಿಯ ಮೂಲ ಸೌಕರ್ಯಗಳಿಲ್ಲ. ರಸ್ತೆ, ಕುಡಿಯುವ ನೀರು, ವಿದ್ಯುತ್ ಸಂಪರ್ಕವಿಲ್ಲದೆ ಇರುವುದರಿಂದ ಈ ಮನೆಗಳಲ್ಲಿ ವಾಸಿಸುವುದು ಕಷ್ಟವಾಗುತ್ತಿದೆ. ಆದ್ದರಿಂದ ಪ.ಪಂ ಅಧಿಕಾರಿಗಳು ಆಶ್ರಯ ಮನೆಗಳಿಗೆ ಮೂಲಸೌಕರ್ಯ ಒದಗಿಸಬೇಕು ಎಂದು ಫಲಾನುಭವಿಗಳು ಆಗ್ರಹಿಸಿದ್ದಾರೆ. ಆಶ್ರಯ ಮನೆಗಳಿಗೆ ಫಲಾನುಭವಿಗಳು ಪ್ರವೇಶಿಸಿದ್ದ ಸುದ್ದಿ ತಿಳಿದರೂ ಪ.ಪಂ.ನ ಯಾವೊಬ್ಬ ಅಧಿಕಾರಿಯೂ ಸ್ಥಳಕ್ಕೆ ಭೇಟಿ ನೀಡಿಲ್ಲ. ಮೂಲಸೌಕರ್ಯಗಳ ಸಮಸ್ಯೆಗೆ ಸ್ಪಂದಿಸಿಲ್ಲ.

    ಕೆಲವರಿಂದ ಅಕ್ರಮ ಪ್ರವೇಶ: ಆಶ್ರಯ ಮನೆಯ ಹಕ್ಕು ಪತ್ರ ಹೊಂದಿರದ ಕೆಲವರು ಮನೆಗಳಿಗೆ ಅಕ್ರಮವಾಗಿ ಪ್ರವೇಶಿಸಿದ್ದು, ಹಕ್ಕು ಪತ್ರ ಹೊಂದಿದ ಫಲಾನುಭವಿಗಳೊಂದಿಗೆ ವಾಗ್ವಾದಕ್ಕೆ ಇಳಿಯುತ್ತಿದ್ದಾರೆ. ಇದು ಸಾಕಷ್ಟು ಗೋಂದಲಗಳಿಗೆ ಕಾರಣವಾಗಿದೆ.

    ದ್ಯಾಂಪೂರ ಗ್ರಾಮದ ಆಶ್ರಯ ಮನೆಗಳಿಗೆ ಫಲಾನುಭವಿಗಳು ಅಕ್ರಮವಾಗಿ ಪ್ರವೇಶಿಸಿದ್ದು, ಅವರನ್ನು ಮನೆಗಳಿಂದ ಹೊರ ಹಾಕಲಾಗುತ್ತಿದೆ. ಮನೆಗಳಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಿದ ನಂತರ ಹಂಚಿಕೆ ಮಾಡಲಾಗುತ್ತದೆ. ತದನಂತರ ಫಲಾನುಭವಿಗಳು ಮನೆಗಳನ್ನು ಪ್ರವೇಶಿಸಬಹುದು.
    | ಎಂ.ಎ. ನೂರುಲ್ಲಾಖಾನ, ಪ್ರಭಾರಿ ಮುಖ್ಯಾಧಿಕಾರಿ ಪ.ಪಂ ನರೇಗಲ್ಲ

    ಹತ್ತು ವರ್ಷಗಳಿಂದ ಹಕ್ಕು ಪತ್ರಗಳನ್ನು ಪಡೆದು ಸ್ವಂತ ಸೂರಿನ ಕನಸು ಕಾಣುತ್ತ ಕುಳಿತಿದ್ದೇವೆ. ಆದರೆ, ಅಧಿಕಾರಿಗಳು, ಜನಪ್ರತಿನಿಧಿಗಳು ಮಾತ್ರ ತಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ. ಲಾಕ್​ಡೌನ್ ಹಿನ್ನೆಲೆಯಲ್ಲಿ ದುಡಿಮೆ ಇಲ್ಲದಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮನೆ ಬಾಡಿಗೆ ಕಟ್ಟುವುದು ದುಸ್ತರವಾಗಿದೆ. ಅದ್ದರಿಂದ, ಆಶ್ರಯ ಮನೆಗಳಿಗೆ ಪ್ರವೇಶಿಸಿದ್ದೇವೆ. ಆಶ್ರಯ ಮನೆಗಳು ವಾಸಿಸಲು ಯೋಗ್ಯವಾಗಿಲ್ಲ. ಇಲ್ಲಿ ಯಾವುದೇ ಮೂಲ ಸೌಕರ್ಯಗಳಿಲ್ಲ. ಆದ್ದರಿಂದ, ಪ.ಪಂ ಅಧಿಕಾರಿಗಳು ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು.
    | ರಿಯಾಜ್ ರಾಹುತ, ಸಲಮಾ ರಾಹುತ. ದುರಗಪ್ಪ ಹಲಗಿ, ನೀಲವ್ವ ಹಿರೇಗೌಡ್ರ, ಹುಚ್ಚವ್ವ ಹಳ್ಳದಮನಿ, ಯಮನವ್ವ ಬಾದನಟ್ಟಿ, ಆಶ್ರಯ ಮನೆ ಫಲಾನುಭವಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts