More

    ಪ್ರೀತಂ ಗೌಡ ಪರ ಬೈಕ್ ಮೆರವಣಿಗೆ ಮೂಲಕ ಭರ್ಜರಿ ಪ್ರಚಾರ

    ಹಾಸನ: ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಪ್ರೀತಂ ಜೆ.ಗೌಡ ಪರವಾಗಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಶುಕ್ರವಾರ ನಗರದಲ್ಲಿ ಭರ್ಜರಿ ಬೈಕ್ ರ‌್ಯಾಲಿ ನಡೆಸುವ ಮೂಲಕ ಪ್ರಚಾರ ಮಾಡಿದರು.
    ನಗರದ ಹೊರವಲಯದ ಬೂವನಹಳ್ಳಿ ಹೆಲಿಪ್ಯಾಡಿಗೆ ಆಗಮಿಸಿದ ವಿಜಯೇಂದ್ರ ಸಾವಿರಾರು ಯುವಕರೊಂದಿಗೆ ಸ್ವತಃ ಬೈಕ್ ಓಡಿಸಿದರು. ಬೂವನಹಳ್ಳಿ ಹೆಲಿಪ್ಯಾಡ್‌ನಿಂದ ಆರಂಭಗೊಂಡ ರ‌್ಯಾಲಿಯು ಬಿ.ಎಂ. ರಸ್ತೆ ಮೂಲಕ ಸಂತೆಪೇಟೆ ಮಾರ್ಗವಾಗಿ ಚಲಿಸಿ ನಂತರ ಹಾಸನಾಂಬ ದೇವಸ್ಥಾನ ವೃತ್ತದ ಬಳಿ ಬಹಿರಂಗ ಸಭೆ ನಡೆಸುವ ಮೂಲಕ ಭರ್ಜರಿ ಪ್ರಚಾರ ನಡೆಸಿದರು.
    ರ‌್ಯಾಲಿಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ ವಿಜಯೇಂದ್ರ ಅವರು, ಹಾಸನದಲ್ಲಿ ಈ ಬಾರಿ ಶಾಸಕ ಪ್ರೀತಂ ಗೌಡ 30ರಿಂದ 40 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುವುದು ನಿಶ್ಚಿತ. ಅವರ ಗೆಲುವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ವೈಯಕ್ತಿಕ ದ್ವೇಷದಿಂದ ಅವರ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಕ್ಷೇತ್ರದಲ್ಲಿ ಅವರು ಮಾಡಿರುವಂತಹ ಅಭಿವೃದ್ಧಿ ಕೆಲಸಗಳು ಜನರ ಆರ್ಶಿವಾದದಿಂದ ಯಾರು ಏನೇ ತೊಂದರೆ ಕೊಟ್ಟಿರೂ ಜನರು ಕೈ ಬಿಡುವುದಿಲ್ಲ. ಈ ಬಾರಿ ಪ್ರೀತಂ ಗೌಡ ನೂರಕ್ಕೆ ನೂರರಷ್ಟು ಭರ್ಜರಿ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
    ರಾಜ್ಯಾದ್ಯಂತ ಸುಮಾರು 80 ಕ್ಷೇತ್ರದ ಕಡೆ ಸಂಚರಿಸಿ ಪಕ್ಷದ ಪರವಾಗಿ ಪ್ರಚಾರ ಮಾಡಿದ್ದೇನೆ. ಎಲ್ಲ ಕಡೆಯೂ ನಿರೀಕ್ಷೆಗೆ ಮೀರಿ ಉತ್ತಮ ವಾತಾವರಣ ನಮ್ಮ ಪಕ್ಷಕ್ಕೆ ನಿರ್ಮಾಣವಾಗಿದೆ. ಈ ಬಾರಿ ನಾವು ಕನಿಷ್ಠ 130 ಸ್ಥಾನವನ್ನು ಗೆಲ್ಲುವ ಮೂಲಕ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವುದು ಶತಃಸಿದ್ಧ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ಪ್ರವಾಸ ನಮ್ಮ ಪಕ್ಷಕ್ಕೆ ಇನ್ನಷ್ಟು ಶಕ್ತಿ ತಂದಿದೆ. ಇದು ಬಿಜೆಪಿಗೆ ಅನುಕೂಲವಾಗಿರುವುದರಿಂದ ಸರ್ಕಾರ ರಚನೆ ಮಾಡುವುದನ್ನ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಯಾರ ಬೆಂಬಲವಿಲ್ಲದೆ ಸ್ವತಂತ್ರವಾಗಿ ಸರ್ಕಾರ ರಚನೆ ಮಾಡುತ್ತೇವೆ. ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಹಿಡಿಯುವುದು ನಿಶ್ಚಿತ ಎಂದರು.
    ಬಿಜೆಪಿ ಭ್ರಷ್ಟರ ದರಪಟ್ಟಿ ಎಂದು ಕಾಂಗ್ರೆಸ್ ಜಾಹಿರಾತು ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ವಿಜಯೇಂದ್ರ ಈ ಬಗ್ಗೆ ಈಗಾಗಲೇ ಕಾನೂನು ತಜ್ಞರೊಂದಿಗೆ ಚರ್ಚೆ ಮಾಡಿ ಮಾನನಷ್ಟ ಮೊಕದ್ದಮೆ ಹಾಕುವುದರ ಬಗ್ಗೆ ಚಿಂತಿಸಲಾಗಿದೆ. ಪಕ್ಷದ ವರಿಷ್ಠರು ಈ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಎಚ್ಚರಿಸಿದರು.
    ಶಾಸಕ ಪ್ರೀತಂ ಗೌಡ ಮಾತನಾಡಿ, ನನ್ನನ್ನು ತೆಗೆಯುವುದಕ್ಕಾಗಿ ಹಲವಾರು ಜನರು ಹವಣಿಸುತ್ತಿದ್ದಾರೆ. ಆದರೆ ಅದು ಸಾಧ್ಯವಿಲ್ಲ. ಮತ್ತೊಮ್ಮೆ ಈ ಕ್ಷೇತ್ರದಲ್ಲಿ ಗೆದ್ದು ಇದೇ ರೀತಿ ವಿಜಯೋತ್ಸವವನ್ನು ಮೇ 13ರಂದು ಆಚರಿಸುವುದು ಶತಃಸಿದ್ಧ ಎಂದು ಹೇಳಿದರು.
    ಈ ವೇಳೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಲಲಾಟ ಮೂರ್ತಿ, ಮುಖಂಡರಾದ ಶೋಭನ್ ಬಾನು, ಈಶ್ವರ್, ವೇಣುಗೋಪಾಲ್ ಇತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts