More

    ಪ್ರಾಂತ ರೈತ ಸಂಘದ ಕಾರ್ಯಕರ್ತರಿಂದ ಪ್ರತಿಭಟನೆ

    ಮಳವಳ್ಳಿ: ಮಂಡ್ಯ ನಗರದಲ್ಲಿ ಚಳವಳಿನಿರತ ರೈತರ ಮೇಲಿನ ಪೊಲೀಸ್ ದೌರ್ಜನ್ಯ ಖಂಡಿಸಿ ಹಾಗೂ ಟನ್ ಕಬ್ಬಿಗೆ 5 ಸಾವಿರ ರೂ., ಲೀಟರ್ ಹಾಲಿಗೆ ಕನಿಷ್ಠ 40 ರೂ. ಬೆಲೆ ನಿಗದಿಪಡಿಸಬೇಕೆಂದು ಆಗ್ರಹಿಸಿ ಗುರುವಾರ ಪಟ್ಟಣದಲ್ಲಿ ಪ್ರಾಂತ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

    ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಜಮಾವಣೆಗೊಂಡ ಹೋರಾಟಗಾರರು, ಅನಂತರಾಮ್ ವೃತ್ತದವರೆಗೆ ರ‌್ಯಾಲಿ ಮೂಲಕ ತೆರಳಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

    ಸಂಘಟನೆಯ ತಾಲೂಕು ಅಧ್ಯಕ್ಷ ಎನ್.ಎಲ್.ಭರತ್‌ರಾಜ್ ಮಾತನಾಡಿ, ಕಳೆದ 52 ದಿನಗಳಿಂದ ಹಗಲು-ರಾತ್ರಿ ಹೋರಾಟ ನಡೆಸುತ್ತಿರುವ ರೈತರನ್ನು ಬಂಧಿಸಿ ಮತ್ತು ಅವರ ಟೆಂಟ್ ಕಿತ್ತೆಸೆದಿರುವ ಪೊಲೀಸ್ ಇಲಾಖೆ, ಆಳುವ ಸರ್ಕಾರದ ಅಡಿಯಾಳಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

    ಪೊಲೀಸರು ಸಂವಿಧಾನದತ್ತವಾಗಿ ಕರ್ತವ್ಯ ನಿರ್ವಹಿಸಬೇಕೆಂದು ಒತ್ತಾಯಿಸಿದ ಅವರು, ರಾಜ್ಯ ಹಾಗೂ ಕೇಂದ್ರ ಸರ್ಕಾರ ಚುನಾವಣೆಗೆ ಮೊದಲು ದೇಶದ ಜನತೆಗೆ ನೀಡಿದ್ದ ಭರವಸೆಯನ್ನು ಈಡೇರಿಸದೆ ವಂಚನೆ ಮಾಡಿವೆ. ಡಾ.ಸ್ವಾಮಿನಾಥನ್ ಆಯೋಗದ ವರದಿಯಂತೆ ಕೃಷಿ ಉತ್ಪನ್ನಗಳಿಗೆ ತಗಲುವ ಖರ್ಚಿನ ಜತೆಗೆ, ಶೇ.50ರಷ್ಟು ಲಾಭಾಂಶ ಸೇರಿಸಿ ಬೆಂಬಲ ಬೆಲೆ ನಿಗದಿಪಡಿಸುತ್ತೇವೆಂದು ನೀಡಿದ್ದ ಭರವಸೆ ಹುಸಿಯಾಗಿದೆ ಎಂದರು.

    ಅಮಿತ್ ಷಾ ಮಂಡ್ಯಕ್ಕೆ ಭೇಟಿ ನೀಡುತ್ತಿರುವುದರಿಂದ ರೈತ ಚಳವಳಿಯನ್ನು ಹತ್ತಿಕ್ಕಲು ಹೊರಟಿದ್ದಾರೆ. ಕಾಂಗ್ರೆಸ್ ಜನತಾದಳದವರು ಅಧಿವೇಶನದಲ್ಲಿ ರೈತರ ಸಂಕಷ್ಟಗಳ ಬಗ್ಗೆ ಚರ್ಚೆ ನಡೆಸದೆ ಅನಗತ್ಯ ವಿಚಾರಕ್ಕೆ ಒತ್ತು ನೀಡುತ್ತಿದ್ದಾರೆ. ಜನರ ಸಂಕಷ್ಟಗಳಿಗೆ ಆಳುವ ಸರ್ಕಾರಗಳ ನೀತಿಗಳು ಕಾರಣ ಎಂಬುದನ್ನು ಜನತೆ ಮುಂದೆ ತಿಳಿಸಿ ಅವುಗಳ ಇತ್ಯರ್ಥಕ್ಕೆ ಹೋರಾಟವೇ ದಾರಿ ಎಂಬುದನ್ನು ಮರೆಮಾಚಿ, ದೇವಸ್ಥಾನಗಳ ಯಾತ್ರೆಗೆ ಎಲ್ಲ ಪಕ್ಷದವರು ಉಚಿತ ಬಸ್ ವ್ಯವಸ್ಥೆ ಕಲ್ಪಿಸಿ ಅಮಾಯಕ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.

    ರೈತರು, ಕೂಲಿಕಾರ ಕಾರ್ಮಿಕರು, ಮಹಿಳೆಯರೆಲ್ಲರು ತಮ್ಮ ಸಂಕೋಲೆಗಳಿಂದ ಹೊರಬರಲು ಸಂಘಟಿತ ಹೋರಾಟಕ್ಕೆ ಮುಂದಾಗಬೇಕೆಂದು ಮನವಿ ಮಾಡಿದರು. ಪ್ರತಿಭಟನೆಯಲ್ಲಿ ಕಾರ್ಯದರ್ಶಿ ಎನ್.ಲಿಂಗರಾಜಮೂರ್ತಿ, ಜಿ.ರಾಮಕೃಷ್ಣ , ಶಿವಕುಮಾರ್, ಗುರುಸ್ವಾಮಿ, ಆನಂದ್, ತಿಮ್ಮೇಗೌಡ, ಮರಿಲಿಂಗೇಗೌಡ, ಸಾಗ್ಯ ರಾಜು, ಪ್ರಕಾಶ್‌ಮೂರ್ತಿ, ಚಿಕ್ಕಸ್ವಾಮಿ, ಗಣೇಶ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts