More

    ಪ್ರಸ್ತುತ ಸಮಾಜಕ್ಕೆ ಆತ್ಮಚಿಂತನೆ ಅವಶ್ಯವಿದೆ

    ಚಿಂತಾಮಣಿ: ಮಾನವರಿಗೆ ಉಸಿರಾಟದಂತೆ ಆತ್ಮಚಿಂತನೆಯೂ ಅಗತ್ಯವಿದೆ ಎಂದು ತಿರುಪತಿ ತಿರುಮಲ ದೇವಸ್ಥಾನದ ದಾಸ ಸಾಹಿತ್ಯ ಯೋಜನೆ ವಿಶೇಷಾಧಿಕಾರಿ ಆನಂದತೀರ್ಥಚಾರ್ಯರು ಅಭಿಪ್ರಾಯಪಟ್ಟರು.

    ಕೈವಾರದ ಶ್ರೀಯೋಗಿನಾರೇಯಣ ಮಠದಲ್ಲಿ ಶನಿವಾರ ಆಯೋಜಿಸಿದ್ದ ಇಂದಿನ ಸಮಾಜಕ್ಕೆ ಆತ್ಮಚಿಂತನೆಯ ಅವಶ್ಯಕತೆ ಎಂಬ ಚಿಂತನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಮಾನವರಲ್ಲಿ ಚಿಂತನೆ ಬಹಳ ಅಗತ್ಯವಾಗಿದೆ. ಮರಿಮೀನು ಹಸಿವಾದಾಗ ತನ್ನ ತಾಯಿಯನ್ನು ಸ್ಮರಿಸುತ್ತಲೇ, ಚಿಂತಿಸುತ್ತಲೇ ಇರುತ್ತದೆ. ತಾಯಿ ಕಾಣಿಸಿದ ನಂತರ ಅದರ ಹಸಿವು ಮಾಯವಾಗುತ್ತದೆ. ಜ್ಞಾನವಿಲ್ಲದ ಮೀನಿಗೆ ಇಷ್ಟು ಚಿಂತನೆ ಇದೆ ಎಂದಾದ ಮೇಲೆ ಇನ್ನು ಜ್ಞಾನ ಪಡೆದ ಮಾನವರಿಗೆ ಇನ್ನೆಷ್ಟು ಚಿಂತನೆ ಇರಬೇಕು. ಪ್ರತಿಯೊಂದು ಸಮಸ್ಯೆಗಳಿಗೂ ಪರಿಹಾರ ಇರುತ್ತದೆ ಎಂದರು.

    ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ಮಾತನಾಡಿ,ಜನರಲ್ಲಿ ಸ್ವಾರ್ಥ ಹೆಚ್ಚಾದಂತೆ ಸಮಾಜದ ಸ್ವಾಸ್ಥ್ಯ ಕೆಡುತ್ತದೆ. ಸಮಷ್ಟಿಯ ಸುಖ ಬಯಸುವವರಿಗಿಂತ ವ್ಯಕ್ತಿಗತವಾದ ಸುಖ ಬಯಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಆರೋಗ್ಯಕರವಾದ ಸಮಾಜದ ಲಕ್ಷಣವಲ್ಲ ಎಂದು ತಿಳಿಸಿದರು.

    ವಿದ್ವಾಂಸ ಡಾ.ಎನ್.ಕೆ.ರಾಮಶೇಷನ್ ಮಾತನಾಡಿ, ಅಧುನಿಕ ತಂತ್ರಜ್ಞಾನಗಳಿಂದ ಪುರಾತನ ಸಹಜವಾದ ಜ್ಞಾನಶಕ್ತಿ ಮರೆಯುತ್ತಿದ್ದೇವೆ. ಬದುಕಿರುವಷ್ಟು ಕಾಲ ಯಾರಿಗೂ ತೊಂದರೆ ಕೊಡದೆ ಬದುಕುತ್ತೇನೆಂಬ ಪ್ರತಿಜ್ಞೆ ಮಾಡಬೇಕು. ಪ್ರತಿಯೊಬ್ಬರ ಜೀವನದಲ್ಲಿಯೂ ಗುರುವಿನ ಪಾತ್ರ ಪ್ರಮುಖವಾದುದು ಎಂದರು.

    ಕಾರ್ಯಕ್ರಮಕ್ಕೂ ಮೊದಲು ಶ್ರೀಯೋಗಿನಾರೇಯಣ ತಾತಯ್ಯನವರ ಮಠದ ಮೂಲ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ತಾತಯ್ಯನವರ ಉತ್ಸವ ವಿಗ್ರಹವನ್ನು ಪಲ್ಲಕ್ಕಿಯಲ್ಲಿ ಸಭಾಂಗಣಕ್ಕೆ ಕರೆತಂದು ವೇದಿಕೆಯಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು.

    ಅಧ್ಯಾತ್ಮ ಚಿಂತಕ ಡಾ.ಬಾಬುಕೃಷ್ಣಮೂರ್ತಿ ಉಪನ್ಯಾಸ ನೀಡಿದರು. ಶ್ರೀಯೋಗಿನಾರೇಯಣ ಸಂಕೀರ್ತನಾ ಯೋಜನೆ ಸಂಚಾಲಕ ವಾನರಾಶಿ ಬಾಲಕೃಷ್ಣ ಭಾಗವತರ್ ಪ್ರಾರ್ಥನೆ ನೆರವೇರಿಸಿದರು. ಕೈವಾರ ಮಠ ಟ್ರಸ್ಟ್ ಉಪಾಧ್ಯಕ್ಷ ಜೆ.ವಿಭಾಕರರೆಡ್ಡಿ, ಖಜಾಂಚಿ ಆರ್.ಪಿ.ಎಂ.ಸತ್ಯನಾರಾಯಣ, ಸದಸ್ಯರಾದ ಬಾಗೇಪಲ್ಲಿ ಕೆ.ನರಸಿಂಹಪ್ಪ, ಗಣೇಶ್ ಚಂದ್ರಪ್ಪ, ಕೆ.ಎಂ.ತ್ಯಾಗರಾಜ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts