More

    ಪ್ರಸಿದ್ಧ ಬಡಾವಣೆಗಳಲ್ಲಿ ಅಭಿವೃದ್ಧಿ ಮರೀಚಿಕೆ

    ಧಾರವಾಡ: ಹು-ಧಾ ಮಹಾನಗರ ಪಾಲಿಕೆ ಚುನಾವಣೆ ಅತ್ಯಂತ ಚುರುಕಿನಿಂದ ನಡೆದಿದ್ದು, ಈಗಾಗಲೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಕೆಲ ಅಭ್ಯರ್ಥಿಗಳಿಗೆ ಹಳೇ ವಾರ್ಡ್​ನಲ್ಲೇ ಸ್ಪರ್ಧೆಗೆ ಅವಕಾಶ ಸಿಕ್ಕಿದ್ದರೆ, ಇನ್ನು ಕೆಲವೆಡೆ ಹೊಸಬರಿಗೆ ಅವಕಾಶ ಸಿಕ್ಕಿದೆ. ಇದೇ ಪರಿಸ್ಥಿತಿ 23ರಿಂದ 26ರ ವಾರ್ಡ್​ಗಳಲ್ಲೂ ಇದೆ.

    ಈ ವಾರ್ಡ್​ಗಳು ನಗರದ ಹೊರ ವಲಯದಲ್ಲಿವೆ. ಕೆಲವೆಡೆ ಉತ್ತಮ ಅಭಿವೃದ್ಧಿ ಕಾರ್ಯಗಳು ನಡೆದಿದ್ದರೆ, ಇನ್ನುಳಿದವುಗಳಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ. ಎಲ್ಲ ಕಡೆಗಳಲ್ಲೂ ರಸ್ತೆ, ಬೀದಿ ದೀಪ, ಕಸ ವಿಲೇವಾರಿಯದ್ದೇ ಪ್ರಮುಖ ಸಮಸ್ಯೆ. ಕೆಲ ವಾರ್ಡ್​ಗಳಲ್ಲಿ ಸಾರ್ವಜನಿಕ ಶೌಚಗೃಹವೂ ಇಲ್ಲ.

    ವಾರ್ಡ್ 26ರಲ್ಲಿನ ವನಸಿರಿನಗರ, ಉದಯಗಿರಿ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಜನಪ್ರತಿನಿಧಿಗಳ ನಿರ್ಲಕ್ಷ್ಯಂದ ಅಭಿವೃದ್ಧಿ ಮರೀಚಿಕೆಯಾಗಿದೆ. ಈ ಪ್ರದೇಶಗಳಲ್ಲಿ ತಾತ್ಕಾಲಿಕ ವ್ಯವಸ್ಥೆಗಳಿವೆಯೇ ಹೊರತು ಪಕ್ಕಾ ಮೂಲ ಸೌಕರ್ಯಗಳಿಲ್ಲ. ರಸ್ತೆ, ಬೀದಿ ದೀಪಗಳ ವ್ಯವಸ್ಥೆ ಇಲ್ಲ. ಕಸ ವಿಲೇವಾರಿಯೂ ಸರಿಯಾಗುತ್ತಿಲ್ಲ. ಇನ್ನು ಗಟಾರ್ ವ್ಯವಸ್ಥೆಯೂ ಇಲ್ಲದ ಕಾರಣಕ್ಕೆ ಮಳೆಗಾಲದಲ್ಲಿ ಹೊಲಸು ನೀರು ರಸ್ತೆ ತುಂಬೆಲ್ಲ ಹರಿಯುತ್ತದೆ. ಇವೆಲ್ಲ ಕಾರಣಗಳಿಂದ ಈ ಪ್ರದೇಶಗಳು ಇನ್ನೂ ಅಭಿವೃದ್ಧಿ ಕಾಣದೆ ಸೊರಗುವಂತಾಗಿವೆ.

    ಈ ವಾರ್ಡ್​ಗಳ ಪ್ರಮುಖ ಬಡಾವಣೆಗಳಾದ ಗಾಂಧಿ ನಗರ, ಯಾಲಕ್ಕಿ ಶೆಟ್ಟರ್ ಕಾಲನಿ, ಕೆಎಚ್​ಬಿ ಕಾಲನಿ, ದಾನೇಶ್ವರಿ ನಗರಗಳಲ್ಲಿ ಬಹುತೇಕ ರಸ್ತೆಗಳು ಹಾಳಾಗಿವೆ. ಈ ವಿಚಾರವಾಗಿ ಅಲ್ಲಿನ ನಿವಾಸಿಗಳು ಹಲವು ಬಾರಿ ಪ್ರತಿಭಟನೆಗಳನ್ನು ನಡೆಸಿದ್ದರೂ ಜನಪ್ರತಿನಿಧಿಗಳು ಮಾತ್ರ ಶಾಶ್ವತ ಪರಿಹಾರ ಕಲ್ಪಿಸದೆ ನೆಪ ಹೇಳುತ್ತಲೇ ಬಂದಿದ್ದಾರೆ.

    ಈ ವಾರ್ಡ್​ಗಳ ವ್ಯಾಪ್ತಿಯ ಕೆಲ ಬಡಾವಣೆಗಳಲ್ಲಿ ಕಸ ವಿಲೇವಾರಿ ಅಷ್ಟೊಂದು ಸರಿಯಾಗಿ ನಡೆಯುತ್ತಿಲ್ಲ ಎಂಬುದಕ್ಕೆ ರಸ್ತೆಗಳ ಪಕ್ಕದಲ್ಲಿನ ರಾಶಿ ರಾಶಿ ಕಸವೇ ಸಾಕ್ಷಿಯಾಗಿದೆ. ಕೆಲ ಬಡಾವಣೆಗಳಲ್ಲಿ ಮಾತ್ರ ಸಿಸಿ ರಸ್ತೆಗಳಾಗಿವೆ. ಹಲವೆಡೆಗಳಲ್ಲಿ ರಸ್ತೆ ದುರಸ್ತಿಗೆ ಇನ್ನೂ ಕಾಲ ಕೂಡಿ ಬಂದಂತೆ ಕಾಣುತ್ತಿಲ್ಲ. ಗಟಾರ್, ಒಳಚರಂಡಿ ಕಾಮಗಾರಿಗಳು ಅರ್ಧಂಬರ್ಧ. ಒಂದು ವಾರ್ಡ್ ಸಹ ಸಂಪೂರ್ಣ ಅಭಿವೃದ್ಧಿ ಕಂಡ ಮಾತೇ ಇಲ್ಲ. ಎಲ್ಲ ಕಡೆಗಳಲ್ಲೂ ಜನರು ಒಂದಿಲ್ಲ ಒಂದು ಸಮಸ್ಯೆ ಎದುರಿಸುವಂತಾಗಿದೆ. ಚುನಾವಣೆ ಸಂದರ್ಭದಲ್ಲಿ ಅಭಿವೃದ್ಧಿ ಮಾಡುತ್ತೇವೆ ಎನ್ನುತ್ತಾರೆ. ಆದರೆ, ಆಯ್ಕೆಯಾದ ಬಳಿಕ ಲಕ್ಷ್ಯ ವಹಿಸುವುದಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ ಇಲ್ಲಿನ ಜನರು.

    ಈ ಚುನಾವಣೆಯಲ್ಲಿ ಆಯ್ಕೆಯಾಗುವವರು ಈ ಬಾರಿಯಾದರೂ ನಮ್ಮ ಸಮಸ್ಯೆಗಳಿಗೆ ಪರಿಹಾರ ನೀಡಬಹುದು ಎಂಬ ಭರವಸೆಯಲ್ಲಿ ಜನರಿದ್ದಾರೆ. ಆದರೆ, ಚುನಾವಣೆಗೂ ಪೂರ್ವ ಭರವಸೆ ನೀಡಿದಂತೆ ಕಾರ್ಯ ನಡೆಸುವರೇ ಎಂಬುದನ್ನು ಕಾದು ನೋಡಬೇಕಿದೆ.

    ಕಣದಲ್ಲಿರುವ ಅಭ್ಯರ್ಥಿಗಳು:

    ವಾರ್ಡ್ 23ರಲ್ಲಿ ಬಿಜೆಪಿಯಿಂದ ಸಂಜಯ ಕಪಟಕರ, ಕಾಂಗ್ರೆಸ್​ನಿಂದ ಮಂಜುನಾಥ ಬಡಕುರಿ, ವಾರ್ಡ್ 24ರಲ್ಲಿ ಬಿಜೆಪಿಯಿಂದ ಶಿವಣ್ಣ ಬಡವಣ್ಣವರ, ಕಾಂಗ್ರೆಸ್​ನಿಂದ ಮಯೂರ ಮೋರೆ, ವಾರ್ಡ್ 25ರಲ್ಲಿ ಬಿಜೆಪಿಯಿಂದ ಮಂಜುಳಾ ಸಾಖರೆ, ಕಾಂಗ್ರೆಸ್​ನಿಂದ ನೇತ್ರಾವತಿ ತಳವಾರ, ಜೆಡಿಎಸ್​ನಿಂದ ಲಕ್ಷ್ಮೀ ಹಿಂಡಸಗೇರಿ ಮತ್ತು ವಾರ್ಡ್ 26ರಲ್ಲಿ ಬಿಜೆಪಿಯಿಂದ ನೀಲವ್ವ ಅರವಾಳದ, ಕಾಂಗ್ರೆಸ್​ನಿಂದ ಲಕ್ಷ್ಮೀ ಜಾಧವ ಸ್ಪರ್ಧೆ ನಡೆಸಿದ್ದಾರೆ.

    ಹೊಗೆ ಕಿರಿಕಿರಿ

    ಹೊಸಯಲ್ಲಾಪುರ ಸ್ಮಶಾನ ಬಳಿಯ ತ್ಯಾಜ್ಯ ಸಂಗ್ರಹಣಾ ಸ್ಥಳದಿಂದ ನಿತ್ಯವೂ ಹೊರ ಸೂಸುವ ಹೊಗೆ, ಹೊಲಸು ವಾಸನೆ ದಾನೇಶ್ವರಿನಗರ ಮತ್ತು ಸುತ್ತಲಿನ ಪ್ರದೇಶಗಳ ಜನರು ನರಕಯಾತನೆ ಅನುಭವಿಸುವಂತಾಗಿದೆ. ಈ ಸಮಸ್ಯೆ ಪರಿಹರಿಸುವಂತೆ ಬೃಹತ್ ಪ್ರಮಾಣದ ಪ್ರತಿಭಟನೆಗಳನ್ನು ನಡೆಸಿದ್ದರೂ ಸಮಸ್ಯೆ ಬಗೆಹರಿದಿಲ್ಲ. ಸದ್ಯ ತ್ಯಾಜ್ಯ ವಿಲೇವಾರಿ ಮಾಡುವ ಕಾರ್ಯ ನಡೆದಿದ್ದು, ಈ ಸಮಸ್ಯೆಯಿಂದ ಪಾರಾಗಲು ಇನ್ನೂ ಕೆಲ ವರ್ಷಗಳೇ ಬೇಕಿದೆ.

    ಶಾಲ್ಮಲಾ ನದಿ ಉಗಮ ಸ್ಥಾನ

    ವಾರ್ಡ್ 25ರಲ್ಲಿ ಅನೇಕ ವಿಶೇಷತೆಗಳನ್ನು ಹೊಂದಿದೆ. ಈ ವಾರ್ಡಿನ ವ್ಯಾಪ್ತಿಯಲ್ಲಿ ಶಾಲ್ಮಲಾ ನದಿ ಉಗಮಸ್ಥಾನ, ಸೋಮೇಶ್ವರ ದೇವಸ್ಥಾನ ಇದೆ. ಇದಲ್ಲದೆ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ರಾಜೀವಗಾಂಧಿನಗರದಲ್ಲಿ ಬಡ ಜನರಿಗೆ ಮನೆಗಳನ್ನು ಈಗಾಗಲೇ ನಿರ್ಮಾಣ ಮಾಡಿದ್ದು, ಹಂಚಿಕೆಯೊಂದೆ ಬಾಕಿ ಇದೆ.

    ಮತದಾರರ ವಿವರ

    23– 9250

    24– 7355

    25– 9146

    26– 11064

    ವಾರ್ಡ್ ವ್ಯಾಪ್ತಿ

    ವಾರ್ಡ್ ವ್ಯಾಪ್ತಿ ದಾನೇಶ್ವರಿನಗರ, ಸಪ್ತಗಿರಿ, ವನಶ್ರೀನಗರ, ಬನಶ್ರೀನಗರ, ಶಾರದಾ ಕಾಲನಿ, ಯಾಲಕ್ಕಿಶೆಟ್ಟರ್ ಕಾಲನಿ, ನವಲೂರ ಜನತಾ ಪ್ಲಾಟ್, ಅಗಸರ ಓಣಿ, ಬಡಿಗೇರ ಓಣಿ, ರಾಯಾಪುರ ಕೈಗಾರಿಕಾ ಪ್ರದೇಶ, ವಿನಾಯಕನಗರ, ಗಾಂಧಿನಗರ, ಕಲಘಟಗಿ ರಸ್ತೆ, ಸಿದ್ದೇಶ್ವರನಗರ, ಬಸವನಗರ, ಚೌಡಿ ಓಣಿ, ಜೋಗೆಲ್ಲಾಪುರ, ತಡಸಿನಕೊಪ್ಪ, ಸತ್ತೂರ, ಉದಯಗಿರಿ, ವನಸಿರಿನಗರ, ಸುತಗಟ್ಟಿ ಹಾಗೂ ಸುತ್ತಲಿನ ಪ್ರದೇಶಗಳು.

    ವನಸಿರಿನಗರ, ಉದಯಗಿರಿ ಬಡಾವಣೆರಸ್ತೆಗಳು ಹದೆಗಟ್ಟಿವೆ. ಓಡಾಡುವುದು ಕಷ್ಟ. ಬಡಾವಣೆಗಳನ್ನು ಹುಡಾದಿಂದ ಮಹಾನಗರ ಪಾಲಿಕೆಗೆ ನೀಡಲಾಗಿದೆ. ಆದರೆ, ಯಾರೂ ಕಾಳಜಿ ವಹಿಸದ ಕಾರಣಕ್ಕೆ ಅಭಿವೃದ್ಧಿ ಕಾಣದಂತಾಗಿದೆ. ರಸ್ತೆಗಳ ಸುಧಾರಣೆ ಸೇರಿ ಮೂಲ ಸೌಕರ್ಯಗಳನ್ನು ನೀಡಿದರೆ ಬಡಾವಣೆಗಳು ಇನ್ನೂ ಚಂದ ಕಾಣಲಿವೆ.

    . ರಮ್ಯಾ ಕುಲಕರ್ಣಿ, ವಾರ್ಡ್ 26

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts