More

    ಪ್ರವಾಹ ಪರಿಸ್ಥಿತಿ ತಪ್ಪಿಸಲು ಕೆಪಿಸಿಯಿಂದ ಮುಂಜಾಗ್ರತೆ ಕ್ರಮ

    ಸುಭಾಷ ಧೂಪದಹೊಂಡ ಕಾರವಾರ: ಜೂನ್​ನಿಂದಲೇ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕಾಳಿ ಜಲವಿದ್ಯುತ್ ಯೋಜನೆಯ ಅಣೆಕಟ್ಟೆಗಳಿಗೆ ನೀರಿನ ಹರಿವು ಹೆಚ್ಚಿದೆ. ಈ ಅಣೆಕಟ್ಟುಗಳ ಉಸ್ತುವಾರಿ ನೋಡಿಕೊಳ್ಳುವ ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿ) ಈ ಬಾರಿ ಪ್ರವಾಹ ಪರಿಸ್ಥಿತಿ ತಪ್ಪಿಸಲು ಸಾಕಷ್ಟು ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುತ್ತಿದೆ.

    ಸೂಪಾ, ನಾಗಝುರಿ, ಕದ್ರಾ, ಕೊಡಸಳ್ಳಿ ನಾಲ್ಕೂ ವಿದ್ಯುದಾಗಾರಗಳಲ್ಲಿ ಆದಷ್ಟು ಹೆಚ್ಚು ವಿದ್ಯುತ್ ಉತ್ಪಾದನೆ ಮಾಡಿ ನೀರಿನ ಸದುಪಯೋಗಕ್ಕೆ ಕೂಡ ಕೆಪಿಸಿ ನಿರ್ಧರಿಸಿದೆ. ಜೂನ್ 17ರಂದು ಕದ್ರಾದಲ್ಲಿ 1.356 ಮಿಲಿಯನ್ ಯುನಿಟ್, ಕೊಡಸಳ್ಳಿಯಲ್ಲಿ 1,444, ಸೂಪಾದಲ್ಲಿ 1,824, ನಾಗಝುರಿಯಲ್ಲಿ 13.084 ಮಿಲಿಯನ್ ಯುನಿಟ್ ವಿದ್ಯುತ್ ಉತ್ಪಾದಿಸಲಾಗಿದೆ.

    ಈ ಮೊದಲು ಜೂನ್ ತಿಂಗಳಲ್ಲಿ ಸಾಮಾನ್ಯವಾಗಿ ಸೂಪಾ ಅಣೆಕಟ್ಟೆಯಲ್ಲಿ ವಿದ್ಯುತ್ ಉತ್ಪಾದನೆ ಮಾಡದೇ ನೀರು ಸಂಗ್ರಹಿಸಲಾಗುತ್ತಿತ್ತು. ಕೊಡಸಳ್ಳಿ, ಕದ್ರಾದಿಂದ ಹೆಚ್ಚು ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿತ್ತು. ಈ ಬಾರಿ ಜೂನ್ ಎರಡನೇ ವಾರದಿಂದಲೇ ಸೂಪಾ ವಿದ್ಯುದಾಗಾರದಲ್ಲೂ ವಿದ್ಯುತ್ ಉತ್ಪಾದನೆ ಪ್ರಾರಂಭಿಸಲಾಗಿದೆ. ಬಹುತೇಕ ಎಲ್ಲ ಅಣೆಕಟ್ಟೆಗಳಲ್ಲಿ ಈ ಅವಧಿಯಲ್ಲಿ ಕಳೆದ ಸಲಕ್ಕಿಂತ ಕಡಿಮೆ ನೀರು ಸಂಗ್ರಹವಾಗುವಂತೆ ನೋಡಿಕೊಳ್ಳಲಾಗಿದೆ.

    ಗೇಟ್ ರಿಪೇರಿ: 2019ರಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ಸೂಪಾ ಅಣೆಕಟ್ಟೆಯು ಮೊದಲ ಬಾರಿಗೆ ಒಂದೇ ವರ್ಷದಲ್ಲಿ ಮೂರು ಬಾರಿ ಭರ್ತಿಯಾಗಿತ್ತು. ಗೇಟ್​ಗಳನ್ನು ತೆರೆದು ಲಕ್ಷಾಂತರ ಕ್ಯೂಸೆಕ್ ನೀರನ್ನು ಒಮ್ಮೆಲೇ ಹೊರಬಿಟ್ಟ ಕಾರಣ ಕಾಳಿ ನದಿಯ ಇಕ್ಕೆಲಗಳ ಗ್ರಾಮಗಳಲ್ಲಿ ಪ್ರವಾಹ ಉಂಟಾಗಿ ಜನರ ಆಸ್ತಿ,ಪಾಸ್ತಿಗಳಿಗೆ ಹಾನಿಯಾಗಿತ್ತು. ಕೆಪಿಸಿಯ ಈ ನಿರ್ಲಕ್ಷ್ಯ ಬಗ್ಗೆ ವ್ಯಾಪಕ ಆರೋಪ ಕೇಳಿಬಂದಿತ್ತು.

    ಅಲ್ಲದೆ, ಅಣೆಕಟ್ಟೆಗಳ ಸುರಕ್ಷೆ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸಿದ್ದರು. ಕೊಡಸಳ್ಳಿ, ತಡೆಗೋಡೆಯಲ್ಲಿ ಬಿರುಕು ಕಾಣಿಸಿದ್ದು, ಬೊಮ್ಮನಹಳ್ಳಿ ಅಣೆಕಟ್ಟೆಯ ಗೇಟ್​ಗಳು ತೆರೆಯದಿರುವುದು ಸೇರಿ ಹಲವು ಆರೋಪಗಳು ಕೇಳಿ ಬಂದಿದ್ದವು. ಈ ಬಾರಿ ಎಲ್ಲ ಗೇಟ್​ಗಳು ಹಾಗೂ ಸಣ್ಣಪುಟ್ಟ ತಡೆಗೋಡೆಗಳ ನಿರ್ವಹಣಾ ಕೆಲಸವನ್ನು ಮಳೆಗಾಲಕ್ಕೂ ಮುಂಚೆಯೇ ಕೈಗೊಳ್ಳಲಾಗಿದೆ ಎಂದು ಕಾಳಿ ಯೋಜನೆಯ ಮುಖ್ಯ ಇಂಜಿನಿಯರ್ ನಿಂಗಣ್ಣ ಮಾಹಿತಿ ನೀಡಿದ್ದಾರೆ.

    ಒಳಹರಿವು ಹೆಚ್ಚಳ: ಸೂಪಾ ಅಣೆಕಟ್ಟೆಗೆ 6099 ಕ್ಯೂಸೆಕ್, ಕದ್ರಾ ಅಣೆಕಟ್ಟೆಗೆ 13589 ಕ್ಯೂಸೆಕ್ ನೀರು ಒಳಹರಿವಿದೆ. ಸೂಪಾದಿಂದ 5617, ಕದ್ರಾದಿಂದ 5890 ಕ್ಯೂಸೆಕ್ ನೀರನ್ನು ವಿದ್ಯುತ್ ಉತ್ಪಾದನೆಯ ಬಳಿಕ ಹೊರಬಿಡಲಾಗುತ್ತಿದೆ.

    ಅಣೆಕಟ್ಟೆಗಳಲ್ಲಿ ನೀರಿನ ಮಟ್ಟವನ್ನು ಕಳೆದ ಬಾರಿಗಿಂತ ಕಡಿಮೆ ಇಡಲಾಗಿದೆ. ಮಳೆಗಾಲದಲ್ಲಿ ಕಾಳಿ ಯೋಜನೆಯಿಂದಲೇ ಹೆಚ್ಚು ವಿದ್ಯುತ್ ಪಡೆಯುವಂತೆ ಬೆಂಗಳೂರಿನ ಲೋಡ್ ಡಿಸ್ಪ್ಯಾಚ್ ಸೆಂಟರ್​ಗೆ ಮನವಿ ಮಾಡಲಾಗಿದೆ. ಸೂಪಾದಲ್ಲಿ ನಿರ್ವಹಣಾ ಕೆಲಸಗಳನ್ನು ಕೈಗೊಳ್ಳಲಾಗಿದೆ. | ನಿಂಗಣ್ಣ ಕಾಳಿ ಯೋಜನೆಯ ಮುಖ್ಯ ಇಂಜಿನಿಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts