More

    ಪ್ರವಾಹ ನಿಯಂತ್ರಣಕ್ಕೆ 1536 ಕೋಟಿ ರೂ.

    ಧಾರವಾಡ: ಕರೊನಾ ಹಾವಳಿ ನಿಮಿತ್ತ ಸರ್ಕಾರದ ಮಾರ್ಗಸೂಚಿಯಂತೆ ನಗರದ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ 74ನೇ ಸ್ವಾತಂತ್ರೊ್ಯೕತ್ಸವವನ್ನು ಸರಳವಾಗಿ ಆಚರಿಸಲಾಯಿತು.

    ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಜಿಲ್ಲೆಯ ಅನೇಕರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ತ್ಯಾಗ, ಬಲಿದಾನ ಮಾಡಿದ್ದಾರೆ. ಅಹಿಂಸಾ ಮಾರ್ಗದಲ್ಲಿ ಸ್ವಾತಂತ್ರ್ಯ ಪಡೆಯಬೇಕು ಎಂಬ ಮಹಾತ್ಮ ಗಾಂಧಿ ಅವರ ಸಂಕಲ್ಪಕ್ಕೆ ಈ ಭಾಗದ ಮೈಲಾರ ಮಹದೇವಪ್ಪ, ಆರ್.ಆರ್. ದಿವಾಕರ್, ಉಮಾಬಾಯಿ ಕುಂದಾಪುರ, ಗದಿಗೆಯ್ಯ ಹೊನ್ನಾಪುರಮಠ, ಎನ್.ಎಸ್. ಹರ್ಡಿಕರ್, ಹಳ್ಳಿಕೇರಿ ಗುದ್ಲೆಪ್ಪನವರು, ಬಿಂದಾಚಾರ್ಯ ಬುರ್ಲಿ, ಕೆ.ಎಫ್.ಪಾಟಿಲ, ಗೋವಿಂದಾಚಾರ್ಯ ಅಗ್ನಿಹೋತ್ರಿ ಸೇರಿ ಅನೇಕರು ಕೈ ಜೋಡಿಸಿದ್ದರ ಫಲವಾಗಿ ಸ್ವಾತಂತ್ರ್ಯ ಪಡೆದ ಭಾರತ, ಜಗತ್ತಿನ ಪ್ರಮುಖ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ ಎಂದರು.

    ಬೆಣ್ಣಿಹಳ್ಳ ಪ್ರವಾಹ ನಿಯಂತ್ರಣಕ್ಕೆ 1536 ಕೋಟಿ ರೂ. ವೆಚ್ಚದ ಯೋಜನಾ ವರದಿ ಸಿದ್ಧಗೊಳಿಸಲಾಗಿದೆ. ಸರ್ಕಾರ ಆದ್ಯತೆ ಮೇರೆಗೆ ಕಾರ್ಯ ಕೈಗೊಳ್ಳಲಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆಯಡಿ ಜಿಲ್ಲೆಯ ಅರ್ಹ ರೈತ ಕುಟುಂಬಗಳಿಗೆ ಕೇಂದ್ರದಿಂದ 92.97 ಕೋಟಿ ರೂ., ರಾಜ್ಯ ಸರ್ಕಾರ 21.81 ಕೋಟಿ ರೂ. ನೀಡಿದೆ ಎಂದರು.

    ಕಳಸಾ ಬಂಡೂರಿ ನಾಲಾ ತಿರುವು ಯೋಜನೆಯ ಸರ್ವೆ, ಅಂದಾಜು ಪತ್ರಿಕೆ ತಯಾರಿಕೆ, ಕಾಮಗಾರಿ ಒಪ್ಪಂದವನ್ನು ಈಗಾಗಲೇ ಖಾಸಗಿ ಸಂಸ್ಥೆಯೊಂದಿಗೆ ಮಾಡಿಕೊಳ್ಳಲಾಗಿದೆ. 2020-21ರ ಆರ್ಥಿಕ ವರ್ಷದಲ್ಲಿ 463.40 ಕೋಟಿ ರೂ. ಅನುದಾನ ನೀಡಲಾಗಿದೆ. ಕಳಸಾ ನಾಲಾ ತಿರುವು ಯೋಜನೆಗೆ 885.80 ಕೋಟಿ ರೂ. ಮತ್ತು ಬಂಡೂರಿ ನಾಲಾ ತಿರುವು ಯೋಜನೆಗೆ 791.50 ಕೋಟಿ ರೂ. ವಿನಿಯೋಗಿಸಲು ಸರ್ಕಾರ ತಾತ್ವಿಕ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದರು.

    ತುಪ್ಪರಿಹಳ್ಳ ಪ್ರವಾಹ ನಿಯಂತ್ರಣಕ್ಕೆ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಪೊಲ್ಲಾವರಂ ಸ್ಕೀಮಿನಡಿ ನವಲಗುಂದ ತಾಲೂಕಿನ 10 ಸಾವಿರ ಹೆಕ್ಟೇರ್ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸಲು 1 ಟಿಎಂಸಿ ನೀರು ಹಂಚಿಕೆಯಾಗಿದೆ. ಏತ ನೀರಾವರಿ, ಕೆರೆ ತುಂಬುವ ಯೋಜನೆ, ಇತರ ಕಾಮಗಾರಿಗಳಿಗೆ 400 ಕೋಟಿ ರೂ. ಸಾಧ್ಯತಾ ವರದಿ ಅನುಮೋದನೆಯಾಗಿದೆ. ಕರ್ನಾಟಕ ನೀರಾವರಿ ನಿಗಮ ವಿಸõತ ಯೋಜನಾ ವರದಿ ತಯಾರಿಸಲು ಸರ್ವೆ ಕಾರ್ಯ ನಡೆಸುತ್ತಿದೆ.

    ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ, ಉಪಾಧ್ಯಕ್ಷ ಶಿವಾನಂದ ಕರಿಗಾರ, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಪೊಲೀಸ್ ಆಯುಕ್ತ ಆರ್. ದಿಲೀಪ್, ಎಸ್ಪಿ ವರ್ತಿಕ ಕಟಿಯಾರ್, ಜಿಪಂ ಸಿಇಒ ಡಾ. ಬಿ.ಸಿ. ಸತೀಶ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಮಹಮ್ಮದ್ ಜುಬೇರ್, ಡಿಸಿಪಿಗಳಾದ ಕೃಷ್ಣಕಾಂತ, ಆರ್.ಬಿ. ಬಸರಗಿ, ವಿವಿಧ ಇಲಾಖೆ ಅಧಿಕಾರಿಗಳು, ಇತರರು ಇದ್ದರು.

    ಸೇನಾನಿಗಳು, ಸಾಧಕರಿಗೆ ಸನ್ಮಾನ

    ಕೋವಿಡ್ ಕುರಿತು ಜನರಲ್ಲಿ ಜಾಗೃತಿ ಹಾಗೂ ಸೋಂಕಿತರ ಚಿಕಿತ್ಸೆ, ಆರೈಕೆಗೆ ಶ್ರಮಿಸುತ್ತಿರುವ ವಿವಿಧ ಇಲಾಖೆಯ 75ಕ್ಕೂ ಜನರಿಗೆ, ಎಸ್ಸೆಸ್ಸೆಲ್ಸಿ ಹಾಗೂ ಪಿಯು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಹಾಗೂ ಕ್ರೀಡೆಗಳಲ್ಲಿ ಸಾಧನೆ ಮಾಡಿದವರಿಗೆ ಸಚಿವ ಜಗದೀಶ ಶೆಟ್ಟರ್ ಸನ್ಮಾನಿಸಿದರು.

    ವಿದ್ಯಾರ್ಥಿಗಳಿಗೆ ನಗದು ವಿತರಣೆ

    ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದ ಜಿಲ್ಲೆಯ ಪ.ಜಾ. ಹಾಗೂ ಪ.ಪಂ. ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ಹೋರಾಟದ ಭಾಗವಾದ ಹಲಗಲಿ ಬೇಡರ ಬಂಡಾಯದಲ್ಲಿ ಹುತಾತ್ಮರಾದ ಜಡಗ ಮತ್ತು ಬಾಲ ಹೆಸರಿನಲ್ಲಿ ನೀಡುವ ತಲಾ ಒಂದು ಲಕ್ಷ ರೂ. ನಗದು ಬಹುಮಾನವನ್ನು ಹುಬ್ಬಳ್ಳಿ ಜಿ.ವಿ.ಜೋಶಿ ರೋಟರಿ ಶಾಲೆಯ ಪ್ರಿಯಾ ಹಂಚಿನಮನಿ ಹಾಗೂ ಧಾರವಾಡ ಕೆ.ಇ.ಬೋರ್ಡ್ ಶಾಲೆಯ ಅವಿನಾಶ ವಿ. ಜವಳಗೇರಿ ಅವರಿಗೆ ನೀಡಿ ಸತ್ಕರಿಸಲಾಯಿತು.

    ಮಾಸ್ಕ್ ಧರಿಸಿ ಪರೇಡ್

    ಕರೊನಾ ಹಾವಳಿ ಹಿನ್ನೆಲೆಯಲ್ಲಿ ಸ್ವಾತಂತ್ರ್ಯೊತ್ಸವವನ್ನು ಮುಂಜಾಗ್ರತಾ ಕ್ರಮಗಳೊಂದಿಗೆ ಆಚರಿಸಲು ಸರ್ಕಾರ ಆದೇಶಿಸಿತ್ತು. ಅದರಂತೆ ಕ್ರೀಡಾಂಗಣ ಪ್ರವೇಶಿಸುವ ಪ್ರತಿಯೊಬ್ಬರಿಗೂ ಸ್ಯಾನಿಟೈಸರ್ ನೀಡಿ, ಮಾಸ್ಕ್ ಧರಿಸಿದ್ದನ್ನು ಪರಿಶೀಲಿಸಿ ಒಳ ಬಿಡಲಾಯಿತು. ಪಥ ಸಂಚಲನ ನಡೆಸಿದ ವಿವಿಧ ದಳಗಳ ಸದಸ್ಯರು ಮಾಸ್ಕ್ ಧರಿಸಿಯೇ ಪಥ ಸಂಚಲನ ನಡೆಸಿದ್ದು ವಿಶೇಷವಾಗಿತ್ತು. ಸಮಾರಂಭಕ್ಕೆ ಶಾಲೆ ವಿದ್ಯಾರ್ಥಿಗಳಿಗೆ ಪ್ರವೇಶವಿಲ್ಲದ ಕಾರಣ ಕ್ರೀಡಾಂಗಣ ಭಣಗುಡುತ್ತಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts