More

    ಪ್ರವಾಹದಿಂದ 7,800 ಕೋಟಿ ರೂ. ಹಾನಿ

    ಬೆಳಗಾವಿ: ಜಿಲ್ಲೆಯಲ್ಲಿ ನದಿಗಳ ಪ್ರವಾಹ ಮತ್ತು ಧಾರಾಕಾರ ಮಳೆಯಿಂದಾಗಿ ಕೃಷಿ ಬೆಳೆ, ಮನೆ, ರಸ್ತೆಗಳು ಹಾಗೂ ಮೂಲ ಸೌಕರ್ಯ ಸೇರಿ 7,800 ಕೋಟಿ ರೂ. ಹಾನಿಯಾಗಿರುವುದು ಪ್ರಾಥಮಿಕ ಅಂದಾಜಿನ ಪ್ರಕಾರ ತಿಳಿದು ಬಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮಾಹಿತಿ ನೀಡಿದರು.

    ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ತಿಂಗಳು ಸಂಭವಿಸಿದ್ದ ಪ್ರವಾಹದಿಂದ ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹಾನಿಯುಂಟಾಗಿದೆ. ಕಾಳಜಿ ಕೇಂದ್ರಗಳಲ್ಲಿ 38 ಸಾವಿರ ಸಂತ್ರಸ್ತರು ಆಶ್ರಯ ಪಡೆದಿದ್ದು, ನದಿಗಳಲ್ಲಿ ಇನ್ನೂ ನೀರಿನ ಮಟ್ಟ ಇಳಿಯದ್ದರಿಂದ ಜನರು ಮುಂದಿನ 8 ದಿನಗಳ ಕಾಲ ಕಾಳಜಿ ಕೇಂದ್ರದಲ್ಲಿಯೇ ಇರಲಿದ್ದಾರೆ. ಹೀಗಾಗಿ ಅವರಿಗೆ ವೈದ್ಯಕೀಯ, ಊಟ, ಉಪಾಹಾರ ಸೇರಿ ಎಲ್ಲ ವ್ಯವಸ್ಥೆ ಮಾಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದರು.

    4 ಸಾವಿರಕ್ಕೂ ಅಧಿಕ ಮನೆಗೆ ಹಾನಿ: ಅತಿವೃಷ್ಟಿಯಿಂದ 560 ಕಿ.ಮೀ. ಪಂಚಾಯತ್ ರಾಜ್ ವ್ಯಾಪ್ತಿಯ ಹಳ್ಳಿ ರಸ್ತೆಗಳು, 350 ಕಿ.ಮೀ. ಲೋಕೋಪಯೋಗಿ ಇಲಾಖೆ ರಸ್ತೆಗಳು ಹಾನಿಯಾಗಿವೆ. 21,300 ವಿದ್ಯುತ್ ಕಂಬಗಳು, 5,300 ಟ್ರಾನ್ಸ್ ಫಾರ್ಮರ್(ಟಿಸಿ)ಗಳು, 1.70 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ನೀರಿನಲ್ಲಿ ಮುಳುಗಿವೆ. 4 ಸಾವಿರಕ್ಕೂ ಅಧಿಕ ಮನೆಗಳು ಹಾನಿಯಾಗಿವೆ. ನದಿಗಳಲ್ಲಿ ನೀರಿನ ಮಟ್ಟ ಮತ್ತು ಮಳೆ ಕಡಿಮೆಯಾದ ಬಳಿಕ ಹಾನಿ ಕುರಿತು ಸರ್ಕಾರಕ್ಕೆ ಅಧಿಕೃತ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

    ಮನೆ ಒದಗಿಸಲು ಕ್ರಮ: ನೆರೆ ಸಂತ್ರಸ್ತರಿಗೆ ಶಾಶ್ವತ ಸೂರು ಕಲ್ಪಿಸುವ ನಿಟ್ಟಿನಲ್ಲಿ 40್ಡ60 ಅಳತೆಯ ನಿವೇಶನ ಒದಗಿಸಲು ಸಮರ್ಪಕವಾದ ಯೋಜನೆ ರೂಪಿಸಬೇಕು. ಮುಳುಗಡೆಯಾಗುವ ಗ್ರಾಮಗಳಿಗೆ ತಾತ್ಕಾಲಿಕ ಶೆಡ್ ನಿರ್ಮಿಸಿ, ಮೂಲ ಸೌಕರ್ಯ ಒದಗಿಸಲು ಕ್ರಮ ವಹಿಸಲಾಗಿದೆ. 2019-20ನೇ ಸಾಲಿನಲ್ಲಿ ಪ್ರವಾಹ ಬಂದಾಗ ಕೆಲ ಗ್ರಾಮಗಳನ್ನು ಸ್ಥಳಾಂತರಿಸಿ ಆಸರೆ ಮನೆಗಳನ್ನು ನೀಡಲು ಸರ್ಕಾರ ಸೂಚಿಸಿತ್ತು. ಆ ಪ್ರಕ್ರಿಯೆ ಯಾವ ಹಂತದಲ್ಲಿದೆ ಎಂಬುದನ್ನೂ ಪರಿಶೀಲಿಸಲಾಗುವುದು ಎಂದರು.

    ವಿದ್ಯುತ್ ಸಮಸ್ಯೆ ನೀಗಿಸಲು ಸೂಚನೆ: ನದಿ ತೀರದ ಪ್ರದೇಶಗಳಲ್ಲಿ ಮಳೆ, ನದಿಯಲ್ಲಿ ನೀರು ಹರಿವು ಪ್ರಮಾಣ ಹಾಗೂ ಪ್ರವಾಹ ಸಾಧ್ಯತೆಯನ್ನು ಮೊದಲೇ ತಿಳಿದುಕೊಳ್ಳಲು ತಂತ್ರಜ್ಞಾನ ಆಧಾರಿತ ಮುನ್ಸೂಚನೆ ವ್ಯವಸ್ಥೆ ಕಲ್ಪಿಸಲು ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮಳೆಯಿಂದ ವಿದ್ಯುತ್ ಪೂರೈಕೆಗೆ ತೊಂದರೆಯಾದ ಕಡೆಗಳಲ್ಲಿ ತಕ್ಷಣವೇ ವಿದ್ಯುತ್ ವ್ಯವಸ್ಥೆಗೆ ಕ್ರಮ ವಹಿಸಬೇಕು. ರೈತರಿಗೆ ಟಿಸಿ ಒದಗಿಸುವ ಸಂದರ್ಭದಲ್ಲಿ ಉಂಟಾಗುವ ತೊಂದರೆ ನೀಗಿಸಲು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಸಚಿವ ಕಾರಜೋಳ ತಿಳಿಸಿದರು.

    ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಪ್ರಾದೇಶಿಕ ಆಯುಕ್ತ ಆಮ್ಲಾನ್ ಆದಿತ್ಯ ಬಿಸ್ವಾಸ್, ಜಿಲ್ಲಾ ಪಂಚಾಯಿತಿ ಸಿಇಒ ಎಚ್.ವಿ. ದರ್ಶನ,
    ಎಸ್ಪಿ ಲಕ್ಷ್ಮಣ ನಿಂಬರಗಿ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಡಿಸಿಪಿ ವಿಕ್ರಂ ಆಮಟೆ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

    ಪರಿಹಾರ ನೀಡುವಲ್ಲಿ ತಪ್ಪಾದರೆ ಕಾನೂನು ಕ್ರಮ

    2019 ಮತ್ತು 2020ನೇ ಸಾಲಿನಲ್ಲಿ ಸಂಭವಿಸಿದ ಪ್ರವಾಹ ಸಂದರ್ಭದಲ್ಲಿ ನೆರೆ ಸಂತ್ರಸ್ತರಿಗೆ ತಲಾ 10 ಸಾವಿರ ರೂ. ತುರ್ತು ಪರಿಹಾರ ನೀಡಲಾಗಿತ್ತು. ಆದರೆ, ಅನರ್ಹ ಸಂತ್ರಸ್ತರಿಗೆ ಪರಿಹಾರ ನೀಡಲಾಗಿದೆ ಎಂದು ದೂರು ಬಂದಿದ್ದವು. ಹಾಗಾಗಿ, ಈ ಬಾರಿ ಸಂತ್ರಸ್ತರ ಪಟ್ಟಿ ತಯಾರಿಸಿ ಹಾನಿ ಖಚಿತವಾದ ಮೇಲೆ ತುರ್ತು ಪರಿಹಾರ ನೀಡಲು ಸೂಚಿಸಲಾಗಿದೆ. ಶೀಘ್ರವೇ ಸಂತ್ರಸ್ತರಿಗೆ ಪರಿಹಾರ ತಲುಪಲಿದೆ. ಜಿಲ್ಲಾಡಳಿತದ ಖಾತೆಯಲ್ಲಿ 92 ಕೋಟಿ ರೂ. ಅನುದಾನ ಇದೆ. ಅಲ್ಲದೆ, ಸಂತ್ರಸ್ತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಆರ್‌ಟಿಜಿಎಸ್ ಮೂಲಕ ಪರಿಹಾರ ಜಮಾ ಮಾಡಲಾಗುವುದು. ಯಾವುದೇ ಕಾರಣಕ್ಕೂ ನಗದು, ಚೆಕ್ ನೀಡುವಂತಿಲ್ಲ. ಒಂದು ವೇಳೆ ಅಧಿಕಾರಿಗಳು ತಪ್ಪು ಎಸಗಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಎಚ್ಚರಿಕೆ ನೀಡಿದರು.

    ಜಿಲ್ಲೆಯ 18 ಲಕ್ಷ ಜನರಿಗೆ ಕರೊನಾ ಲಸಿಕೆ

    ಕೋವಿಡ್-19 ಸಂಭವನೀಯ ಮೂರನೇ ಅಲೆ ಹಿನ್ನೆಲೆಯಲ್ಲಿ ಮಕ್ಕಳ ರಕ್ಷಣೆ ಮುಖ್ಯವಾಗಿದೆ. ಆದ್ದರಿಂದ ಜಿಲ್ಲೆಯ ಎಲ್ಲ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆ, ಆಕ್ಸಿಜನ್, ಔಷಧ ಸೇರಿ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜಿಲ್ಲೆ, ತಾಲೂಕು ಆಸ್ಪತ್ರೆಯಲ್ಲಿ ಮಕ್ಕಳಿಗಾಗಿ 418 ಹಾಸಿಗೆಗಳು ಲಭ್ಯವಿವೆ. ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪನೆಯ ಕೆಲಸ ತ್ವರಿತವಾಗಿ ಮುಗಿಸಬೇಕು. ಜಿಲ್ಲೆಯಲ್ಲಿ 5.59 ಲಕ್ಷ ಜನರ ಕರೊನಾ ಪರೀಕ್ಷೆ ಮಾಡಿದ್ದು, ಅದರಲ್ಲಿ 496 ಪಾಸಿಟಿವ್ ಪ್ರಕರಣಗಳಿವೆ. ಪಾಸಿಟಿವಿಟಿ ಪ್ರಮಾಣ ಸದ್ಯಕ್ಕೆ ಶೇ. 0.84ರಷ್ಟಿದೆ. ಜಿಲ್ಲೆಯಲ್ಲಿ ಕೋವಿಡ್ ಮರಣ ಪ್ರಮಾಣ ಶೇ. 2.34ರಷ್ಟಿದೆ. 460 ಬ್ಲಾೃಕ್ ಫಂಗಸ್ ಪ್ರಕರಣಗಳ ಪೈಕಿ 300 ಜನರು ಚಿಕಿತ್ಸೆಯಿಂದ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ 18 ಲಕ್ಷ ಜನರಿಗೆ ಲಸಿಕೆ ನೀಡಲಾಗಿದ್ದು, 2ನೇ ಹಂತದ ಲಸಿಕೆ ಪ್ರಕ್ರಿಯೆ ಪ್ರಗತಿ ಹಂತದಲ್ಲಿದೆ ಎಂದು ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts