More

    ಪ್ರವಾಸಿ ತಾಣಗಳು ವೀಕ್ಷಣೆಗೆ ಮುಕ್ತ

    ಹಾವೇರಿ: ಕರೊನಾದಿಂದ ಅನೇಕ ಉದ್ಯಮಗಳು ನಷ್ಟ ಅನುಭವಿಸಿ ಹಂತಹಂತವಾಗಿ ಕಾರ್ಯಾರಂಭವಾಗಿವೆ. ಆದರೆ, ಪ್ರವಾಸಿತಾಣಗಳನ್ನು ಆರಂಭಿಸಲು ವಿಳಂಬ ಮಾಡಿದ್ದರಿಂದ ಜಿಲ್ಲೆಯಲ್ಲಿ ಅವುಗಳ ನಿರ್ವಹಣೆಗೂ ಪರದಾಡುವಂತಾಗಿದೆ.

    ಸೆ. 27 (ಭಾನುವಾರ) ವಿಶ್ವ ಪ್ರವಾಸೋದ್ಯಮ ದಿನಾಚರಣೆಯೊಂದಿಗೆ ಜಿಲ್ಲೆಯ ಎಲ್ಲ ಪ್ರವಾಸಿತಾಣಗಳ ಆರಂಭಕ್ಕೆ ಅಧಿಕೃತವಾಗಿ ಚಾಲನೆ ದೊರೆಯಲಿದೆ. ಇನ್ನಾದರೂ ಪ್ರವಾಸಿಗರು ಬರುವವರೇ ಎಂದು ಪ್ರವಾಸಿತಾಣಗಳ ಮುಖ್ಯಸ್ಥರು ಕಾಯುವಂತಾಗಿದೆ.

    ಸರ್ಕಾರ ಅಧಿಕೃತವಾಗಿ ಜಿಲ್ಲೆಯಲ್ಲಿ 6 ಪ್ರವಾಸಿತಾಣಗಳನ್ನು ಗುರುತಿಸಿದೆ. ಅವುಗಳೊಂದಿಗೆ ಇನ್ನು 15 ತಾಣಗಳನ್ನು ಸೇರಿಸಲು ಪ್ರವಾಸೋದ್ಯಮ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿದೆ. ಜಿಲ್ಲೆಯಲ್ಲಿ ಪ್ರಮುಖವಾಗಿ ಶಿಗ್ಗಾಂವಿ, ಹಾನಗಲ್ಲ, ಬ್ಯಾಡಗಿ ತಾಲೂಕುಗಳು ಪ್ರವಾಸೋದ್ಯಮ ತಾಣಗಳಾಗಿ ಬೆಳೆದಿವೆ. ಶಿಗ್ಗಾಂವಿಯಲ್ಲಿ ಅನೇಕ ಸರ್ಕಾರಿ, ಖಾಸಗಿ ಪ್ರವಾಸಿತಾಣಗಳಿವೆ. ಇಲ್ಲಿಗೆ ಪ್ರತಿವರ್ಷ ಲಕ್ಷಕ್ಕೂ ಅಧಿಕ ಜನರು ಭೇಟಿ ನೀಡುತ್ತಾರೆ. ಆದರೆ, ಕರೊನಾ ನಂತರ ಇವೆಲ್ಲವೂ ಮಾರ್ಚ್ ತಿಂಗಳಲ್ಲಿಯೇ ಸ್ಥಗಿತವಾಗಿವೆ. ಇದರಿಂದ ಅಲ್ಲಿನ ನೂರಾರು ಕಾರ್ವಿುಕರು ಉದ್ಯೋಗವಿಲ್ಲದೇ ಅನ್ಯ ಕೆಲಸಕ್ಕೆ ವಾಲಿದ್ದಾರೆ. ಇನ್ನು ಇವುಗಳ ನಿರ್ವಹಣೆಗೆ ಮುಖ್ಯಸ್ಥರು ಪರದಾಡುತ್ತಿದ್ದಾರೆ.

    ರಾಜ್ಯದಲ್ಲಿ ಆಗಸ್ಟ್ ಮಾಸಾಂತ್ಯದಲ್ಲೇ ಅನೇಕ ಪ್ರವಾಸಿತಾಣಗಳ ಆರಂಭಕ್ಕೆ ಹಸಿರು ನಿಶಾನೆ ದೊರೆತಿದೆ. ಆದರೆ, ಆಗ ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ಏರುಗತಿಯಲ್ಲಿದ್ದರಿಂದ ಜಿಲ್ಲಾಡಳಿತ ಪ್ರವಾಸಿತಾಣಗಳ ಆರಂಭಕ್ಕೆ ಅನುಮತಿ ನೀಡಿರಲಿಲ್ಲ. ಹೀಗಾಗಿ ಮತ್ತೊಂದು ತಿಂಗಳು ಕಾಯುವಂತಾಗಿತ್ತು.

    ಪ್ರಮುಖ ಪ್ರವಾಸಿತಾಣಗಳು

    ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಶಿಗ್ಗಾಂವಿ, ಬಾಡ, ಶಿಶುವಿನಹಾಳ, ಅಬಲೂರ, ಕಾಗಿನೆಲೆ, ಹಾನಗಲ್ಲ ಪ್ರವಾಸಿತಾಣವನ್ನಾಗಿ ಗುರುತಿಸಲಾಗಿದೆ. ಇನ್ನುಳಿದಂತೆ ಶಿಗ್ಗಾಂವಿ ತಾಲೂಕಿನ ಉತ್ಸವ ರಾಕ್ ಗಾರ್ಡನ್, ಅಗಡಿ ತೋಟ, ಹಾನಗಲ್ಲ ಹಾಗೂ ಹಾವೇರಿ ತಾಲೂಕಿನ ಕರ್ಜಗಿಯಲ್ಲಿ ಅರಣ್ಯ ಇಲಾಖೆಯ ಟ್ರೀ ಪಾರ್ಕ್, ಬಂಕಾಪುರದ ನವಿಲುಧಾಮ, ರಾಣೆಬೆನ್ನೂರಿನ ಕೃಷ್ಣಮೃಗ ಅಭಯಾರಣ್ಯ ಮೊದಲಾದ ತಾಣಗಳಿವೆ. ಇವುಗಳಿಗೆ ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. 2019ರ ಜನವರಿಂದ ಡಿಸೆಂಬರ್​ವರೆಗೆ ಕಾಗಿನೆಲೆ, ಬಾಡಕ್ಕೆ ದೇಶದ 95 ಸಾವಿರ ಪ್ರವಾಸಿಗರು ಬಂದಿದ್ದರೆ, 15 ವಿದೇಶಿ ಪ್ರವಾಸಿಗರು ಆಗಮಿಸಿದ್ದರು. ಆದರೆ, ಈ ಸಂಖ್ಯೆ ಈ ಬಾರಿ 10 ಸಾವಿರದ ಗಡಿ ದಾಟಿಲ್ಲ. ಅದೂ ಜನವರಿ, ಫೆಬ್ರವರಿಯಲ್ಲಿ ಮಾತ್ರ ಪ್ರವಾಸಿಗರು ಬಂದಿದ್ದು.

    ಪ್ರವಾಸಿಗರ ಕೊರತೆ ನಿಶ್ಚಿತ

    ಜಿಲ್ಲೆಯ ಪ್ರವಾಸೋದ್ಯಮ ಹೆಚ್ಚಾಗಿ ಶಾಲೆ-ಕಾಲೇಜ್ ವಿದ್ಯಾರ್ಥಿಗಳನ್ನು ಅವಲಂಬಿಸಿತ್ತು. ಈ ಸಾರಿ ಶಾಲೆ, ಕಾಲೇಜ್​ಗಳು ಇನ್ನುವರೆಗೂ ಆರಂಭಗೊಂಡಿಲ್ಲ. ಒಂದು ವೇಳೆ ಆರಂಭಗೊಂಡರೂ ಶೈಕ್ಷಣಿಕ ಪ್ರವಾಸ ಮತ್ತಿತರ ಚಟುವಟಿಕೆ ನಡೆಯುವುದು ಕಷ್ಟ. ಇದರೊಂದಿಗೆ ಕರೊನಾ ಪೂರ್ಣಪ್ರಮಾಣದಲ್ಲಿ ಹೋಗದ ಕಾರಣ ಪ್ರವಾಸಿಗರು ಮೊದಲಿನಂತೆ ಪ್ರವಾಸಕ್ಕೆ ಯೋಜನೆ ರೂಪಿಸಿಲ್ಲ. ಜನವರಿಯಿಂದ ಸ್ವಲ್ಪ ಪ್ರವಾಸಿಗರು ಬರುವ ಸಾಧ್ಯತೆಗಳಿವೆ. ಅಲ್ಲಿವರೆಗೆ ಪ್ರವಾಸಿತಾಣಗಳ ನಿರ್ವಹಣೆಗಾದರೂ ಸ್ವಲ್ಪ ಆರ್ಥಿಕ ಚೇತರಿಕೆಯಾಗುಷ್ಟು ಪ್ರವಾಸಿಗರು ಬಂದರೆ ಸಾಕೆನ್ನುತ್ತಾರೆ ಪ್ರವಾಸಿತಾಣಗಳ ಮುಖ್ಯಸ್ಥರು. ಅನೇಕ ಸುರಕ್ಷತಾ ಕ್ರಮಗಳನ್ನು ಅಳವಡಿಕೆ ಅನಿವಾರ್ಯ. ಹೀಗಾಗಿ ಈ ವರ್ಷಪೂರ್ತಿ ಪ್ರವಾಸೋದ್ಯಮಕ್ಕೆ ಆರ್ಥಿಕ ನಷ್ಟ ನಿಶ್ಚಿತ. ಇದನ್ನೇ ನಂಬಿದ್ದ ಟ್ಯಾಕ್ಸಿ, ಹೋಟೆಲ್ ಉದ್ಯಮಕ್ಕೂ ಬಿಸಿ ತಟ್ಟಿದೆ. ಇದರಿಂದಾಗಿ ಅನೇಕರು ಅನ್ಯ ಉದ್ಯೋಗಗಳಲ್ಲಿ ತೊಡಗಿಕೊಂಡಿದ್ದಾರೆ.

    ಕರೊನಾದಿಂದಾಗಿ ಪ್ರವಾಸಿತಾಣಗಳನ್ನು ಮಾರ್ಚ್​ನಿಂದ ಬಂದ್ ಮಾಡಲಾಗಿದೆ. ಇದರಿಂದ ಪ್ರವಾಸೋದ್ಯಮಕ್ಕೆ ಭಾರಿ ಹಿನ್ನಡೆಯಾಗಿದೆ. ಜನರ ಆರೋಗ್ಯ ದೃಷ್ಟಿಯಿಂದ ಇದು ಅನಿವಾರ್ಯಲೂ ಆಗಿತ್ತು. ಜಿಲ್ಲೆಯಲ್ಲಿ ಭಾನುವಾರ ವಿಶ್ವ ಪ್ರವಾಸೋದ್ಯಮ ದಿನವನ್ನು ಗೋಟಗೋಡಿಯ ಉತ್ಸವ ರಾಕ್ ಗಾರ್ಡನ್​ನಲ್ಲಿ ಆಯೋಜಿಸಲಾಗಿದೆ. ಆ ಕಾರ್ಯಕ್ರಮದಲ್ಲೇ ಜಿಲ್ಲೆಯ ಎಲ್ಲ ಪ್ರವಾಸಿತಾಣಗಳನ್ನು ತೆರೆಯಲು ಅಧಿಕೃತವಾಗಿ ಜಿಲ್ಲಾಧಿಕಾರಿ ಚಾಲನೆ ನೀಡಲಿದ್ದಾರೆ.
    | ಮಲ್ಲಿಕಾರ್ಜುನ ಮಠದ, ಪ್ರಭಾರ ಸಹಾಯಕ ನಿರ್ದೇಶಕ, ಪ್ರವಾಸೋದ್ಯಮ ಇಲಾಖೆ, ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts