More

    ಪ್ರವಾಸಿಗರಿಂದ ದೂರವುಳಿದ ದ್ವೀಪ

    ಕಾರವಾರ: ಅರಬ್ಬಿ ಸಮುದ್ರದ ನಡುವಿನ ನಯನ ಮನೋಹರ ದ್ವೀಪವೊಂದು ವಿವಿಧ ಕಾರಣಗಳಿಗೆ ಪ್ರವಾಸಿಗರಿಂದ ದೂರವಾಗೇ ಇದೆ.

    ನಗರದ ಟ್ಯಾಗೋರ್ ಕಡಲ ತೀರದಿಂದ ಸುಮಾರು 10 ಕಿಮೀ ದೂರದಲ್ಲಿರುವ ದೇವಗಡ ದ್ವೀಪ ಅಥವಾ ಓಯ್ಸ್ಟಾರ್ ರಾಕ್ಸ್ ಲೈಟ್ ಹೌಸ್ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದಂತಿದೆ. ನೀಲಿ ಸಾಗರದ ನಡುವೆ ಎದುರು ಹಸಿರು ಹೊದ್ದ ಗುಡ್ಡ ಸುತ್ತ ಚಿತ್ರ, ವಿಚಿತ್ರ ಆಕೃತಿಯ ಕಲ್ಲು ಬಂಡೆಗಳು. ಅದರ ಮೇಲೆ ಪುರಾತನ ಕಟ್ಟಡಗಳು, ಉಪ್ಪು ನೀರಿನ ಸಾಗರದ ನಡುವೆ ಸಿಹಿ ನೀರಿನ ಬಾವಿ ಹೀಗೆ ಹಲವು ಅಚ್ಚರಿಗಳನ್ನು ದ್ವೀಪ ಒಳಗೊಂಡಿದೆ.

    ಪ್ರವಾಸೋದ್ಯಮ ಇಲಾಖೆಯ ಪ್ರವಾಸಿ ತಾಣಗಳ ಪಟ್ಟಿಯಲ್ಲೂ ದ್ವೀಪದ ಹೆಸರಿದೆ. ಆದರೆ, ಇಲಾಖೆ ಅಲ್ಲಿಗೆ ತೆರಳಲು ಇರುವ ತೊಡಕುಗಳನ್ನು ನಿವಾರಿಸದ ಕಾರಣ ಸಾಮಾನ್ಯ ಪ್ರವಾಸಿಗರಿಗೆ ಅದು ಕೈಗೆಟುಕದ ಹುಳಿ ದ್ರಾಕ್ಷಿಯಂತಾಗಿದೆ.

    ಸಮಸ್ಯೆ ಏನು?: ದ್ವೀಪಕ್ಕೆ ಯಾವುದೇ ಸರ್ವೆ ನಂಬರ್ ಇಲ್ಲ. ಸದ್ಯ ದ್ವೀಪದಲ್ಲಿ ಕೇಂದ್ರ ಸರ್ಕಾರದ ಡೈರೆಕ್ಟರ್ ಜನರಲ್ ಆಫ್ ಲೈಟ್ ಹೌಸ್ ಮತ್ತು ಲೈಟ್ ಶಿಪ್ಸ್ ಎಂಬ ಇಲಾಖೆ ಶತಮಾನಗಳಿಂದ ಬಳಕೆ ಮಾಡುತ್ತಿದೆ. ಅಲ್ಲಿಗೆ ಪ್ರವಾಸಕ್ಕೆ ತೆರಳಬೇಕು ಎಂದರೆ ಜಿಲ್ಲಾಧಿಕಾರಿಗಳ ಪರವಾನಗಿ ಪತ್ರ ಬೇಕು ಎಂದು ಕೋಸ್ಟ್ ಗಾರ್ಡ್ ಅಥವಾ ಕರಾವಳಿ ಕಾವಲುಪಡೆ ಅಧಿಕಾರಿಗಳು ಕೇಳುತ್ತಾರೆ. ಸಾಮಾನ್ಯ ಪ್ರವಾಸಿಗರು ಪ್ರಮಾಣಪತ್ರಕ್ಕಾಗಿ ಜಿಲ್ಲಾಧಿಕಾರಿ ಕಚೇರಿ ಅಲೆಯಲು ಸಾಧ್ಯವಿಲ್ಲ.

    ಇನ್ನು ಲೈಟ್ ಹೌಸ್​ನಲ್ಲಿ ಪ್ರವಾಸಿ ಬೋಟ್​ಗಳನ್ನು ನಿಲ್ಲಿಸುವಂಥ ಜಟ್ಟಿ ವ್ಯವಸ್ಥೆಯಿಲ್ಲ. ಲೈಟ್ ಹೌಸ್​ಗೆ ತೆರಳಲು ಕಾರವಾರದಿಂದ 10 ಪ್ರವಾಸಿಗರಿಗೆ ಸುಮಾರು 8 ರಿಂದ 10 ಸಾವಿರ ರೂ. ಖರ್ಚಾಗುವುದರಿಂದ ಸಾಮಾನ್ಯ ಪ್ರವಾಸಿಗರು ಅಷ್ಟು ಬೆಲೆ ತೆರಲು ಸಿದ್ಧವಾಗುವುದಿಲ್ಲ. ಈ ಎಲ್ಲ ತೊಂದರೆಗಳಿಂದ ಸ್ಥಳೀಯರೂ ಈ ದ್ವೀಪ ನೋಡಿದ್ದು ಕಡಿಮೆ.

    ವಿಶೇಷತೆ ಏನು..?: ಆಳ ಸಮುದ್ರದಲ್ಲಿ ಸಂಚರಿಸುವ ಹಡಗು ಹಾಗೂ ದೋಣಿಗಳು ರಾತ್ರಿ ವೇಳೆಯಲ್ಲಿ ದಡ ಸೇರಲು ಅನುಕೂಲವಾಗುವಂತೆ ಅತಿ ದೂರದವರೆಗೂ ಕಾಣುವಷ್ಟು ದೊಡ್ಡ ಫ್ಲ್ಯಾಶ್ ಲೈಟ್ ಬಿಡಲಾಗುತ್ತದೆ. ಅದಕ್ಕಾಗಿ ದೇಶದ ಕರಾವಳಿಗುಂಟ ಅಲ್ಲಲ್ಲಿ ಇಂಥ ಬೆಳಕಿನ ಸ್ತಂಭಗಳಿವೆ. ಹೆಚ್ಚಿನ ಲೈಟ್ ಹೌಸ್​ಗಳು ಸಮುದ್ರ ದಂಡೆಯ ಮೇಲೆ ಇರುತ್ತವೆ. ಆದರೆ, ನಮ್ಮ ದೇಶದಲ್ಲಿ ದ್ವೀಪಗಳಲ್ಲಿರುವ ಎರಡೇ ಲೈಟ್ ಹೌಸ್​ಗಳ ಪೈಕಿ ಕಾರವಾರದ ಓಯ್ಸ್ಟಾರ್ ರಾಕ್ ಲೈಟ್​ಹೌಸ್ ಕೂಡ ಒಂದು.

    ಸುಮಾರು 10 ಎಕರೆ ವ್ಯಾಪ್ತಿಯ ದ್ವೀಪದ ಮೇಲೆ 1864 ರಲ್ಲಿ ನಿರ್ವಣವಾದ ಪುರಾತನ 62 ಮೀಟರ್ ಎತ್ತತದ ಬೆಳಕಿನ ಸ್ತಂಭ ಇಲ್ಲಿದೆ. ರಾತ್ರಿ ವೇಳೆ ಸೋಲಾರ್​ನಿಂದ ಉರಿಯುವ ದೀಪ ಪ್ರತಿ 10 ಸೆಕೆಂಡ್​ಗೊಮ್ಮೆ ಬಿಳಿಯ ಬೆಳಕು(ಫ್ಲ್ಯಾರ್ಶಲೈಟ್) ಚೆಲ್ಲುತ್ತದೆ. ಈ ಬೆಳಕು ದ್ವೀಪದ ಸುತ್ತ 20 ನಾಟಿಕಲ್ ಮೈಲ್​ವರೆಗೂ ಎಂದರೆ ಸುಮಾರು ಗೋಕರ್ಣ ಕಡಲ ತೀರದವರೆಗೂ ತಲುಪುತ್ತದೆ.

    ಅನಧಿಕೃತ ಪ್ರವಾಸೋದ್ಯಮ: ಗೋವಾದ ಕೆಲವು ಪ್ರವಾಸೋದ್ಯಮಿಗಳು ದ್ವೀಪಗಳ ಪ್ರವಾಸ ಹಾಗೂ ಗಾಳ ಹಾಕುವುದಕ್ಕಾಗಿ ದುಬಾರಿ ಬೆಲೆ ಪಡೆದು ಪ್ರವಾಸಿಗರನ್ನು ಇಲ್ಲಿಗೆ ಕರೆತರುತ್ತಾರೆ. ಪ್ರವಾಸಿಗರ ಸುರಕ್ಷತೆ ಹಾಗೂ ಭದ್ರತೆಯ ಸಮಸ್ಯೆಯೂ ಆಗುತ್ತಿರುತ್ತದೆ. ಅದರ ಬದಲು ಪ್ರವಾಸೋದ್ಯಮಕ್ಕಾಗಿಯೇ ಜಿಲ್ಲಾಡಳಿತ ಅಧಿಕೃತ ವ್ಯವಸ್ಥೆ ಮಾಡಿದಲ್ಲಿ ಸ್ಥಳೀಯ ಪ್ರವಾಸೋದ್ಯಮವೂ ವೃದ್ಧಿಯಾಗಲಿದೆ ಎಂಬುದು ಸ್ಥಳೀಯರ ಅಭಿಪ್ರಾಯ.

    ಲೈಟ್ ಹೌಸ್ ದ್ವೀಪವನ್ನು ನೋಡಿದ್ದೇನೆ. ಪ್ರಶಸ್ತ ಪ್ರವಾಸೋದ್ಯಮ ತಾಣವಾಗುವುದರಲ್ಲಿ ಸಂಶಯವಿಲ್ಲ. ಅದಕ್ಕಾಗಿ ದ್ವೀಪದ ಸರ್ವೆ ಕಾರ್ಯ ಮಾಡಿಸಬೇಕಿದೆ. ನಂತರ ಅದಕ್ಕೆ ಸರ್ವೆ ನಂಬರ್ ಒಂದನ್ನು ನೀಡಿದ ಮೇಲೆ ಪ್ರವಾಸಿ ಚಟುವಟಿಕೆಗೆ ವ್ಯವಸ್ಥೆ ಮಾಡಬಹುದು. ಸಮೀಪದಲ್ಲೇ ಸೀಬರ್ಡ್ ನೌಕಾ ಯೋಜನಾ ಪ್ರದೇಶವೂ ಇರುವುದರಿಂದ ಭದ್ರತೆಯ ಬಗ್ಗೆಯೂ ಪರಿಶೀಲಿಸಬೇಕಿದೆ.

    |ಕೃಷ್ಣಮೂರ್ತಿ ಎಚ್.ಕೆ. ಹೆಚ್ಚುವರಿ ಜಿಲ್ಲಾಧಿಕಾರಿ, ಉತ್ತರ ಕನ್ನಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts