More

    ಪ್ರಯಾಣಿಕರ ಮೇಲೆ ನಿಗಾ

    ಧಾರವಾಡ: ರಾಷ್ಟ್ರದಲ್ಲಿ ಕರೊನಾ 2ನೇ ಅಲೆ ಆರಂಭವಾಗಿದ್ದು, ನೆರೆ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ಕೇರಳದಿಂದ ಆಗಮಿಸುವ ಪ್ರಯಾಣಿಕರು ಕಡ್ಡಾಯವಾಗಿ ಕರೊನಾ (ಆರ್​ಟಿಪಿಸಿಆರ್) ನೆಗೆಟಿವ್ ವರದಿ ಹೊಂದಿರಬೇಕು ಎಂದು ರಾಜ್ಯ ಸರ್ಕಾರ ನಿರ್ದೇಶಿಸಿದೆ. ಇದನ್ನು ಪ್ರಯಾಣಿಕ ಮತ್ತು ವಾಹನಗಳ ನಿರ್ವಾಹಕರು ಮತ್ತು ಮಾಲೀಕರು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಕರೊನಾ ನಿಯಂತ್ರಣ, ಮಾಸ್ಕ್ ಧರಿಸದವರಿಂದ ದಂಡ ಸಂಗ್ರಹ ಮತ್ತು ಮದುವೆ, ಸಭೆ, ಸಮಾರಂಭಗಳಿಗೆ ಮಾರ್ಷಲ್​ಗಳ ನೇಮಕ ಕುರಿತು ಜಿಲ್ಲಾ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಹಾರಾಷ್ಟ್ರದಿಂದ ಬಸ್, ರೈಲು, ಲಾರಿ ಹಾಗೂ ಕೇರಳದಿಂದ ವಿಮಾನ ಮೂಲಕ ಜಿಲ್ಲೆಗೆ ಸಾಕಷ್ಟು ಜನ ಆಗಮಿಸುತ್ತಾರೆ. ಅವರು ನಿಯಮ ಪಾಲಿಸದಿದ್ದರೆ ಸ್ಥಳದಲ್ಲೇ ಕ್ರಮ ಜರುಗಿಸಲು ಎಸಿಪಿ, ಡಿವೈಎಸ್​ಪಿ, ಪಾಲಿಕೆ ವಲಯ ಸಹಾಯಕ ಆಯುಕ್ತರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ ಎಂದರು.

    ಬಸ್ ನಿಲ್ದಾಣಗಳಲ್ಲಿ ಪರೀಕ್ಷೆಗೆ ವಾಹನಗಳನ್ನು ನಿಲ್ಲಿಸಲಾಗಿದೆ. ಶೀಘ್ರದಲ್ಲಿ ಲಾರಿಗಳು, ಖಾಸಗಿ ಬಸ್ ನಿಲ್ಲುವ ಸ್ಥಳ, ರೈಲು, ವಿಮಾನ ನಿಲ್ದಾಣದಲ್ಲಿ ವಿಶೇಷ ತಂಡಗಳನ್ನು ನೇಮಿಸಿ ಪ್ರಯಾಣಿಕರ ಮೇಲೆ ನಿಗಾ ವಹಿಸಲಾಗುವುದು. ಮಾಸ್ಕ್ ಧಾರಣೆ ಹಾಗೂ ಪರಸ್ಪರ ಅಂತರ ಕಾಪಾಡುವ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ನಿಯಮ ಪಾಲಿಸದವರ ವಿರುದ್ಧ ದಂಡ ವಿಧಿಸುವ ಕ್ರಮ ಕಠಿಣಗೊಳಿಸಬೇಕು ಎಂದು ಪೊಲೀಸ್ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.

    ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ 2020ರ ಏಪ್ರಿಲ್​ನಿಂದ 2021ರ ಫೆಬ್ರವರಿವರೆಗೆ ಕರೊನಾ ನಿಯಮ ಉಲ್ಲಂಘಿಸಿದವರಿಂದ ವಸೂಲಿ ಮಾಡಿದ ದಂಡದ ಕುರಿತು ವಿವರಿಸಿದರು.

    ಸಹಾಯಕ ಪೊಲೀಸ್ ಆಯುಕ್ತೆ ಅನುಷಾ ಜಿ., ಮಾತನಾಡಿ, ಅವಳಿನಗರ ವ್ಯಾಪ್ತಿಯಲ್ಲಿ ಒಂದು ವಾರದಲ್ಲಿ ಮಾಸ್ಕ್ ಧರಿಸದ ಹಾಗೂ ಅಂತರ ಕಾಪಾಡದ 1420 ಪ್ರಕರಣಗಳನ್ನು ದಾಖಲಿಸಿದ್ದು, 3,06,800 ರೂ. ದಂಡ ವಿಧಿಸಲಾಗಿದೆ ಎಂದರು. ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಇನ್ಸ್​ಪೆಕ್ಟರ್ ವಿಜಯ ಬಿರಾದಾರ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಡಾ. ಬಿ. ಗೋಪಾಲಕೃಷ್ಣ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಯಶವಂತ ಮದೀನಕರ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ಸುಜಾತಾ ಹಸವಿಮಠ, ಆರೋಗ್ಯ, ಕಂದಾಯ, ಸಾರಿಗೆ, ಮಹಾನಗರ ಪಾಲಿಕೆ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು, ಇತರರು ಇದ್ದರು.

    ಪಾಲಿಕೆ ಆಯುಕ್ತರಿಗೆ ನಿರ್ದೇಶನ: ಸರ್ಕಾರದ ಸೂಚನೆಯಂತೆ ಜಿಲ್ಲೆಯ ಗ್ರಾಮೀಣ ಹಾಗೂ ನಗರ ವ್ಯಾಪ್ತಿಯಲ್ಲಿ ನಡೆಯುವ ಮದುವೆ, ಸಭೆ, ಸಮಾರಂಭಗಳಲ್ಲಿ ಸಾರ್ವಜನಿಕರು ಮಾಸ್ಕ್ ಧರಿಸುವುದು, ಅಂತರ ಕಾಪಾಡುವುದು ಕಡ್ಡಾಯ. ಈ ಕುರಿತು ಸ್ಥಾನಿಕವಾಗಿ ಹಾಜರಿದ್ದು ಪರಿಶೀಲಿಸಲು ಮತ್ತು ನಿಯಮ ಉಲ್ಲಂಘಿಸುವವರ ವಿರುದ್ಧ ಸ್ಥಳದಲ್ಲೇ ದಂಡ ವಿಧಿಸಲು ಮಾರ್ಷಲ್​ಗಳನ್ನು ತಕ್ಷಣ ನೇಮಿಸುವಂತೆ ಪಾಲಿಕೆ ಆಯುಕ್ತರಿಗೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ನಿರ್ದೇಶಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts