More

    ‘ಪ್ರಧಾಯ’ ಸ್ವಯಂಚಾಲಿತ ಸೇವಾ ವಾಹನ

    ಹುಬ್ಬಳ್ಳಿ: ಕೋವಿಡ್ ಚಿಕಿತ್ಸಾ ಕೊಠಡಿಯಲ್ಲಿ ಕರೊನಾ ರೋಗಿಗಳಿಗೆ ಆಹಾರ, ಔಷಧೋಪಚಾರ ಸೇವೆ ನೀಡಲು ಪದೇಪದೆ ಪಿಪಿಇ ಕಿಟ್ ಹಾಕಿಕೊಂಡು ಹೋಗುವುದು ಒಂದು ರೀತಿ ಸವಾಲಿನ ಕೆಲಸವೇ. ಕೆಲ ತಿಂಗಳ ಹಿಂದೆಯೇ ಈ ಕೆಲಸವನ್ನು ಯಂತ್ರದ ಮೂಲಕ ಮಾಡಿಸುವ ಆಲೋಚನೆ ಮಾಡಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಇದೀಗ ಯಶಸ್ವಿಯಾಗಿದ್ದಾರೆ.

    ಕರೊನಾ ಮುಂಚೂಣಿ ಸೇನಾನಿಗಳ ಕಾರ್ಯಭಾರ ಕಡಿಮೆ ಮಾಡಲು ಏನಾದರೂ ಕೊಡುಗೆ ನೀಡಬೇಕು ಎಂದು ಸಂಕಲ್ಪ ಮಾಡಿದ ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ಕೆಎಲ್​ಇ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವಿದ್ಯಾರ್ಥಿಗಳು ‘ಪ್ರಧಾಯ’ ಎಂಬ ಯಂತ್ರ ಆವಿಷ್ಕಾರ ಮಾಡಿದ್ದಾರೆ.

    ಹುಬ್ಬಳ್ಳಿಯ ಸ್ವರ್ಣ ಗ್ರೂಪ್​ನ ಡಾ. ವಿಎಸ್​ವಿ ಪ್ರಸಾದ ಅವರ ಪ್ರಾಯೋಜಕತ್ವದಲ್ಲಿ ಅಭಿವೃದ್ಧಿ ಪಡಿಸಿರುವ ಸ್ವಯಂ ಚಾಲಿತ ರೊಬೊಟಿಕ್ ವಾಹನ ‘ಪ್ರಧಾಯ’ವನ್ನು ಸಚಿವ ಜಗದೀಶ ಶೆಟ್ಟರ ಬುಧವಾರ ಕಿಮ್ಸ್ ಸಂಸ್ಥೆಗೆ ಹಸ್ತಾಂತರಿಸಿದರು. ಈ ಯಂತ್ರ ಕೋವಿಡ್ ವಿಭಾಗದ ವೈದ್ಯರು, ಸಿಬ್ಬಂದಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ್, ಆಡಳಿತಾಧಿಕಾರಿ ರಾಜಶ್ರೀ ಜೈನಾಪುರ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮೋಹನ ಭರಮಕ್ಕನವರ, ಡಾ. ವಿಎಸ್​ವಿ ಪ್ರಸಾದ, ಇತರರು ಉಪಸ್ಥಿತರಿದ್ದರು.

    ಯಂತ್ರ ರೂಪುಗೊಂಡ ಹಿನ್ನೆಲೆ:

    ಕಿಮ್ಸ್ ವೈದ್ಯ ಡಾ. ಎಸ್.ವೈ. ಮುಲ್ಕಿಪಾಟೀಲ ಅವರ ವಿನೂತನ ಆಲೋಚನೆಗಳು ಮತ್ತು ಪ್ರೇರಣೆಯಿಂದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಈ ಯೋಜನೆ ಕೈಗೆತ್ತಿಕೊಂಡರು. ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ಸ್ವಯಂಚಾಲಿತ ಮಾರ್ಗದರ್ಶಿ ವಾಹನ (ಆಟೊಮೆಟಿಕ್ ಗೈಡೆಡ್ ವೆಹಿಕಲ್) ಅಭಿವೃದ್ಧಿ ಪಡಿಸಿದರೆ ಕೋವಿಡ್ ವಾರ್ಡಗಳಲ್ಲಿ ರೋಗಿಗಳಿಗೆ ಆಹಾರ, ಔಷಧ ವಿತರಣೆಗೆ ಸಹಕಾರಿಯಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದರು.

    ಆಗ ಅಂದಿನ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಈ ಹೊಸ ವಿಚಾರದಿಂದ ಸ್ಪೂರ್ತಿಗೊಂಡು ಪ್ರೋತ್ಸಾಹ ನೀಡಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮೋಹನ ಭರಮಕ್ಕನವರ ಅವರಿಗೆ ಈ ನಿಟ್ಟಿನಲ್ಲಿ ಎಲ್ಲ ಪ್ರೋತ್ಸಾಹ ನೀಡಲು ಸೂಚಿಸಿದ್ದರು.

    ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳ ಆಸಕ್ತಿ ಕಂಡು ಹುಬ್ಬಳ್ಳಿಯ ಸ್ವರ್ಣ ಗ್ರೂಪ್​ನ ಡಾ. ವಿ.ಎಸ್.ವಿ. ಪ್ರಸಾದ ಪ್ರಾಯೋಜಕತ್ವ ನೀಡಲು ಮುಂದೆ ಬಂದರು. ಇವರೆಲ್ಲರ ಪ್ರಯತ್ನದಿಂದ ಈ ಯಂತ್ರ ರೂಪು ತಳೆದಿದೆ.

    ಕೆಎಲ್​ಇ ಇಂಜಿನಿಯರಿಂಗ್ ವಿವಿ ವಿದ್ಯಾರ್ಥಿಗಳಾದ ಕಿರಣ್ ಕೆ., ಸಂತೋಷ ಕೆ., ಮದನ್ ವೈ., ಅಭಿಲಾಷ್ ಜಿ., ಕಾರ್ತಿಕ ಆರ್., ಅಭಿಷೇಕ, ವಿನಾಯಕ ಮತ್ತಿತರರ ತಂಡಕ್ಕೆ ಪ್ರಾಧ್ಯಾಪಕರಾದ ಡಾ. ರವಿ ಗುತ್ತಲ, ಡಾ. ಎಸ್.ಸಿ. ಸಜ್ಜನ ಮಾರ್ಗದರ್ಶನ ನೀಡಿದ್ದಾರೆ.

    ಕರೊನಾ ಸೇನಾನಿಗಳಿಗೆ ಅನುಕೂಲ

    ವೈದ್ಯರು, ನರ್ಸ್​ಗಳಿಗೆ ಹೆಚ್ಚಿನ ಅನುಕೂಲವನ್ನು ಯಂತ್ರ ಒದಗಿಸಲಿದೆ. ವಿಶೇಷವಾಗಿ ಕೋವಿಡ್ ವಾರ್ಡಗಳಲ್ಲಿ ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿ, ಶುಶ್ರೂಷಕರು, ಊಟೋಪಚಾರ ನೀಡುವವರು ಪ್ರತಿ ಬಾರಿ ಪಿಪಿಇ ಕಿಟ್ ಧರಿಸಿಯೇ ಹೋಗಬೇಕಾಗುತ್ತದೆ. ಊಟ, ಔಷಧಿ ಇತ್ಯಾದಿಗಳನ್ನು ರೋಗಿಗಳಿಗೆ ತಲುಪಿಸಲು ಈ ಯಂತ್ರ ಬಹಳಷ್ಟು ಸಹಕಾರಿಯಾಗಲಿದೆ. ರೋಗಿಯ ಬೆಡ್​ವರೆಗೆ ಯಂತ್ರ ಹೋಗಿ ಬರಲು ವ್ಯವಸ್ಥೆ ಅಳವಡಿಸಲಾಗಿದ್ದು, ಇದರಿಂದ ವೈದ್ಯರು ಒಂದು ಸ್ಥಳದಲ್ಲಿ ಕುಳಿತು ಇದನ್ನು ನಿರ್ವಹಣೆ ಮಾಡುತ್ತ ರೋಗಿಗೆ ಬೇಕಾದ ಔಷಧಿ ಹಾಗೂ ಊಟೋಪಚಾರ ತಲುಪಿಸಬಹುದಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts