More

    ಪ್ರತಿ ಹಳ್ಳಿಯಲ್ಲೂ ಸರ್ಕಾರಿ ಕಟ್ಟಡ, ಸಮುದಾಯ ಭವನ ನಿರ್ಮಾಣ; ಭೂಮಿ ಕಾಯ್ದಿರಿಸುವಂತೆ ಸರ್ಕಾರದಿಂದ ಶೀಘ್ರ ಸುತ್ತೋಲೆ: ಕುಮಾರ್ ಬಂಗಾರಪ್ಪ

    ಸೊರಬ: ಪ್ರತಿ ಹಳ್ಳಿಯಲ್ಲೂ ಸರ್ಕಾರಿ ಕಟ್ಟಡ, ಸಮುದಾಯ ಭವನಗಳ ನಿರ್ಮಾಣಕ್ಕೆ ಕಂದಾಯ ಭೂಮಿಯನ್ನು ಕಾಯ್ದಿರಿಸುವಂತೆ ಸರ್ಕಾರ ಸದ್ಯದಲ್ಲೇ ಸುತ್ತೋಲೆ ಹೊರಡಿಸಲಿದೆ. ಅದರಂತೆ ಗ್ರಾಪಂ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು ಎಂದು ಶಾಸಕ ಕುಮಾರ್ ಬಂಗಾರಪ್ಪ ಸಲಹೆ ನೀಡಿದರು.
    ತಾಲೂಕಿನ ಸಾಲಿಗೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶಕುನವಳ್ಳಿಯಲ್ಲಿ ಸಮುದಾಯ ಭವನ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕೊಠಡಿ, ತುಯಿಲ್‌ಕೊಪ್ಪ ಸಮುದಾಯ ಭವನ, ಶಂಕ್ರಿಕೊಪ್ಪ, ತಲಗಡ್ಡೆ, ಅರೆತಲಗಡ್ಡೆ, ಕೋಡಿಕೊಪ್ಪ, ಸೂರಣಿಗಿ, ಸಾಲಿಗೆ, ಬಂಕಸಾಣಗಳ ಒಟ್ಟು 6 ಕೋಟಿ ರೂ. ಅನುದಾನದ ವಿವಿಧ ಕಾಮಗಾರಿಗಳ ಗುದ್ದಲಿ ಪೂಜೆ ಹಾಗೂ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಬೆಳಗಾವಿ ಅಧಿವೇಶನದಲ್ಲಿ ಕಂದಾಯ ಭೂಮಿಯನ್ನು ಕಾಯ್ದಿರಿಸುವ ಬಗ್ಗೆ ಸರ್ಕಾರಕ್ಕೆ ಕೇಳಿದ್ದು ಸಚಿವರು ಅದಕ್ಕೆ ಸಮ್ಮತಿ ನೀಡಿದ್ದಾರೆ. ಮುಂದಿನ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಗ್ರಾಮಗಳಿಗೆ ರಸ್ತೆ, ಕುಡಿಯುವ ನೀರು, ಶಾಲಾ ಕೊಠಡಿ, ವಿದ್ಯುತ್ ಮೊದಲಾದ ಸವಲತ್ತುಗಳನ್ನು ಕಲ್ಪಿಸುವ ಅಗತ್ಯವಿದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ವಯ ಶಾಲಾ ಕೊಠಡಿಗಳನ್ನು ನಿರ್ಮಿಸಲಾಗುತ್ತಿದ್ದು ಅದರಂತೆ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಕಟ್ಟಡಗಳು ನಿರ್ಮಾಣ ವಾಗುತ್ತಿವೆ. ತಾಲೂಕಿನಲ್ಲಿ 250 ಕ್ಕೂ ಹೆಚ್ಚು ಶಾಲಾ ಕೊಠಡಿಗಳ ಅಗತ್ಯವಿದೆ. ಈಗಾಗಲೇ 50ಕ್ಕೂ ಹೆಚ್ಚು ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಅನುದಾನ ದೊರೆತಿದೆ ಎಂದರು.
    94 ಸಿಸಿ ಅಡಿಯಲ್ಲಿ ಕಂದಾಯ ಭೂಮಿಯಲ್ಲಿ ಈಗಾಗಲೇ ಮನೆ ಕಟ್ಟಿಕೊಂಡವರಿಗೆ ಮಂಜೂರಾತಿ ಕೊಡಲಾಗುತ್ತದೆ. ಅದೇ ರೀತಿ ರಸ್ತೆ ಅಗಲೀಕರಣಕ್ಕೂ ಆದ್ಯತೆ ನೀಡಲಾಗಿದೆ. ಸೊರಬ, ಜಡೆ, ಸೊರಬ ಆನವಟ್ಟಿ ಹಾಗೂ ಗ್ರಾಮೀಣ ರಸ್ತೆಗಳ ಅಗಲೀಕರಣ ನಡೆಯುತ್ತಿದ್ದು, ಆನವಟ್ಟಿ ಚಂಡ ಮುರುಕನ ಹಳ್ಳದ ರಸ್ತೆ, ಜಡೆ ಕುಬಟೂರು ರಸ್ತೆ, ಜಡೆ ಸೂರಣಗಿ ರಸ್ತೆ, ಮುಂತಾದವುಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು.
    ಅಭಿವೃದ್ಧಿ ನಿರಂತರವಾಗಿ ನಡೆಯುತ್ತಿದೆ. ಸಮಾಜ ಪರಿವರ್ತನೆಯಾದಂತೆ ಅಗತ್ಯಕ್ಕೆ ಅನುಗುಣವಾಗಿ ಅಭಿವೃದ್ಧಿ ಕಾರ್ಯಗಳು ನಡೆಯಬೇಕಿದ್ದು, ಆನವಟ್ಟಿ ಗ್ರಾಮ ಪಂಚಾಯಿತಿಯನ್ನಾಗಿ ಮಾಡಿದಂತೆ, ಜಡೆ ಹೋಬಳಿಯನ್ನು ಸಹಾ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಲಾಗುತ್ತದೆ. ಅದಕ್ಕನುಗುಣವಾಗಿ ಸುತ್ತಮುತ್ತಲಿನ ಗ್ರಾಮಗಳಿಗೆ ಅಗತ್ಯ ಕಾಮಗಾರಿಗಳು ನಡೆಯುವುದು ಅನಿವಾರ್ಯ. ಆ ನಿಟ್ಟಿನಲ್ಲಿ ಸವಲತ್ತುಗಳನ್ನು ಒದಗಿಸಿಕೊಡಲಾಗುತ್ತದೆ ಎಂದ ಅವರು, ಪಟ್ಟಣದ ಸಂತೆ ಮೈದಾನ, ಬಸ್ ನಿಲ್ದಾಣ, ಮೊದಲಾದ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts