More

    ಪ್ರತಿ ತಾಲೂಕಿನಲ್ಲಿ ತ್ಯಾಜ್ಯ ನಿರ್ವಹಣೆ ಘಟಕ ನಿರ್ಮಿಸಿ

    ಮಡಿಕೇರಿ: ಪ್ರತಿ ತಾಲೂಕಿನಲ್ಲಿ ತ್ಯಾಜ್ಯ ನಿರ್ವಹಣೆ ಘಟಕ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಾಲೂಕು ಪಂಚಾಯಿತಿ ಇಒಗಳಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ.ಹರೀಶ್ ಸೂಚಿಸಿದರು.

    ನಗರದ ನೂತನ ಜಿಪಂ ಸಭಾಂಗಣದಲ್ಲಿ 15ನೇ ಹಣಕಾಸು ಆಯೋಗದ ಯೋಜನೆಯ ಅನುದಾನ ಸಂಬಂಧ ಶನಿವಾರ ಆಯೋಜಿಸಿದ್ದ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 15ನೇ ಹಣಕಾಸು ಯೋಜನೆಯಡಿ ಜಿಲ್ಲಾ ಪಂಚಾಯಿತಿಗೆ ಒಟ್ಟು 2.21 ಕೋಟಿ ರೂ. ಅನುದಾನ ಮಂಜೂರಾಗಿದೆ. ಇದರಲ್ಲಿ 55,48,822 ರೂ. ಸಾಮುದಾಯಿಕ ನೈರ್ಮಲ್ಯ ಕಾಮಗಾರಿಗಳಿಗೆ ಮೀಸಲಿಟ್ಟ ಹಣ ಮತ್ತು ತಾಲೂಕು ಪಂಚಾಯಿತಿ ಅನುದಾನ ಬಳಸಿಕೊಂಡು ಜಿಪಂ ಸರ್ವ ಸದಸ್ಯರ ಸಹಮತದೊಂದಿಗೆ ಪ್ರತಿ ತಾಲೂಕು ಮಟ್ಟದಲ್ಲಿ ತ್ಯಾಜ್ಯ ವಿಲೇವಾರಿ ಹಾಗೂ ಸಂಸ್ಕರಣೆ ಗೊಬ್ಬರ ಉತ್ಪಾದನಾ ಘಟಕವನ್ನು ನಿರ್ಮಿಸಲು ಸೂಚಿಸಿದರು.

    ಸಿಇಒ ಕೆ.ಲಕ್ಷ್ಮೀಪ್ರಿಯಾ ಮಾತನಾಡಿ, 15ನೇ ಹಣಕಾಸು ಯೋಜನೆಯ ಅನುದಾನ ಬಳಸಿಕೊಳ್ಳಲು ನಿಗದಿಪಡಿಸಿದ ಮಾನದಂಡಗಳ ಕುರಿತು ಸಭೆ ಮಾಹಿತಿ ನೀಡಿ ಮೂಲ ಅನುದಾನ 1,10,97,643 ರೂ. (ಶೇ.50), ನಿರ್ಬಂಧಿತ ಅನುದಾನ 1,10,97,644 ರೂ.(ಶೇ.50) ಒಟ್ಟು 2,21,98,294 ಅನುದಾನಕ್ಕೆ ಕ್ರಿಯಾ ಯೋಜನೆಯನ್ನು ರೂಪಿಸಬೇಕಾಗಿದೆ. ಇದರಲ್ಲಿ ಕುಡಿಯುವ ನೀರಿನ ಕಾಮಗಾರಿಗೆ 55,48,822 ರೂ. ಹಾಗೂ ನೈರ್ಮಲ್ಯ ಕಾಮಗಾರಿಗೆ 55,48,822 ರೂ. ಮೀಸಲಿಟ್ಟು ಕ್ರಿಯಾ ಯೋಜನೆ ರೂಪಿಸಬೇಕಾಗಿರುತ್ತದೆ ಎಂದು ಮಾಹಿತಿ ನೀಡಿದರು.
    ಈ ಯೋಜನೆಯ ಕಾಮಗಾರಿಗಳು ಸಾಮಾಜಿಕ ಲೆಕ್ಕಪರಿಶೋಧನೆಗೆ ಒಳಪಟ್ಟಿದ್ದು, ನಿಯಮಾವಳಿ ಅನುಸಾರ ಕ್ರಿಯಾ ಯೋಜನೆಯನ್ನು ತುರ್ತಾಗಿ ಸಿದ್ಧಪಡಿಸಿ ಅನುದಾನ ಬಳಸಿಕೊಳ್ಳಬೇಕಿದೆ ಎಂದು ತಿಳಿಸಿದರು.

    ಹಲವು ಸದಸ್ಯರು ಬಾಕಿ ಕೆಲಸಗಳು ಇನ್ನೂ ಮುಗಿಯದಿರುವ ಬಗ್ಗೆ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿ, ಬಾಕಿ ಕಾಮಗಾರಿ ಮುಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಭೆಯ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ, ಬಾಕಿ ಕೆಲಸಗಳನ್ನು ಮುಂದುವರಿಸಲು ಯಾವುದೇ ತೊಂದರೆ ಹಾಗೂ ಅನುದಾನದ ಕೊರತೆ ಉಂಟಾಗುವುದಿಲ್ಲ ಎಂದರು.

    ಸದಸ್ಯೆ ಪೂರ್ಣಿಮಾ ಗೋಪಾಲ್ ಮಾತನಾಡಿ, ಕಸ ವಿಲೇವಾರಿ ಘಟಕದಲ್ಲಿ ದೊರೆಯುವ ತ್ಯಾಜ್ಯವನ್ನು ತೋಟಗಾರಿಕಾ ಇಲಾಖೆಯವರು ಸಂಸ್ಕರಿಸಿ ಗೊಬ್ಬರವನ್ನು ರೈತರಿಗೆ ಹಂಚಿಕೆ ಮಾಡಿದ್ದಲ್ಲಿ ಪಂಚಾಯಿತಿಗಳು ಉತ್ತಮ ಆದಾಯ ಗಳಿಸುವುದರೊಂದಿಗೆ ಸಮರ್ಪಕ ತ್ಯಾಜ್ಯ ನಿರ್ವಹಣೆ ಮಾಡಿದಂತಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಉಪಕಾರ್ಯದರ್ಶಿ ಗುಡೂರು ಭೀಮಸೇನ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಕವಿತಾ ಪ್ರಭಾಕರ್, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಅಪ್ಪಂಡೇರಂಡ ಭವ್ಯಾ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ಆರ್.ಮಂಜುಳಾ, ಸದಸ್ಯರಾದ ಬಾನಂಡ ಪ್ರಥ್ಯು, ಶಿವು ಮಾದಪ್ಪ, ಮುರಳಿ ಕರುಂಬಮ್ಮಯ್ಯ, ಕಿರಣ್ ಕಾರ್ಯಪ್ಪ, ಸಿ.ಕೆ.ಬೋಪಣ್ಣ, ಅಧಿಕಾರಿಗಳು ಇತರರಿದ್ದರು.

    ಜಿಲ್ಲೆಯಲ್ಲಿ ಒಟ್ಟು 104 ಗ್ರಾಮ ಪಂಚಾಯಿತಿಗಳಲ್ಲಿ ಬಹುತೇಕ ಎಲ್ಲ ಗ್ರಾಪಂ ಮಟ್ಟದಲ್ಲೂ ಕಸ ವಿಲೇವಾರಿ ಘಟಕಗಳನ್ನು ನಿರ್ಮಿಸಲಾಗಿದೆ. ಕೆಲ ಪಂಚಾಯಿತಿಗಳಲ್ಲಿ ನಿರ್ಮಾಣ ಹಂತದಲ್ಲಿದೆ. 10 ಗ್ರಾಪಂಗಳಲ್ಲಿ ಘಟಕ ನಿರ್ಮಾಣ ಬಾಕಿಯಿದೆ. ಪ್ರಸ್ತುತ ಕಸ ವಿಲೇವಾರಿ ಘಟಕಗಳಲ್ಲಿ ಕೆಲ ನ್ಯೂನತೆಗಳಿದ್ದು, ಇವುಗಳನ್ನು ಸರಿಪಡಿಸಲಾಗುವುದು. ಸೂಕ್ತ ನಿರ್ವಹಣೆಗೆ ತಾಪಂ ಇಒಗಳಿಗೆ ಅಗತ್ಯ ಕ್ರಮಕೈಗೊಳ್ಳುವಂತೆ ಸಿಇಒ ಕೆ.ಲಕ್ಷ್ಮೀಪ್ರಿಯಾ ನಿರ್ದೇಶನ ನೀಡಿದರು.

    ಅನುದಾನಕ್ಕೆ ಯಾರು ಹೊಣೆ?: ಕಳೆದ ಸಾಲಿನಲ್ಲಿ ಸೋಮವಾರಪೇಟೆ ಮತ್ತು ಮಡಿಕೇರಿ ವ್ಯಾಪ್ತಿಯ ಜಿಪಂ ಸಂಬಂಧಿಸಿದ ಕಾಮಗಾರಿ ಅನುದಾನ ಸಕಾಲದಲ್ಲಿ ಬಳಸಿಕೊಳ್ಳದೇ ಇದ್ದುದರಿಂದ ಖಜಾನೆ ಹಿಂತೆಗೆದುಕೊಂಡಿದೆ. ಅನುದಾನ ವಾಪಸ್ ಹೋಗದ್ದಕ್ಕೆ ಹೊಣೆ ಯಾರು. ಹೀಗೆ ಆದಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸುವುದಾದರೂ ಹೇಗೆ ಎಂದು ಸದಸ್ಯೆ ಕೆ.ಪಿ.ಚಂದ್ರಕಲಾ ಪ್ರಶ್ನಿಸಿದರು.

    ಇದಕ್ಕೆ ಉತ್ತರಿಸಿದ ಸಂಬಂಧಪಟ್ಟ ತಾಪಂ ಇಒಗಳು, ಸಕಾಲದಲ್ಲಿ ಬಿಲ್ಲುಗಳನ್ನು ಖಜಾನೆಗೆ ಸಲ್ಲಿಸಿದರೂ ಕೆಲ ವಿಳಂಬದಿಂದಾಗಿ ಅನುದಾನ ವಾಪಸ್ ಹೋಗಿದೆ. ಇದು ಕೇವಲ ನಮ್ಮ ಈ ಎರಡು ತಾಲೂಕುಗಳಲ್ಲಿ ಆಗಿರುವುದಲ್ಲ. ರಾಜ್ಯದಲ್ಲಿ ಹಲವು ತಾಲೂಕುಗಳಲ್ಲಿ ಈ ರೀತಿ ತೊಂದರೆಯಾಗಿದೆ ಎಂದು ಸಭೆಯ ಗಮನಕ್ಕೆ ತಂದರು.

    ಅನುದಾನ ಸಮಾನಾಗಿರಲಿ: 15ನೇ ಹಣಕಾಸು ಯೋಜನೆಯ ಕ್ರಿಯಾ ಯೋಜನೆಯಲ್ಲಿ ಕುಡಿಯುವ ನೀರಿನ ಕಾಮಗಾರಿಗೆ ಮೀಸಲಿರುವ 55.48 ಲಕ್ಷ ರೂ. ಅನ್ನು ಎಲ್ಲ 29 ಸದಸ್ಯರ ಕ್ಷೇತ್ರಕ್ಕೆ ಸಮನಾಗಿ ಹಂಚಿಕೆ ಮಾಡಬೇಕು. ಇದರಿಂದ ಕುಡಿಯುವ ನೀರಿಗೆ ಸಂಬಂಧಿಸಿದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅನುಕೂಲವಾಗುತ್ತದೆ ಎಂದು ಸದಸ್ಯ ದೀಪಕ್ ದೇವಯ್ಯ ಸಭೆಯ ಗಮನ ಸೆಳೆದರು.

    ಇದಕ್ಕೆ ಸರ್ವ ಸದಸ್ಯರು ಅಭಿಮತ ವ್ಯಕ್ತಪಡಿಸಿ ಅಧ್ಯಕ್ಷರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು ಸದಸ್ಯರ ಅಭಿಮತದಿಂದ ಅಗತ್ಯ ಕ್ರಿಯಾಯೋಜನೆ ರೂಪಿಸಿ ಸರ್ಕಾರಕ್ಕೆ ಕಳುಹಿಸುವಂತೆ ಸಿಇಒಗೆ ಸೂಚನೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts