More

    ಪ್ರಗತಿಯಲ್ಲಿ ಎಂಜಿಎನ್​ಆರ್​ಇಜಿ ಕಾಮಗಾರಿ

    ಸಿದ್ದಾಪುರ: ಕರೊನಾ ಲಾಕ್​ಡೌನ್ ನಡುವೆಯೂ ತಾಲೂಕಿನಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ (ಎಂಜಿಎನ್​ಆರ್​ಇಜಿ) ಯೋಜನೆ ಕಾಮಗಾರಿಗಳು ಪ್ರಗತಿಯಲ್ಲಿವೆ. ಕಳೆದ ಇಪ್ಪತ್ತು ದಿನಗಳಲ್ಲಿ 141 ವೈಯಕ್ತಿಕ ಹಾಗೂ 76 ಸಮುದಾಯ ಕಾಮಗಾರಿ ಸೇರಿ ಒಟ್ಟು 217 ಕಾಮಗಾರಿಗಳು ಪ್ರಗತಿಯಲ್ಲಿವೆ.

    ತಾಲೂಕಿನ 23 ಗ್ರಾಪಂನಲ್ಲಿ ಎಂಜಿಎನ್​ಆರ್​ಇಜಿ ಕಾಮಗಾರಿಗಳು ನಡೆಯುತ್ತಿವೆ. ಕೋಲಸಿರ್ಸಿ ಗ್ರಾಪಂನಲ್ಲಿ ಅತಿ ಹೆಚ್ಚು ಅಂದರೆ 24 ಕಾಮಗಾರಿಗಳು ನಡೆಯುತ್ತಿದ್ದು, ಇದು ತಾಲೂಕಿನಲ್ಲಿ ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿರುವ ಹಲಗೇರಿ ಹಾಗೂ ಇಟಗಿ ಗ್ರಾಪಂನಲ್ಲಿ 14 ಮತ್ತು ಮೂರನೇ ಸ್ಥಾನದಲ್ಲಿರುವ ಕಾನಗೋಡ ಹಾಗೂ ಕವಂಚೂರನಲ್ಲಿ 13 ಕಾಮಗಾರಿಗಳು ನಡೆಯುತ್ತಿವೆ. ಅತಿ ಕಡಿಮೆ ಎಂದರೆ ಬಿದ್ರಕಾನ ಗ್ರಾಪಂನಲ್ಲಿ ಮೂರು ಕಾಮಗಾರಿಗಳು ಮಾತ್ರ ನಡೆಯುತ್ತಿವೆ. ಕ್ಯಾದಗಿ ಹಾಗೂ ನಿಲ್ಕುಂದ 12, ಅಣಲೇಬೈಲ್, ಶಿರಳಗಿ, ವಾಜಗೋಡ ಗ್ರಾಪಂನಲ್ಲಿ 8, ಬಿದ್ರಕಾನ ಹಾಗೂ ತ್ಯಾಗಲಿ 11, ಮನಮನೆ, ತಂಡಾಗುಂಡಿ 7, ಬಿಳಗಿ, ಕೊರ್ಲಕೈ, ಸೋವಿನಕೊಪ್ಪ, ಕಾನಸೂರು 6, ದೊಡ್ಮನೆ ಹಾಗೂ ಹಾರ್ಸಿಕಟ್ಟಾ 9, ಹಸರಗೋಡ ಹಾಗೂ ಹೆಗ್ಗರಣಿ 5 ಕಾಮಗಾರಿಗಳು ಪ್ರಗತಿಯಲ್ಲಿವೆ.

    2020-21ರಲ್ಲಿ ತಾಲೂಕಿನಲ್ಲಿ 92,809 ಮಾನವ ದಿನಗಳ ಗುರಿ ಹೊಂದಿದ್ದು, ಇದರಲ್ಲಿ ಈಗಾಗಲೇ 9382 ಮಾನವ ದಿನಗಳ ಸಾಧನೆ ಆಗಿದೆ. ಆರ್ಥಿಕ ಗುರಿ 450.88 ಲಕ್ಷ ರೂ. ಇದ್ದು, ಇದರಲ್ಲಿ ಈಗಾಗಲೇ 16.20 ಲಕ್ಷ ರೂ. ಸಾಧನೆ ಮಾಡಲಾಗಿದೆ.

    ಎಂಜಿಎನ್​ಆರ್​ಇಜಿಯಲ್ಲಿ ಸುಮಾರು 22 ಕಾಮಗಾರಿಗಳನ್ನು ನಡೆಸಲು ಅವಕಾಶ ಇದೆ. ಇದರಲ್ಲಿ ಮುಖ್ಯವಾಗಿ ಮನೆ ಕಟ್ಟಿಕೊಳ್ಳುವುದಕ್ಕೆ ಅವಕಾಶ ಇರುವುದರಿಂದ 82 ಮನೆಗಳು ನಿರ್ಮಾಣ ಹಂತದಲ್ಲಿವೆ. 32 ಕೊಟ್ಟಿಗೆ ಮನೆ, 18 ನೀರು ಕಾಲುವೆ, 14 ತೆರೆದ ಬಾವಿ, 12 ರಸ್ತೆ ಸೇರಿ ವಿವಿಧ ಕಾಮಗಾರಿ ನಡೆಯುತ್ತಿದ್ದು, ಈ ಎಲ್ಲ ಕಾಮಗಾರಿಗಳು ಕರೊನಾ ಲಾಕ್​ಡೌನ್​ನಲ್ಲಿ ನಡೆಯುತ್ತಿರುವುದು ವಿಶೇಷವಾಗಿದೆ. ಇದಲ್ಲದೆ, ತೋಟಗಾರಿಕೆ ಇಲಾಖೆ ಅಡಿಯಲ್ಲಿ 18 ಹಾಗೂ ಕೃಷಿ ಇಲಾಖೆ ಅಡಿಯಲ್ಲಿ 9 ಕಾಮಗಾರಿಗಳು ನಡೆಯುತ್ತಿವೆ.

    ಮಹಿಳೆಯರೇ ಹೆಚ್ಚು: ಪ್ರಸಕ್ತ ಸಾಲಿನಲ್ಲಿ ನಡೆಯುತ್ತಿರುವ ಎಂಜಿಎನ್​ಆರ್​ಇಜಿ ಯೋಜನೆಯಲ್ಲಿ ಮಹಿಳೆಯರೇ ಹೆಚ್ಚು ಪಾಲ್ಗೊಂಡು ಕಾಮಗಾರಿ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ ಎಂದು ಗ್ರಾಪಂ ಅಧಿಕಾರಿಗಳು ಹೇಳುತ್ತಾರೆ.

    ಕರೊನಾ ಲಾಕ್​ಡೌನ್​ನಿಂದ ರೈತರಿಗೆ ಎಂಜಿಎನ್​ಆರ್​ಇಜಿ ಯೋಜನೆಯಲ್ಲಿ ಸರ್ಕಾರ ಕೆಲಸ ಮಾಡಲು ಅವಕಾಶ ನೀಡಿದ್ದು ಸ್ವಾಗತಾರ್ಹ. ಇದರಿಂದ ವಿವಿಧ ಕಾಮಗಾರಿ ನಡೆಸುವುದರ ಜತೆಗೆ ಆರ್ಥಿಕವಾಗಿಯೂ ಸುಧಾರಿಸಿಕೊಳ್ಳಲು ಅವಕಾಶವಾಗಿದೆ. | ಕನ್ನಪ್ಪ ಕರಿಯಾ ನಾಯ್ಕ ಹಸ್ವಂತೆ ರೈತ

    ಕರೊನಾ ಲಾಕ್​ಡೌನ್​ನಿಂದ ಜನತೆಗೆ ಉದ್ಯೋಗ ಇಲ್ಲ ಎಂದು ಆಗಬಾರದೆಂಬ ಉದ್ದೇಶದಿಂದ ಎಲ್ಲ ಗ್ರಾಪಂಗಳಲ್ಲಿ ಎಂಜಿಎನ್​ಆರ್​ಇಜಿ ಯೋಜನೆ ಕಾಮಗಾರಿಗೆ ಆದ್ಯತೆ ನೀಡಲಾಗಿದೆ. ಕಾಮಗಾರಿ ಮುಗಿದ ಒಂದು ವಾರದೊಳಗೆ ಎಲ್ಲ ಕೂಲಿಕಾರರ ಖಾತೆಗೆ ಹಣ ಜಮಾ ಮಾಡಲಾಗುತ್ತಿರುವುದರಿಂದ ಜನತೆ ಹೆಚ್ಚಿನ ಪ್ರಮಾಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. | ಪ್ರಶಾಂತ ರಾವ್ ತಾಪಂ ಇಒ ಸಿದ್ದಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts