More

    ಪ್ಯಾರಾಕ್ಲೈಂಬಿಂಗ್‌ನಲ್ಲಿ ಕಂಚು ಗೆದ್ದ ಸುನೀತಾ

    ಬೆಳಗಾವಿ: ರಷ್ಯಾದ ಮಾಸ್ಕೋದಲ್ಲಿ ನಡೆಯುತ್ತಿರುವ ಪ್ಯಾರಾಕ್ಲೈಂಬಿಂಗ್ಚಾಂ ಪಿಯನ್‌ಶಿಪ್‌ನಲ್ಲಿ ಖಾನಾಪುರ ತಾಲೂಕಿನ ತೋಲಗಿ ಗ್ರಾಮದ ಸುನೀತಾ ಎನ್. ದುಂಡಪ್ಪನವರ 3ನೇ ಸ್ಥಾನ ಪಡೆದು ಕಂಚಿನ ಪದಕ ಗಳಿಸಿದ್ದಾಳೆ.

    ರೈತನ ಮಗಳ ಈ ಸಾಧನೆಯಿಂದ ಜಿಲ್ಲೆ, ದೇಶದ ಕೀರ್ತಿ ಹೆಚ್ಚಿದೆ. ಸಮರ್ಥನಂ ಅಂಗವಿಕಲ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ಸುನೀತಾ, ತೋಲಗಿ ಗ್ರಾಮದ ರೈತ ನೀಲಕಂಠ-ಸಾವಿತ್ರಿ ದಂಪತಿಯ ಕಿರಿಯ ಪುತ್ರಿ. ದೃಷ್ಟಿದೋಷವುಳ್ಳವರ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ಭಾರತ ಸ್ಪರ್ಧಿಸಿತ್ತು. 24 ವರ್ಷದ ಸುನೀತಾ, ಸೆ. 17ರಂದು ಜರುಗಿದ ಬಿ 3 (ಅರೆ ದೃಷ್ಟಿದೋಷ) ವಿಭಾಗದಲ್ಲಿ ಸ್ಪರ್ಧಿಸಿ ಕಂಚಿನ ಪದಕ ಗೆದ್ದಿದ್ದಾಳೆ.

    ವಿಶೇಷ ಪ್ರತಿಭೆ: 2014ರಲ್ಲಿ ಬೆಳಗಾವಿಯ ಸಮರ್ಥನಂ ಸಂಸ್ಥೆಗೆ ವೃತ್ತಿಪರ ತರಬೇತಿ ಪಡೆಯಲು ಸುನೀತಾ ಆಗಮಿಸಿದ್ದಳು. ನಾಲ್ಕು ತಿಂಗಳ ಕಂಪ್ಯೂಟರ್ ತರಬೇತಿ ಪಡೆದಿದ್ದಳು. ಈ ಸಂದರ್ಭದಲ್ಲಿ ಆಕೆಯಲ್ಲಿದ್ದ ವಿಶೇಷ ಪ್ರತಿಭೆ ಗಮನಿಸಿದ ಸಂಸ್ಥೆಯ ಮುಖ್ಯಸ್ಥ ಅರುಣಕುಮಾರ ಎಂ.ಜಿ. ಅವರು, ಹೆಚ್ಚಿನ ತರಬೇತಿ ಹಾಗೂ ಅವಕಾಶಗಳಿಗಾಗಿ ಬೆಂಗಳೂರಿನಲ್ಲಿರುವ ಸಂಸ್ಥೆಯ ಕೇಂದ್ರ ಕಚೇರಿಗೆ ಕಳುಹಿಸಿದ್ದರು. ತರಬೇತುದಾರರ ಮಾರ್ಗದರ್ಶನ ಮತ್ತು ನಿರಂತರ ಪ್ರಯತ್ನದ ಫಲವಾಗಿ ಸುನೀತಾ ಇದೀಗ ಸಾಧನೆಯ ಶಿಖರವೇರಿದ್ದಾಳೆ. ‘ಸುನೀತಾ ರಾಷ್ಟ್ರಮಟ್ಟದ ಕ್ರೀಡಾಪಟು. ದೃಷ್ಟಿದೋಷವುಳ್ಳ ರಾಷ್ಟ್ರಮಟ್ಟದ ಮಹಿಳಾ ಕ್ರೀಡಾಕೂಟಗಳಲ್ಲಿ ಆಕೆ ಎರಡು ವರ್ಷಗಳಿಂದ ಸ್ಪರ್ಧಿಸುತ್ತಿದ್ದಾಳೆ. ಒಮ್ಮೆ ರಾಜ್ಯ ತಂಡದ ಉಪ ನಾಯಕಿಯಾಗಿಯೂ ಆಗಿದ್ದಳು. ಸಮರ್ಥನಂ ಸಂಸ್ಥೆಯಿಂದ 2019ರಲ್ಲಿ ಮೈಸೂರಿನಿಂದ ಬೆಂಗಳೂರಿನವರೆಗೆ ಆಯೋಜಿಸಿದ್ದ ಮ್ಯಾರಾಥಾನ್‌ನಲ್ಲಿ ಭಾಗವಹಿಸಿ ಗಮನ ಸೆಳೆದಿದ್ದಳು’ ಎನ್ನುತ್ತಾರೆ ಅರುಣಕುಮಾರ ಎಂ.ಜಿ.

    ತಂದೆ-ತಾಯಿ ಕೃಷಿ ಕೆಲಸ ಮಾಡುತ್ತಾರೆ. ಪ್ರಾಥಮಿಕ ಶಿಕ್ಷಣ ಊರಲ್ಲೇ ಮುಗಿಸಿದ್ದೇನೆ. ರಾಷ್ಟ್ರೀಯ ವಾಲ್ ಕ್ಲೈಂಬಿಂಗ್ ಸ್ಪರ್ಧೆಯಲ್ಲಿ 2018ರಲ್ಲಿ ಜಮ್ಮುವಿನಲ್ಲಿ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕ ಗಳಿಸಿದ್ದೆ. ಕ್ರೀಡೆಯಲ್ಲಿ ಭಾರತಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಆಸೆ ಇತ್ತು. ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕರೆ ಚಿನ್ನದ ಪದಕ ಗೆಲ್ಲುವ ಗುರಿ ಇದೆ. ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಗೆದ್ದು ರಾಷ್ಟ್ರಗೀತೆ ಮೊಳಗುವಂತೆ ಮಾಡಬೇಕು ಎಂಬ ಹೆಬ್ಬಯಕೆ ಇದೆ. ಆ ನಿಟ್ಟಿನಲ್ಲಿ ಸಿದ್ಧತೆ ನಡೆಸಿದ್ದೇನೆ.
    | ಸುನೀತಾ ದುಂಡಪ್ಪನವರ, ಕಂಚಿನ ಪದಕ ವಿಜೇತೆ (ಪ್ಯಾರಾ ಕ್ಲೈಂಬಿಂಗ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts