More

    ಪೌಷ್ಟಿಕ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ

    ಬೇಲೂರು: ಆರೋಗ್ಯವಂತ ದೇಶ ನಿರ್ಮಿಸ ಬೇಕೆಂದರೆ ಪ್ರತಿಯೊಬ್ಬರೂ ಪೌಷ್ಟಿಕ ಆಹಾರ ಸೇವಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ಪ್ರಕಾಶ್ ನಾಯಕ್ ಹೇಳಿದರು.

    ಪಟ್ಟಣದ ಶ್ರೀ ಚನ್ನಕೇಶವಸ್ವಾಮಿ ದಾಸೋಹ ಭವನದಲ್ಲಿ ಗುರುವಾರ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಪೌಷ್ಟಿಕತೆ ಎಂಬುದು ಇಂದು ಜಾಗತಿಕ ಸಮಸ್ಯೆಯಾಗಿದೆ. ನಾವು ಸೇವಿಸುವ ಆಹಾರದಲ್ಲಿ ಸೂಕ್ತ ಪ್ರಮಾಣದಲ್ಲಿ ಪೋಷಕಾಂಶ ಇಲ್ಲದಿದ್ದಲ್ಲಿ ದೇಹದ ಬೆಳವಣಿಗೆಗೆ ಪೋಷಣೆ ಸಿಗುವುದಿಲ್ಲ. ಇದರಿಂದ ಅಪೌಷ್ಟಿಕತೆ ಸಮಸ್ಯೆ ತಲೆದೋರುತ್ತದೆ. ಇದರಿಂದಾಗಿ ತಾಯಂದಿರು ಹಾಗೂ ಮಕ್ಕಳಲ್ಲಿ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಅಪೌಷ್ಟಿಕತೆಯಿಂದಾಗಿ ಮಕ್ಕಳು ಸಾವಿಗೀಡಾಗುವ ಸಾಧ್ಯತೆ ದಟ್ಟವಾಗಿದೆ. 5 ವರ್ಷದೊಳಗಿನ ಮಕ್ಕಳ ಸಾವಿಗೆ ಅಪೌಷ್ಟಿಕತೆ ಮೂಲ ಕಾರಣವಾಗಿದೆ. ಇದಕ್ಕೆ ಇತ್ತೀಚಿನ ದುಶ್ಚಟಗಳು ಕೂಡ ಪ್ರಮುಖ ಕಾರಣವಾಗಿದೆ. ಈ ನಿಟ್ಟಿನಲ್ಲಿ ಮಹಿಳೆಯರು ಹೆಚ್ಚು ಗಮನ ಹರಿಸಬೇಕು ಎಂದರು.

    ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ, ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಪ್ರಸನ್ನಕುಮಾರ್ ಮಾತನಾಡಿ, ದೇಶವನ್ನು ಕಾಡುತ್ತಿರುವ ಬಹು ದೊಡ್ಡ ಆರೋಗ್ಯ ಸಮಸ್ಯೆಯೇ ಅಪೌಷ್ಟಿಕತೆ. ಇತ್ತೀಚೆಗೆ ಬಿಡುಗಡೆಯಾದ ವರದಿ ಪ್ರಕಾರ ಭಾರತದಲ್ಲಿ 5 ವರ್ಷದೊಳಗಿನ ಶೇ. 68 ರಷ್ಟು ಮಕ್ಕಳು ಮೃತರಾಗುತ್ತಿದ್ದಾರೆ. ಇದರೊಂದಿಗೆ ತಾಯಂದಿರು ಸಹ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ನಾವು ಸೇವಿಸುವ ಆಹಾರ ಪೌಷ್ಟಿಕತೆಯಿಂದ ಕೂಡಿದ್ದರೆ ಮಾತ್ರ ಆರೋಗ್ಯವಾಗಿರಲು ಸಾಧ್ಯ. ಇತ್ತೀಚಿನ ಪಾಸ್ಟ್‌ಫುಡ್ ಹಾಗೂ ಜೀವನ ಶೈಲಿಯಿಂದ ಮನುಷ್ಯನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಆದರೂ ಯಾರೂ ಅಧುನಿಕ ಕಾಯಿಲೆಗಳಿಗೆ ಮುನ್ನೆಚ್ಚರಿಕೆ ವಹಿಸದಿರುವುದು ವಿಪರ್ಯಾಸ ಎಂದರು.

    ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಉಮೇಶ್, ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯ್, ಆರಕ್ಷಕ ನಿರೀಕ್ಷಕ ರವಿಕಿರಣ್, ವಕೀಲರ ಸಂಘ ಅಧ್ಯಕ್ಷ ಪೃಥ್ವಿ, ಉಪಾಧ್ಯಕ್ಷ ದಿಲೀಪ್, ಕಾರ್ಯದರ್ಶಿ ಪುಟ್ಟಸ್ವಾಮಿಗೌಡ ಸೇರಿದಂತೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts