More

    ಪೊಲೀಸ್ ಅಧಿಕಾರಿಗಳ ಸಭೆ ಇಂದು

    ಹಾವೇರಿ: ದೇಶವಿರೋಧಿ ಕೃತ್ಯದ ಎಲ್ಲ ಬೆಳವಣಿಗೆಗಳ ಕುರಿತು ಆಯಾ ಸಂಘಟನೆಯ ಶಕ್ತಿ, ಫೇಸ್​ಬುಕ್, ವಾಟ್ಸ್​ಆಪ್​ನಲ್ಲಿ ಎಲ್ಲ ಸಂದೇಶಗಳನ್ನು ಪರಿಶೀಲಿಸಲಾಗುತ್ತಿದೆ. ಇದರ ಕುರಿತು ರ್ಚಚಿಸಲು ಭಾನುವಾರ ಉನ್ನತ ಪೊಲೀಸ್ ಅಧಿಕಾರಿಗಳ ಸಭೆ ಕರೆಯಲಾಗಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಪಟ್ಟಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯಾಸಂಸ್ಥೆಗಳು, ಹಾಸ್ಟೆಲ್​ಗಳಲ್ಲಿ ಈ ರೀತಿಯ ಚಟುವಟಿಕೆ ನಡೆದರೆ ಕೂಡಲೆ ಮಾಹಿತಿ ನೀಡಬೇಕು. ಮಾಹಿತಿಯಿದ್ದೂ ಸುಮ್ಮನಿದ್ದರೆ ಅವರ ಮೇಲೂ ಕ್ರಮ ಕೈಗೊಳ್ಳುವುದು ಎಂದರು.

    ಅಮೆರಿಕ ಮೂಲಕ ಇಂಟರ್​ನೆಟ್ ಕಂಪನಿ ಫೇಸ್​ಬುಕ್, ವಾಟ್ಸ್​ಆಪ್​ನಲ್ಲಿ ಭಾರತದ ವಿರುದ್ಧ ನಿರಂತರವಾಗಿ ಪೋಸ್ಟ್ ಮಾಡುತ್ತಿರುವುದು ಕಂಡುಬಂದಿದೆ. ಇದನ್ನು ತಡೆಯಲು ಅವರು ಪ್ರಯತ್ನ ಮಾಡುತ್ತಿಲ್ಲ. ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು, ಕೇಂದ್ರ ಸರ್ಕಾರದ ಜೊತೆ ಮಾತನಾಡುತ್ತೇವೆ. ದೇಶದ್ರೋಹದ ಪೋಸ್ಟ್​ಗೆ ಅವಕಾಶ ಮಾಡದೇ, ನಿರ್ಬಂಧ ಹೇರಬೇಕು. ಇದನ್ನು ಸೈಬರ್​ಕ್ರೖೆಂ ನಡಿಯಲಿ ತಂದು ಕ್ರಮ ಕೈಗೊಳ್ಳಲು ಚಿಂತನೆ ನಡೆಸುತ್ತಿದ್ದೇವೆ ಎಂದರು.

    ಸಿಎಎ ವಿರುದ್ಧ ಪ್ರತಿಭಟನೆಗೆ ಅಂತಾರಾಷ್ಟ್ರೀಯ ಹಣ ವಿನಿಯೋಗ ವಿಚಾರದ ಕುರಿತು ಈಗಾಗಲೇ ಇಡಿ ತನಿಖೆ ನಡೆಯುತ್ತಿದೆ. ಕೆಲ ಬ್ಯಾಂಕ್ ಖಾತೆಗಳಿಗೆ ನೂರಾರು ಕೋಟಿ ರೂ.ಗಳ ಹಣ ವರ್ಗಾವಣೆಯೂ ಆಗಿದೆ. ವಿದೇಶದಿಂದಲೂ ಹಣ ಬಂದಿದೆ ಎಂದರು.

    ಹುಬ್ಬಳ್ಳಿ ಪ್ರಕರಣ ಬೆಳಗಾವಿಗೆ ವರ್ಗಾವಣೆ
    ಹುಬ್ಬಳ್ಳಿಯಲ್ಲಿ ನಡೆದ ದೇಶದ್ರೋಹ ಪ್ರಕರಣವನ್ನು ಬೆಳಗಾವಿಗೆ ವರ್ಗಾಯಿಸಲಾಗಿದೆ. ಅಲ್ಲಿಯ ಐಜಿ ಎಲ್ಲವನ್ನೂ ನೋಡುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ಯಾವ ವಕೀಲರೂ ಅವರ ಪರವಾಗಿ ವಾದ ಮಂಡನೆಗೆ ಮುಂದಾಗುವುದಿಲ್ಲ ಎಂದಿದ್ದಾರೆ. ಬೆಂಗಳೂರಿನ ಕೆಲ ವಕೀಲರು ಅವರ ಪರವಾಗಿ ಹಾಜರಾಗುತ್ತೇವೆ, ನಮಗೆ ರಕ್ಷಣೆ ಕೊಡಿ ಎಂದು ಹೈಕೋರ್ಟ್ ಮೊರೆ ಹೋಗಿದ್ದಾರೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಅಪ್ಜಲ್ ಗುರುವನ್ನು ನೇಣಿಗೇರಿಸಿದ ನಂತರ ಅದರ ವಿರುದ್ಧವೂ ದೇಶದ್ರೋಹಿಗಳು ಧ್ವನಿ ಎತ್ತಿದರು. ಆಗ ಅವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾದಾಗ ಅವರ ಪರವಾಗಿ ಹಲವು ಸಂಘಟನೆಗಳು ಬೆಂಬಲ ನೀಡಿದವು. ಅಂಥವರೇ ಈಗ ಸಿಎಎ ನೆಪದಲ್ಲಿ ಈ ರೀತಿ ಗಲಭೆ ಸೃಷ್ಟಿಸುತ್ತಿದ್ದಾರೆ ಎಂದರು.

    ಸಿಎಎ ಭಾರತದ ಯಾವ ಅಲ್ಪಸಂಖ್ಯಾತರರ ಪೌರತ್ವವನ್ನೂ ಕಿತ್ತುಕೊಳ್ಳುವುದಿಲ್ಲ. ಯಾರೂ ದಾಖಲೆ ಕೊಡುವ ಪ್ರಶ್ನೆಯೇ ಇಲ್ಲ. ಸಮಾಜದಲ್ಲಿ ಕ್ಷೋಭೆ ಉಂಟು ಮಾಡುವ ವಿರೋಧ ಪಕ್ಷಗಳ ಜೊತೆಯಲ್ಲಿ ಇವರು ಸೇರಿಕೊಂಡಿದ್ದಾರೆ. ಇದನ್ನು ಬೇರು ಸಮೇತ ಕಿತ್ತೊಗೆಯುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts