More

    ಪೊನ್ನಂಪೇಟೆ ಪಂಚಾಯಿತಿಗೆ ಉತ್ತರ ಪ್ರದೇಶದ ತಂಡ ಭೇಟಿ


    ಕೊಡಗು : ಉತ್ತರ ಪ್ರದೇಶದ ಪಂಚಾಯತ್‌ರಾಜ್ ಸಂಸ್ಥೆಗಳ 30 ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ರಾಜ್ಯಕ್ಕೆ ಅಧ್ಯಯನ ಪ್ರವಾಸಕ್ಕಾಗಿ ಆಗಮಿಸಿದ್ದು, ಸ್ವಚ್ಛತೆ, ನಿರ್ವಹಣೆಯಲ್ಲಿ ರಾಜ್ಯ ಪ್ರಶಸ್ತಿ ಪಡೆದ ಪೊನ್ನಂಪೇಟೆ ಪಂಚಾಯಿತಿಗೆ ತಂಡ ಗುರುವಾರ ಭೇಟಿ ನೀಡಿತ್ತು.


    ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಿರಿಜಾ ವೆಂಕಟೇಶ್, ಉಪಾಧ್ಯಕ್ಷ ಬೊಟ್ಟಂಗಡ ದಶಮಿ ಹಾಗೂ ಸದಸ್ಯರು ಸ್ವಾಗತ ಕೋರಿದರು.


    ಉ.ಪ.್ರ. ತಂಡದ ಹಿರಿಯ ಅಧಿಕಾರಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಬಳಿ ಇರುವ ಮಹಾತ್ಮ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಪುಷ್ಪ ನಮನ ಸಲ್ಲಿಸಿದರು.


    ಸಂಜೀವಿನಿ ಒಕ್ಕೂಟ ಮಾರಾಟ ಮಳಿಗೆಗೆ ಭೇಟಿ ನೀಡಿ, ಮಹಿಳಾ ಸಬಲೀಕರಣಕ್ಕೆ ಕರ್ನಾಟಕ ಸರ್ಕಾರ ಕೈಗೊಂಡಿರುವ ಯೋಜನೆ ವಿವರಗಳ ಮಾಹಿತಿಯನ್ನು ಸ್ತ್ರೀ ಶಕ್ತಿ ಒಕ್ಕೂಟದ ತಾಲೂಕು ಅಧ್ಯಕ್ಷೆ ರಜನಿ ಅವರಿಂದ ಪಡೆದರು. ಮಹಿಳೆಯರು ತಾವು ತಯಾರಿಸಿದ ಪೇಪರ್ ಬ್ಯಾಗ್, ಕರಕುಶಲ ವಸ್ತುಗಳು ಹಾಗೂ ಇಲ್ಲಿನ ತಿಂಡಿ, ತಿನಿಸುಗಳು ಗಮನ ಸೆಳೆದವು.


    ತಂಡದ ಸದಸ್ಯರು ಕಚೇರಿಯಲ್ಲಿನ ಸೇವೆಗಳ ಕುರಿತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪುಟ್ಟರಾಜ್ ಅವರಿಂದ ಮಾಹಿತಿ ಪಡೆದರು. ಬಾಪೂಜಿ ಸೇವಾ ಕೇಂದ್ರ, ನಾಗರಿಕರಿಗೆ ನೀಡುವ ಸೇವೆ, ಅಧ್ಯಕ್ಷರ, ಅಭಿವೃದ್ಧಿ ಅಧಿಕಾರಿಗಳ ಕೊಠಡಿ ಸೇವೆಯ ಬಗ್ಗೆ ವಿವರ ನೀಡಿದರು.


    ರಾಜ್ಯದಲ್ಲಿಯೇ ಗಮನ ಸೆಳೆದಿರುವ ಸಭಾಂಗಣಕ್ಕೆ ಉತ್ತರ ಪ್ರದೇಶದ ತಂಡವು ಆಗಮಿಸುತ್ತಿದ್ದಂತೆಯೇ ಇಲ್ಲಿನ ವ್ಯವಸ್ಥೆಯನ್ನು ಕಂಡು ಆಡಳಿತ ಮಂಡಳಿಗೆ ಪ್ರಶಂಸೆ ವ್ಯಕ್ತಪಡಿಸಿದರು. ಕೊಡಗಿನ ಸಾಂಪ್ರದಾಯಿಕ ತಿಂಡಿ, ತಿನಿಸುಗಳನ್ನು ತಂಡಕ್ಕೆ ಪರಿಚಯಿಸಲಾಯಿತು.


    ತಂಡವು ಸ್ವಂತ ಮೂಲ ಆದಾಯ ನಿರ್ವಹಣೆ ಬಗ್ಗೆ ಸಂವಾದ ಮತ್ತು ಕ್ಷೇತ್ರ ಭೇಟಿ ನಡೆಸಿತು. ಘನತ್ಯಾಜ್ಯ ನಿರ್ವಹಣೆ ಬಗ್ಗೆಯೂ ಮಾಹಿತಿ ಸಂಗ್ರಹಿಸಿತು. ರಾಜ್ಯ ಸರ್ಕಾರದ ಸಂಯೋಜಕರಾದ ಡಾ.ಬಿ.ಜೆ.ಶಶಿಕುಮಾರ್ ಹಾಗೂ ಡಾ.ಬಿ.ಎಂ.ಶಿವಪ್ರಸಾದ್ ಕಾರ್ಯನಿರ್ವಹಣೆ ನಡೆಸಿದರು.


    ರಾಜ್ಯದ ಪಂಚಾಯತ್‌ರಾಜ್ ವ್ಯವಸ್ಥೆ, ಸಂಸ್ಥೆಗಳ ಯೋಜನೆ ಮತ್ತು ಮೇಲ್ವಿಚಾರಣೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಯಕ್ರಮ ಮತ್ತು ಯೋಜನೆಗಳ ಅನುಷ್ಠಾನ. ವಿನೂತನ ಚಟುವಟಿಕೆಗಳ ಬಗ್ಗೆ ತಿಳಿದುಕೊಳ್ಳುವ ಮತ್ತು ಸೂಕ್ತವಾದವುಗಳನ್ನು ಅನುಕರಣೆ ಮಾಡುವ ಉದ್ದೇಶದಿಂದ ಈ ತಂಡ ಆಗಮಿಸಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts