More

    ಪೂರ್ವ ಕ್ಷೇತ್ರದಲ್ಲಿ ಅಪೂರ್ಣ ಕಾಮಗಾರಿ, ಶಾಸಕರ ವಿರುದ್ಧ ಬಿಜೆಪಿ ಆಕ್ರೋಶ

    ಹುಬ್ಬಳ್ಳಿ: ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ಹಲವು ಕಾಮಗಾರಿಗಳು 10 ವರ್ಷದಿಂದ ಅಪೂರ್ಣಗೊಂಡು ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿವೆ. ಇವುಗಳ ಬಗ್ಗೆ ಶಾಸಕ ಪ್ರಸಾದ ಅಬ್ಬಯ್ಯ ಅವರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಬಿಜೆಪಿ ಪೂರ್ವ ಕ್ಷೇತ್ರದ ಅಧ್ಯಕ್ಷ ಪ್ರಭು ನವಲಗುಂದಮಠ ಆರೋಪಿಸಿದರು.

    ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2011-12ರಲ್ಲಿ ಭೂಮಿಪೂಜೆಗೊಂಡ ಪಡದಯ್ಯನ ಹಕ್ಕಲ ಹತ್ತಿರದ ಡಾ. ಬಾಬು ಜಗಜೀವನ್​ರಾಮ್ ಜಿಲ್ಲಾ ಬೃಹತ್ ಭವನ ದಶಕ ಕಳೆದರೂ ಪೂರ್ಣಗೊಂಡಿಲ್ಲ. ಶೋಷಿತ ಸಮಾಜಕ್ಕೆ ಇಂದಿಗೂ ಸಮರ್ಪಿತವಾಗಿಲ್ಲ. ಮಂಜೂರಾದ ಹಣ ಏನಾಯಿತು? ಇದಕ್ಕೆ ಹೊಣೆ ಯಾರು? ಎಂದು ಪ್ರಶ್ನಿಸಿದರು.

    ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರು ಸೂಚಿಸಿದರೂ ಕ್ಷೇತ್ರದ ಶಾಸಕರು ಈ ಕೆಲಸಗಳ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ದೂರಿದರು.

    ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಮಾತನಾಡಿ, ಹುಬ್ಬಳ್ಳಿಯ ಸಿಬಿಟಿಯನ್ನು ಬೆಂಗಳೂರಿನ ಶಿವಾಜಿನಗರ ಬಸ್ ನಿಲ್ದಾಣ ಮಾದರಿಯಲ್ಲಿ ನಿರ್ವಿುಸುವ ಉದ್ದೇಶ ಇತ್ತು. ಮೂಲ ಸ್ವರೂಪ ಕಡೆಗಣಿಸಿ ನಿರ್ವಿುಸಲಾಗಿದೆ. ಈಗ ಅದು ಉಪಯೋಗಕ್ಕೆ ಬರದಂತಾಗಿದೆ. ವಾರ್ಡ್ ನಂ. 72ರಲ್ಲಿ ಸಾರ್ವಜನಿಕ ಆಸ್ಪತ್ರೆಯನ್ನು ಕೆಡವಿ 7 ವರ್ಷ ಕಳೆದಿದೆ. ಪುನರ್ ನಿರ್ಮಾಣ ಆಗಿಲ್ಲ. ಬಡ ರೋಗಿಗಳು ಪರದಾಡುತ್ತಿದ್ದಾರೆ. ಇದರಲ್ಲಿ ಶಾಸಕ ಅಬ್ಬಯ್ಯ, ಗುತ್ತಿಗೆದಾರರ ನಿರ್ಲಕ್ಷ್ಯ ಎದ್ದು ಕಾಣುತ್ತದೆ ಎಂದರು.

    ವಾರ್ಡ್ ನಂ. 68, 72ರಲ್ಲಿ ರಸ್ತೆ ಸರಿಯಾಗಿಲ್ಲದೇ ಧೂಳು ಆವರಿಸಿದೆ. ಸಮರ್ಪಕ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ ಕ್ಷೇತ್ರದಲ್ಲಿ ಕಾಣುವುದಿಲ್ಲ. ಈ ಎಲ್ಲ ಸಮಸ್ಯೆಗಳನ್ನು ಬಗೆ ಹರಿಸಲು 10 ದಿನಗಳ ಗಡುವು ನೀಡಲಾಗುವುದು. ಇಲ್ಲದಿದ್ದರೆ ಸತ್ಯಾಗ್ರಹ ಅನಿವಾರ್ಯವಾಗಲಿದೆ ಎಂದು ತಿಳಿಸಿದರು.

    ಮುಖಂಡರಾದ ಬಸವರಾಜ ಅಮ್ಮಿನಬಾವಿ, ಚಂದ್ರಶೇಖರ ಗೋಕಾಕ, ಸಂತೋಷ ಅರಕೇರಿ, ಲಕ್ಷ್ಮೀಕಾಂತ ಘೋಡಕೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts