More

    ಪೂರ್ವಭಾವಿ ಸಭೆಯಲ್ಲಿ ಸಚಿವ ರಾಜಣ್ಣ ವಿರುದ್ಧ ಶ್ರೀಧರ್‌ಗೌಡ ಬೆಂಬಲಿಗರ ಆಕ್ರೋಶ

    ಹಾಸನ: ಮಾ.30ರಂದು ಹಾಸನ ಜಿಲ್ಲೆಗೆ ಸಿಎಂ ಸಿದ್ದರಾಮಯ್ಯ ಆಗಮನ ಹಿನ್ನಲೆಯಲ್ಲಿ ಬುಧವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ನೇತೃತ್ವದಲ್ಲಿ ನಡೆಯುತ್ತಿದ್ದ ಪೂರ್ವಭಾವಿ ಸಭೆಯಲ್ಲಿ ಕೈ ಕಾರ್ಯಕರ್ತರ ನಡುವೆ ಗಲಾಟೆ ನಡೆದು, ತಳ್ಳಾಟ, ನೂಕಾಟ ನಡೆದಿದೆ. ಕೆಲ ಕುರ್ಚಿಗಳು ಪೀಸ್ ಪೀಸ್ ಆಗಿವೆ. ಕಾರ್ಯಕರ್ತರ ಗಲಾಟೆ ಕಂಡು ಸಚಿವ ಕೆ.ಎನ್. ರಾಜಣ್ಣ ಅರ್ಧಕ್ಕೆ ಭಾಷಣ ನಿಲ್ಲಿಸಿ ಸುಮ್ಮನೆ ಕುಳಿತುಕೊಂಡರು. ಹೊಸದಾಗಿ ಜಿಲ್ಲೆಗೆ ಬಂದಿದ್ದ ಚುನಾವಣಾ ಉಸ್ತುವಾರಿ ಸಂಸದ ಚಂದ್ರಶೇಖರ್ ಇವರ ಗಲಾಟೆಗೆ ಸಾಕ್ಷಿಯಾಗಿದ್ದರು.
    ಸಹಕಾರ ಸಚಿವ ಕೆ.ಎನ್. ರಾಜಣ್ಣ, ಸಭೆಯಲ್ಲಿ ಮೊದಲು ಭಾಷಣ ಮಾಡಲು ಆರಂಭಿಸಿದರು. ತಮ್ಮ ಭಾಷಣದ ವೇಳೆ ಈ ಬಾರಿ ಅರಕಲಗೂಡಿನಲ್ಲಿ 30 ಸಾವಿರ ಲೀಡ್ ಕೊಡುತ್ತೇವೆ ಎಂದಿದ್ದ ಅರಕಲಗೂಡು ವಿಧಾನಸಭಾ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಶ್ರೀಧರ್ ಗೌಡ ಹೇಳಿಕೆಯನ್ನು ಉಲ್ಲೇಖಿಸಿ ರಾಜಣ್ಣ, 30 ಸಾವಿರ ಲೀಡ್ ಕೋಡೋನು ಯಾಕಪ್ಪ ಮೂರನೇ ಸ್ಥಾನಕ್ಕೆ ಹೋದೆ ಎಂದು ವ್ಯಂಗ್ಯವಾಗಿ ಹೇಳಿದರು.
    ಈ ಹೇಳಿಕೆಗೆ ಶ್ರೀಧರ್ ಗೌಡ ಅವರ ಬೆಂಬಲಿಗರು ಕೆ.ಎನ್. ರಾಜಣ್ಣ ಭಾಷಣಕ್ಕೆ ಅಡ್ಡಿಪಡಿಸಿ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಗರಂ ಆದ ಸಚಿವ ಕೆ.ಎನ್.ರಾಜಣ್ಣ, ನೀವು ಶ್ರೇಯಸ್ ಪಟೇಲ್ ಗೆಲ್ಲಿಸಲು ಬಂದಿದ್ದೀರಾ? ಅಥವಾ ಸೋಲಿಸಲು ಬಂದ್ದಿದ್ದೀರಾ? ನಿಮ್ಮ ನಡವಳಿಕೆ ಶ್ರೀಧರ್‌ಗೌಡ ಅವರ ರಾಜಕೀಯ ಭವಿಷ್ಯಕ್ಕೆ ಮಾರಕವಾಗಲಿದೆ ಎಂದು ಹೇಳಿದರು.
    ರಾಜಣ್ಣ ಮಾತನಾಡುತ್ತಿದ್ದರು ಕಾರ್ಯಕರ್ತರು ಸುಮ್ಮನಾಗಲಿಲ್ಲ. ಇದರಿಂದ ಮತ್ತಷ್ಟು ಕೆರಳಿದ ರಾಜಣ್ಣ, ಕೆಲ ಕಾಂಗ್ರೆಸ್ ಕಾರ್ಯಕರ್ತರು ಬಾಡಿಗೆ ಗಿರಾಕಿಗಳು ಎಂದು ಜರಿದರು. ಆಗ ಮತ್ತೆ ರಾಜಣ್ಣ ವಿರುದ್ಧ ಆಕ್ರೋಶ ಹೊರಹಾಕಿದ ಕಾಂಗ್ರೆಸ್ ಕಾರ್ಯಕರ್ತರು ಸಚಿವರ ಭಾಷಣಕ್ಕೆ ಅಡ್ಡಿಪಡಿಸಿದರು.
    ಸಚಿವರ ಭಾಷಣಕ್ಕೆ ಅಡ್ಡಿಪಡಿಸಿದ್ದಕ್ಕೆ ಕಾರ್ಯಕರ್ತರ ಮೇಲೆ ವೇದಿಕೆ ಮೇಲಿದ್ದ ಕಾಂಗ್ರೆಸ್ ನಾಯಕರು ಮುಗಿಬಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋದರು. ಆಗ ಕೆ.ಎನ್. ರಾಜಣ್ಣ ಭಾಷಣ ನಿಲ್ಲಿಸಿ ಸಿಟ್ಟಿನಿಂದ ವೇದಿಕೆ ಮೇಲೆ ಹೋಗಿ ಕುಳಿತುಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts