More

    ಪುಸ್ತಕ ಭಂಡಾರಕ್ಕೆ ಸೌಲಭ್ಯಗಳ ಬರ

    ಆನಂದ ಮತ್ತಿಗಟ್ಟಿ ಸವಣೂರ

    ಸಾವಿರಾರು ಪುಸ್ತಕ ಭಂಡಾರ ಇರುವ ಪಟ್ಟಣದ ಸಾರ್ವಜನಿಕ ಕೇಂದ್ರ ಗ್ರಂಥಾಲಯವು ಮೂಲಸೌಲಭ್ಯ ಹಾಗೂ ನಿರ್ವಹಣೆ ಕೊರತೆಯಿಂದ ಬಳಲುತ್ತಿದೆ.

    ಸ್ವಂತ ಕಟ್ಟಡ ಹೊಂದುವ ಮೂಲಕ ವಿಶೇಷವಾಗಿ ಗುರುತಿಸಿಕೊಂಡಿದ್ದ ಪಟ್ಟಣದ ಉಪವಿಭಾಗಾಧಿಕಾರಿ ಕಚೇರಿ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ವಿ.ಕೃ. ಗೋಕಾಕ ಸಾಂಸ್ಕೃತಿಕ ಭವನದ ಪಕ್ಕದಲ್ಲಿರುವ ಗ್ರಂಥಾಲಯದ ಇಂದು ನಿರ್ಲಕ್ಷ್ಯ್ಕೊಳಗಾಗಿದೆ.

    ವಿವಿಧ ಗ್ರಂಥ, ಕಾದಂಬರಿಗಳು, ಸಾಹಿತಿಗಳ ಕೃತಿಗಳು ಸೇರಿ ಸುಮಾರು 16926 ಪುಸ್ತಕ ಭಂಡಾರವಿದೆ. ಇಂತಹ ಗ್ರಂಥಾಲಯದ ಕಟ್ಟಡ ನಿರಂತರ ಮಳೆಗೆ ಸೋರುತ್ತಿದ್ದು, ಇದರಿಂದ ಪುಸ್ತಕಗಳು ತೋಯ್ದು ಹಾಳಾಗುತ್ತಿವೆ. ಓದುವ ಆಸಕ್ತಿಯಿಂದ ಬರುವವರಿಗೆ ಕುಳಿತುಕೊಳ್ಳಲು ಸೂಕ್ತ ಆಸನ, ಶೌಚಗೃಹದ ವ್ಯವಸ್ಥೆ ಇಲ್ಲ. ಕಟ್ಟಡ ಸಂಪೂರ್ಣ ತಂಪು ಹಿಡಿದ ಕಾರಣ ಗಬ್ಬುನಾಥ ಹರಡುತ್ತಿದ್ದು, ಓದುಗರು ಕುಳಿತುಕೊಳ್ಳಲು ಸಂಕಟಪಡುವಂತಾಗಿದೆ.

    ಬೆಳಗ್ಗೆ 8.30 ರಿಂದ 11.30ರವರೆಗೆ ಹಾಗೂ ಸಂಜೆ 4ರಿಂದ ರಾತ್ರಿ 8 ಗಂಟೆಯವರಿಗೆ ಕಾರ್ಯನಿರ್ವಹಿಸಬೇಕು. ಆದರೆ, ಗ್ರಂಥಾಲಯ ಗ್ರಂಥಾಲಯ ಸಹವರ್ತಿ, ತಮ್ಮ ಮನಸೋ ಇಚ್ಛೆ ಬಾಗಿಲು ತೆಗೆಯುತ್ತಾರೆ. ಗ್ರಂಥಾಲಯದ ಬೀಗದ ಕೈ ಗ್ರಂಥಾಲಯ ಸಹವರ್ತಿಯ ಆಪ್ತ ಓದುಗರ ಕೈಯಲ್ಲಿ ಇರುತ್ತದೆ. ಅವರು ಆಗಮಿಸಿದರೆ, ಮಾತ್ರ ಓದಲು ಅವಕಾಶ ದೊರೆಯುತ್ತದೆ ಎಂಬುದು ಓದುಗರ ಆರೋಪವಾಗಿದೆ.

    ಕಟ್ಟಡ ದುರಸ್ತಿ ಹಾಗೂ ಸಿಬ್ಬಂದಿ ಕೊರತೆ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ಇಲಾಖೆ ಮೇಲಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನ ಕಂಡುಬರುತ್ತಿಲ್ಲ. ಸರ್ಕಾರ ನೀಡುವ ಕನಿಷ್ಠ ಸೌಲಭ್ಯ ಇಲ್ಲಿ ದೊರೆಯುತ್ತಿಲ್ಲ. ಹೀಗಾಗಿ, ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರ ಓದಿಗೆ ಪೋ›ತ್ಸಾಹದ ಬದಲಾಗಿ ಕಿರಿಕಿರಿ ಉಂಟಾಗುತ್ತಿದೆ.

    ಇನ್ನಾದರೂ, ಗ್ರಂಥಾಲಯದಲ್ಲಿ ನೀರು, ಬೆಳಕು, ಸ್ಪರ್ಧಾತ್ಮಕ ಪುಸ್ತಕಗಳ ಲಭ್ಯತೆ ಸೇರಿದಂತೆ ಮೂಲಸೌಲಭ್ಯ ಒದಗಿಸುವ ಮೂಲಕ ಉತ್ತಮ ಗ್ರಂಥ ಭಂಡಾರ ಉಳಿಸಿಕೊಳ್ಳಬೇಕು ಎಂದು ಓದುಗರು ಒತ್ತಾಯಿಸಿದ್ದಾರೆ.

    ಸವಣೂರಿನ ಸಾರ್ವಜನಿಕ ಗ್ರಂಥಾಲಯ ಕಟ್ಟಡ ಶಿಥಿಲಾವಸ್ಥೆ ತಲುಪಿದೆ. ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಜೀವಭಯದಲ್ಲಿ ಓದುವ ಪರಿಸ್ಥಿತಿ ಎದುರಾಗಿದೆ. ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಮನಹರಿಸಿ ಸೂಕ್ತ ಕ್ರಮಕ್ಕೆ ಮುಂದಾಗಬೇಕು.

    | ಶರಣಗೌಡ ಮುದಿಗೌಡ್ರ, ಓದುಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts