More

    ಪುನರ್ವಸತಿ ತಕ್ಷಣ ಆಗಲಿ

    ಶಿರಸಿ: ತಾಲೂಕಿನ ಕೊಡ್ನಗದ್ದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಾಜಿಗುಡ್ಡೆ ಭೂ ಕುಸಿತ ಪ್ರದೇಶಕ್ಕೆ ಸಂಬಂಧಿಸಿದಂತೆ ಇಲ್ಲಿನ ನಿವಾಸಿಗಳ ಪುನರ್ವಸತಿ ಕಾರ್ಯ ತಕ್ಷಣ ಆಗಬೇಕು. ಈ ಕುರಿತು ಸರ್ಕಾರ ನೀಡಬೇಕಾದ ಎಲ್ಲ ಆರ್ಥಿಕ ಸೌಲಭ್ಯ, ಒಪ್ಪಿಗೆ ಪತ್ರ, ಆದೇಶ ನೀಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಹಾಗೂ ಭೂ ಕುಸಿತ ಅಧ್ಯಯನ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಸೂಚನೆ ನೀಡಿದರು.

    ಶುಕ್ರವಾರ ಜಾಜಿಗುಡ್ಡೆ ಭೂ ಕುಸಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು, ಎರಡು ಕಿ.ಮೀ ಉದ್ದ ಬೆಟ್ಟ ಬಿರುಕು ಬಿಟ್ಟು ಬಾಯ್ದೆರದು ನಿಂತಿದೆ. ಗುಡ್ಡದ ಕೆಳಭಾಗದಲ್ಲಿ ಈಗಾಗಲೇ ಹತ್ತು ಸ್ಥಳಗಳಲ್ಲಿ ಭೂ ಕುಸಿತ ಆಗಿದೆ. ಜಾಜಿಗುಡ್ಡೆಯ ಮನೆಗಳು ಯಾವುದೇ ಕ್ಷಣದಲ್ಲಿ ನೆಲಸಮವಾಗುವ ತುರ್ತು ಪರಿಸ್ಥಿತಿ ಇದೆ. ಹಾಗಾಗಿ ಇಲ್ಲಿನ 9 ಕುಟುಂಬಗಳ 48 ಜನರು ಇಲ್ಲಿ ವಾಸ ಮಾಡದೆ, ಪುನರ್​ವಸತಿ ಆಗುವವರೆಗೆ ಪಕ್ಕದ ಹಳ್ಳಿಗಳಲ್ಲಿ, ಬಂಧುಗಳ ಮನೆಗಳಲ್ಲಿ ವಾಸ ಮಾಡುವಂತೆ ವಿನಂತಿಸಿದರು. ಜತೆ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಭೂಕುಸಿತ ಪ್ರದೇಶ ಭೇಟಿ ಬಗ್ಗೆ ಮಾಹಿತಿ ನೀಡಿದ ಅವರು, ಮಲೆನಾಡಿನ ಗುಡ್ಡದ ಬುಡದ ಹಳ್ಳಿಗಳ ಜನ ಭೂಕುಸಿತದ ಬಗ್ಗೆ ಬಹಳ ಮುನ್ನೆಚ್ಚರಿಕೆ ವಹಿಸಬೇಕು ಎಂದು ಒತ್ತಾಯ ಮಾಡಿದರು. ಜಾಜಿಗುಡ್ಡೆಯಿಂದ 1 ಕಿ.ಮೀ ದೂರದಲ್ಲಿ ಸಮತಟ್ಟು ಪ್ರದೇಶದಲ್ಲಿರುವ ಬೆಟ್ಟ ಭೂಮಿಯಲ್ಲಿ ಪುನರ್​ವಸತಿ ಕೈಗೊಳ್ಳಲು ಸ್ಥಳಿಕರು ಒಪ್ಪಿಗೆ ಸೂಚಿಸಿದರು.

    ಜಿಲ್ಲಾ ಭೂ ವಿಜ್ಞಾನ ಅಧಿಕಾರಿಗಳು ಸಮೀಕ್ಷೆ ನಂತರ ತಮ್ಮ ಅಭಿಪ್ರಾಯ ತಿಳಿಸಿ, ಗುಡ್ಡ ಸೀಳಿದ್ದು, ಮಳೆ ಬೀಳುತ್ತಲೇ ಇದೆ. ಹಾಗಾಗಿ ಜಲ ಒತ್ತಡದಿಂದ ಇಡೀ ಪರ್ವತ ಒತ್ತಿಕೊಂಡು ಕೆಳಗೆ ಬರಲಿದೆ ಎಂದು ಎಚ್ಚರಿಸಿದರು.

    ಒಂದು ವರ್ಷದ ಹಿಂದೇ ಭೂಕುಸಿತ ಉಂಟಾಗಿತ್ತು. ಪುನರ್​ವಸತಿಗೆ ಭೂಮಿಯನ್ನು ಸರ್ಕಾರ ನೀಡಿರಲಿಲ್ಲ. ಈಗ ಪುನಃ ಭೂಕುಸಿತ ಆಗುತ್ತಿದೆ. ಇದೀಗ ಪುನರ್​ವಸತಿ ಸ್ಥಳ ಅಂತಿಮವಾಗಲು ಸಮಯ ಬಂದಿದೆ ಎಂದು ಗ್ರಾಮದ ಮುಖಂಡ ಪಿ.ಜಿ.ಹೆಗಡೆ ಹೇಳಿದರು.

    ಈ ವೇಳೆ ಜಿಲ್ಲಾ ಪಂಚಾಯಿತಿ ಸದಸ್ಯ ಜಿ.ಎನ್.ಹೆಗಡೆ ಮುರೇಗಾರ್, ತಾಲೂಕು ಪಂಚಾಯಿತಿ ಸದಸ್ಯೆ ಯಶೋಧಾ, ಜಿಲ್ಲಾಗಣಿ- ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಸೋಮಶೇಖರ, ಅರಣ್ಯ ಅಧಿಕಾರಿ ಡಿ.ರಘು, ಬಸವರಾಜ್, ಉಪತಹಸೀಲ್ದಾರ್ ರಮೇಶ ಹಾಗೂ ಡಿ.ಆರ್. ಬೆಳ್ಳಿಮನೆ ಪಾಲ್ಗೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts