More

    ಪಿಲಿಕುಳ ಹಕ್ಕಿ ವಿಭಾಗಕ್ಕೆ ವಿಶೇಷ ನಿಗಾ

    ವೇಣುವಿನೋದ್ ಕೆ.ಎಸ್. ಮಂಗಳೂರು
    ಹಕ್ಕಿಜ್ವರ ಆತಂಕ ಹಿನ್ನೆಲೆಯಲ್ಲಿ ಹಲವು ಪ್ರಭೇದದ ಪಕ್ಷಿಗಳಿರುವ ಪಿಲಿಕುಳದ ವನ್ಯಜೀವಿಧಾಮದಲ್ಲೂ ಮುನ್ನೆಚ್ಚರಿಕೆ ಕ್ರಮ ಜಾರಿಗೊಳಿಸಲಾಗಿದೆ. ಹಕ್ಕಿಜ್ವರದ ವೈರಸ್ ಹರಡದಂತೆ ಪಿಲಿಕುಳ ಹಕ್ಕಿಗಳ ವಾಸಸ್ಥಳ(ಏವಿಯರಿ) ಸಹಿತ ಇಡೀ ಝೂನಲ್ಲಿ ಸೋಂಕು ನಿಯಂತ್ರಿಸುವಂತಹ ರಾಸಾಯನಿಕ ಸಿಂಪಡಣೆ ಮಾಡಲಾಗುತ್ತಿದೆ. ಈ ಮೂಲಕ ಪ್ರಾಣಿ-ಪಕ್ಷಿಗಳಿಗೆ ಸುರಕ್ಷತೆ ಕಲ್ಪಿಸಲಾಗಿದೆ.

    ಪ್ರಾಣಿ-ಪಕ್ಷಿಗಳ ಆವರಣದ ಹೊರಭಾಗದಲ್ಲಿ ಕೊಹ್ರಸೊಲಿನ್ ಟಿಎಚ್ ಎನ್ನುವ ಸೋಂಕು ನಿವಾರಕ ಸಿಂಪಡಣೆ ಮಾಡಲಾಗುತ್ತಿದ್ದು, ಆವರಣದೊಳಗೆ ಹಕ್ಕಿಗಳು ಮತ್ತು ಪ್ರಾಣಿಗಳಿಗೆ ತೊಂದರೆಯಾಗದ ಬಯೋಬಸ್ಟರ್ ಎಂಬ ಸೋಂಕು ನಿವಾರಕ ಬಳಸಲಾಗುತ್ತಿದೆ.

    ಸ್ಯಾನಿಟೈಸೇಶನ್: ನೆರೆಯ ಕೇರಳದಲ್ಲಿ ಹಕ್ಕಿಜ್ವರ ಹರಡಿರುವ ಹಿನ್ನೆಲೆಯಲ್ಲಿ ನಮ್ಮಲ್ಲೂ ಎಚ್ಚರಿಕೆ ವಹಿಸಲಾಗುತ್ತಿದೆ. ಹಲವು ವಿಧದ ಪಕ್ಷಿ-ಪ್ರಾಣಿಗಳು ನಮ್ಮಲ್ಲಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ನಾಲ್ಕು ದಿನದಿಂದ ಇಡೀ ಝೂನಲ್ಲಿ ಸ್ಯಾನಿಟೈಸೇಶನ್ ನಡೆಸಲಾಗುತ್ತಿದೆ ಎಂದು ಜೈವಿಕ ಉದ್ಯಾನವನ ನಿರ್ದೇಶಕ ಎಚ್.ಜೆ.ಭಂಡಾರಿ ‘ವಿಜಯವಾಣಿ’ಗೆ ತಿಳಿಸಿದರು. ಬುಡ್‌ಗೇರಿಗಾರ್, ಕೊಕಾಟಿಯಲ್, ಕೆರೋಲಿನ್, ಆಸ್ಟ್ರಿಚ್‌ನಂತಹ ವಿಭಿನ್ನ ತಳಿಯ ಹೊರದೇಶಗಳಿಂದ ತರಲಾದ ಹಕ್ಕಿಗಳ ಸಹಿತ ಸುಮಾರು 54 ಪ್ರಭೇದಗಳ 450 ಹಕ್ಕಿಗಳು ಪಿಲಿಕುಳ ವನ್ಯಜೀವಿಧಾಮದಲ್ಲಿ ಇವೆ, ಸಾವಿರಾರು ಪ್ರಾಣಿಗಳಿವೆ. ಪ್ರಾರಂಭದಲ್ಲಿ ಮೃಗಾಲಯವಷ್ಟೇ ಆಗಿದ್ದ ವನ್ಯಜೀವಿಧಾಮದಲ್ಲಿ ಕೆಲವರ್ಷಗಳ ಹಿಂದೆ ಪಕ್ಷಿಗಳ ವಿಭಾಗವನ್ನು ಪ್ರಾರಂಭಿಸಲಾಗಿದ್ದು, ಪ್ರವಾಸಿಗರ ಮೆಚ್ಚುಗೆಗೆ ಕಾರಣವಾಗಿದೆ.

    ಪ್ರವಾಸಿಗರಿಗೆ ಫುಟ್ ಡಿಪ್:  ಕೋವಿಡ್ ಲಾಕ್‌ಡೌನ್ ವೇಳೆ ಬಂದ್ ಆಗಿದ್ದ ಪಿಲಿಕುಳಕ್ಕೆ ಕಳೆದ ಒಂದೆರಡು ತಿಂಗಳಿನಿಂದ ಆಗಮಿಸುವ ಸಂದರ್ಶಕರ ಸಂಖ್ಯೆ ಹೆಚ್ಚುತ್ತಿದೆ. ಈಗ ಮತ್ತೆ ಬಂದ್ ಮಾಡುವ ಇರಾದೆಯಿಲ್ಲ. ಆದರೆ ಹೊರಗಿನಿಂದ ಜೈವಿಕ ಉದ್ಯಾನ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರಿಂದ ಸೋಂಕು ಹರಡದಂತೆ ಅವರ ‘ಫುಟ್ ಡಿಪ್’ ಮಾಡುವ ಮೂಲಕ ಸೋಂಕು ಮುಕ್ತಗೊಳಿಸಲಾಗುತ್ತದೆ.
    ಪ್ರವಾಸಿಗರು ಗೇಟ್ ಮೂಲಕ ಒಳಗೆ ಬರುವಲ್ಲಿಯೇ ರಾಸಾಯನಿಕ ದ್ರಾವಣ ತುಂಬಿರುವ ಟ್ರೇ ಇರಿಸಲಾಗುತ್ತಿದ್ದು, ಬರುವವರು ಕಾಲನ್ನು ಅದರಲ್ಲಿ ಮುಳುಗಿಸಿ ಬರಬೇಕಾಗುತ್ತದೆ, ಇದರಿಂದ ಕಾಲಿನ ಮೂಲಕ ವೈರಸ್ ಪ್ರವೇಶಿಸದಂತೆ ನಿಯಂತ್ರಿಸಲಾಗುತ್ತದೆ.

    ಮೃಗಾಲಯದ ಯಾವುದೇ ಭಾಗದಲ್ಲಿ ಹಕ್ಕಿಗಳು ಸತ್ತು ಬಿದ್ದಿರುವುದು ಕಂಡು ಬಂದರೆ ತಕ್ಷಣ ವರದಿ ಮಾಡುವಂತೆ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಅಲ್ಲದೆ ಹಕ್ಕಿಗಳಿಗೆ ಹಾಕುವ ಆಹಾರ ಹೊರಗೆ ಚೆಲ್ಲದಂತೆ ಎಚ್ಚರವಹಿಸಲಾಗುತ್ತಿದೆ. ಇದರಿಂದ ಹೊರಗಿನಿಂದ ಬರುವ ಕಾಗೆ ಮತ್ತಿತರ ಪಕ್ಷಿಗಳನ್ನೂ ನಿಯಂತ್ರಿಸಬಹುದು.
    ಎಚ್.ಜೆ.ಭಂಡಾರಿ, ಪಿಲಿಕುಳ ಝೂ ನಿರ್ದೇಶಕರು

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts